ಮೇ ತಿಂಗಳ ಎರಡನೆಯ ಭಾನುವಾರ ವಿಶ್ವ ತಾಯಂದಿರ ದಿನ. ಅವತ್ತು ನಮಗೆ ತಿಳಿದಿರುವ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ತಾಯಿಯೊಂದಿಗೆ ನಮ್ಮ ಭಾವಚಿತ್ರಗಳನ್ನು ಹಾಕಿ ಅಮೋಘ ತಾಯಿ ಪ್ರೀತಿ, ಪ್ರೇಮ ತೋರಿಸುವ ನಮಗೆ. ಆಟೋದಲ್ಲಿ ಹೆಣ ಸಾಗಿಸುವಾಗ ಎಲ್ಲಿತ್ತು ನಮ್ಮ ಮಾತೃತ್ವ.ಕೇವಲ ಮೇ ತಿಂಗಳ ಎರಡನೇ ಭಾನುವಾರಕ್ಕೆ ಮಾತ್ರ ಸೀಮಿತವಾ?ಉಳಿದ ದಿನಗಳಲ್ಲಿ ನಮ್ಮ ತಾಯಿ ಅನಾಥಾಶ್ರಮದಲ್ಲಿರೇ ಸಾಕು.ಏಕೆಂದರೆ ವಯಸ್ಸಾದಂತೆ ಅವರ ಬುದ್ಧಿ ನಮಗೆ ಸರಿ ಹೋಗುವುದಿಲ್ಲ. ನಮ್ಮ ಭಾವನೆಗಳಿಗೆ ಸ್ಪಂದಿಸುವುದಿಲ್ಲ ಅಲ್ಲವೇ?ಒಂದು ವಿಷಯವನ್ನು ಸುಮಾರು ಬಾರಿ ಹೇಳಬೇಕು ಅಲ್ಲವೇ? ಒಂದು ಕ್ಷಣ ಯೋಚಿಸಿ ನೋಡಿ ನಾವು ಚಿಕ್ಕವರಿದ್ದಾಗ ಎಷ್ಟು ಸಾರಿ ಕೇಳಿಲ್ಲ ಒಂದೇ ವಿಷಯವನ್ನು.ಅದೆಷ್ಟು ಸಾರಿ ಹೇಳಿಲ್ಲ ಅಮ್ಮ ನಮಗೆ. ನಾವೀಗ ದೊಡ್ಡವರು. ಅವರು ಎರಡು ಮೂರು ಸಾರಿ ಕೇಳುವುದು ಹಿಂಸೆಯಾಗುತ್ತದೆ ಅಲ್ಲವೇ?
ಆಟೋದಲ್ಲಿದ್ದವಳು ನಮ್ಮ ತಾಯಿಯಾಗಿದ್ದರೆ,ನಾವು ನಮ್ಮ ಪ್ರತಿಕ್ರಿಯೆ ಹೇಗಿರುತ್ತಿತ್ತು.ಕರುಳು ಬಾಯಿಗೆ ಬಂದಿತಲ್ಲವೇ?ಏಕೆಂದರೆ ನಮ್ಮ ತಾಯಿ ತುಂಬ ಸುರಕ್ಷಿತವಾಗಿದ್ದಾಳೆ.ಹಾಗಾದರೆ ಅವಳು ತಾಯಿಯಲ್ಲವೇ? ಇತರರ ತಾಯಿಯಲ್ಲಿ ನಮ್ಮ ತಾಯಿಯನ್ನು ಕಾಣುವವನು ಮನುಷ್ಯನಾಗುತ್ತಾನೆ.ಮಾಧ್ಯಮಗಳಲ್ಲಿ ಬಿತ್ತರಗೊಳ್ಳುವ ಸುದ್ದಿಯನ್ನು ನೋಡಿ ಎರಡು ಹನಿ ಕಣ್ಣೀರು ಹಾಕಿದ ಕಣ್ಣುಗಳೆಷ್ಟು?ಒಮ್ಮೆ ಯೋಚಿಸಿ ಕೇವಲ ಒಂದು ದಿನ ತಾಯಿಯನ್ನು ಹಾಡಿ ಹೊಗಳಿದರೆ ಸಾಲದು. ಜನನಿ ಜನ್ಮ ಭೂಮಿ ಸ್ವರ್ಗಾದಪಿ ಗರಿಯಸಿ ಎಂದರೆ “ತಾಯಿ ಮತ್ತು ತಾಯ್ನೆಲ ಸ್ವರ್ಗಕ್ಕಿಂತಲೂ ಮಿಗಿಲು” ಎಂದು ಘಂಟಾಘೋಷವಾಗಿ ಹೇಳಿ ತಾಯಿಯನ್ನು ಮೂಲೆ ಗುಂಪು ಮಾಡುತ್ರಿದ್ದೇವೆ.ತಾಯಿ ಮತ್ತು ತಾಯಿಯ ಆಸೆ ಆಕಾಂಕ್ಷೆಗಳನ್ನು ಹಾಳು ಮಾಡಿ ತಾಯಿಯನ್ನು ಮರೆತು ಹೋಗಿದ್ದೇವೆ.
ಕನ್ನಡದ ಖ್ಯಾತ ಸಾಹಿತಿ ಶ್ರೀ ಜೋಗಿಯವರು ತಮ್ಮ ಒಂದು ಪುಸ್ತಕದಲ್ಲಿ “ತಂದೆ ತಾಯಿಯರನ್ನು ಪೂಜಿಸಬೇಡಿ,ಗೌರವಿಸಿ” ಎನ್ನುತ್ತಾರೆ. ಕಾರಣ ನಾವು ಅವರನ್ನು ಪೂಜಿಸುವುದಕ್ಕಿಂತ ಗೌರವಿಸಿದರೆ ಸಾಕು.ತಾಯಿಯನ್ನು ತಾಯಿಯಂತೆ ನೋಡೋಣ. ಕೇವಲ ಅದೊಂದು ದಿನಕ್ಕೆ ಸೀಮಿತಗೊಳಿಸದೆ,ನಿತ್ಯ ಗೌರವಿಸುವಂತಾಗಲಿ.ಮಾಧ್ಯಮಗಳಲ್ಲಿ ಬಿತ್ತರಿಸುವ ಬಿಸಿ ಬಿಸಿ ಸುದ್ದಿ ಎಂದು ಪ್ರಚಾರ ಮಾಡಲು ಒಂದು ಅವಕಾಶ ನೀಡುತ್ತದೆ. ಹಾಗಾದರೆ ಒಬ್ಬ ತಾಯಿಯ ಹೆಣವನ್ನು ಆಟೋದಲ್ಲಿ ಅಥವಾ ಇತರೆ ದ್ವಿ ಚಕ್ರ ವಾಹನಗಳಲ್ಲಿ ಕೊಂಡೊಯ್ಯುವುದು,ಒಂದು ದಿನದ ಮಹಾ ಸುದ್ದಿಯಲ್ಲವೇ?ಹಾಗಾದರೆ ಅಲ್ಲಿರುವ ಶವ ನಮ್ಮ ತಾಯಿಯದಾಗಿದ್ದರೆ,ಅವರ ಸ್ಥಾನದಲ್ಲಿ ನಾವಿದ್ದಿದ್ದರೆ,ನಮ್ಮನ್ನೆ ದಿನವಿಡೀ ತೋರಿಸುತ್ತಿದ್ದರೆ ನಾವು ಹೇಗೆ ಪ್ರತಿಕ್ರಿಯಿಸುತ್ತಿದ್ದೆವು.ಇದಕ್ಕೆ ಉತ್ತರವಿಲ್ಲ.ಮನೆಯಲ್ಲಿ ತಾಯಿಯಿದ್ದಾಗ ತಾತ್ಸಾರ ಮಣ್ಣು ಸೇರಿದ ಮೇಲೆ ಸಾಕ್ಷಾತ್ಕಾರ ಎನ್ನುವ ಮೂರ್ಖರು ನಾವು. ಒಬ್ಬ ಕವಿ ಹೇಳುತ್ತಾನೆ,”ದೇವರನ್ನು ಪೂಜಿಸಿದರೆ ತಾಯಿ ಬರುವುದಿಲ್ಲ. ತಾಯಿಯನ್ನು ಪೂಜಿಸು ದೇವರೇ ಬರುತ್ತಾನೆ ” ಈ ಮಾತು ಸಾರ್ಥಕ ಎನಿಸುತ್ತದೆ.
ಆಟೋದಲ್ಲಿದ್ದ ತಾಯಿ ಇನ್ನೆಂದೂ ತಿರುಗಿ ಬರುವುದಿಲ್ಲ. ಈ ಸತ್ಯ ನಮಗೆ ಗೊತ್ತು.ಆದರೆ ನಾವು ದೊಡ್ಡವರಾದಂತೆ ಏಕೀ ತಾತ್ಸಾರ ಮನೋಭಾವ. ಕವಿವಾಣಿ ಹತ್ತು ದೇವರನ್ನು ಪೂಜಿಸುವುದಕ್ಕಿಂತ ಹೆತ್ತ ತಾಯಿಯನ್ನು ಪೂಜಿಸು ಮನೋಜ್ಞವಾಗಿದೆ.ನಾವೆಲ್ಲ ಆಧುನಿಕ ಭರಾಟೆಯಲ್ಲಿ ನಮ್ಮತನವನ್ನು ಕಳೆದುಕೊಂಡು ಅಧೋಗತಿಗೆ ಬಂದು ನಿಂತಿದ್ದೇವೆ.ಒಮ್ಮೆ ಯೋಚಿಸಿ ನೋಡಿದಾಗ ನಾವು ಮುಂದೊಂದು ದಿನ ಅಪ್ಪ ಅಮ್ಮ ಆಗುವ ಕಾಲವಿದೆ.ಆಗ ನಮ್ಮ ಮಕ್ಕಳು ನಮ್ಮನ್ನು ಹೀಗೆ ನೋಡುತ್ತಾರೆ. ಅವರಿಗೊಂದು ಸಂಸ್ಕಾರ ನೀಡಲು ಅಮ್ಮ ಬೇಕಿತ್ತು ಎನಿಸುತ್ತದೆ.ಜಾನಪದ ಗಾದೆ ಮಾತು ಒಲೆಗೊಂದು ಸೌದೆ ಕೊರಡು,ಮನೆಗೊಂದು ಮುದಿ ಕೊರಡು ಚಂದ ಎರಡು ಬೇಕು. ಏಕೆಂದರೆ ಒಲೆ ಉರಿಯಲು ಸೌದೆ ಬೇಕು. ಮನೆ ಚೆನ್ನಾಗಿರಲು ತಾಯಿ ಬೇಕು.ಅಪ್ಪ ಸತ್ತು ಅಮ್ಮ ಇರಬೇಕು.ಹಿರಿಯರ ಅನುಭವದ ಮಾತು. ತಾಯಿದ್ರೆ ಬಾಯಿ.ಅಂತಹ ತಾಯಿಯನ್ನು ಕಳೆದುಕೊಂಡ ಆ ಮನಸ್ಸು ಆಟೋದಲ್ಲಿ ಕರೆದುಕೊಂಡು ಹೋಯಿತು ಎಂದಾಗ ಎಷ್ಟು ಘಾಸಿಯಾಯಿತು.ಸಮಾಜದಲ್ಲಿ ಕೆಟ್ಟ ಅಪ್ಪ ಸಿಗುತ್ತಾನೆ. ಆದರೆ ಕೆಟ್ಟ ತಾಯಿ ಯಾವತ್ತಿಗೂ ಸಿಗಲಾರಳು. ….. .
ಶ್ರೀ ಇಂಗಳಗಿ ದಾವಲಮಲೀಕ.
ಶಿಕ್ಷಕ ಸಾಹಿತಿಗಳು ಹತ್ತಿಮತ್ತೂರು.