ಶಿವಮೊಗ್ಗ: ಗೌರಿ ಲಂಕೇಶ್ ಹಂತಕರಿಗೆ ಸನ್ಮಾನ ಮಾಡಿರುವ ವ್ಯಕ್ತಿಗಳ ಮೇಲೆ ಕೊಲೆ ಪ್ರಚೋದನೆಯಡಿ ಕೇಸ್ ದಾಖಲಿಸಬೇಕು ಎಂದು ಆಗ್ರಹಿಸಿ ಗೌರಿ ಸ್ಮಾರಕ ಟ್ರಸ್ಟ್ ಹಾಗೂ ಗೌರಿ ಬಳಗದ ಸದಸ್ಯರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ನಂತರ ಜಿಲ್ಲಾಧಿಕಾರಿಗಳ ಮೂಲಕ ಗೃಹಸಚಿವರಿಗೆ ಮನವಿ ಸಲ್ಲಿಸಿದರು.
ಅತ್ಯಾಚಾರಿಗಳಿಗೆ, ಕೊಲೆ ಪಾತಕರಿಗೆ ಗುಜರಾತ್ ಮತ್ತು ಉತ್ತರ ಪ್ರದೇಶದಲ್ಲಿ ಸನ್ಮಾನ ಮಾಡಿದ್ದನ್ನು ನಾವು ಕಂಡಿದ್ದೇವೆ. ಆದರೆ ನಮ್ಮ ರಾಜ್ಯದಲ್ಲಿಯೂ ಕೂಡ ಕರ್ನಾಟಕದ ಹೆಮ್ಮೆ ದನಿಯಾಗಿದ್ದ ಗೌರಿ ಲಂಕೇಶ್ ಅವರನ್ನು ಕೊಲೆಗೈದ ಆರೋಪಿಗಳನ್ನು ಸನ್ಮಾನ ಮಾಡುತ್ತಿರುವುದು ಅತ್ಯಂತ ಖಂಡನೀಯವಾಗಿದೆ. ಇದು ಮಾನವೀಯ ಮೌಲ್ಯಗಳಿಗೆ ಕಳಂಕ ತರುವಂತಹದ್ದಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಇದರ ಜೊತೆಗೆ ಗೌರಿ ಹಂತಕ ಶ್ರೀಕಾಂತ್ ಹೊಂಗರ‍್ಕರ್ ಜಾಮೀನಿನ ಮೇಲೆ ಹೊರಬಂದ ಕೂಡಲೇ ಮಹಾರಾಷ್ಟçದ ಚುನಾವಣೆಯಲ್ಲಿ ಸಕ್ರಿಯ ಪಾತ್ರ ನಿರ್ವಹಿಸುತ್ತಿರುವುದು ಖಂಡನೀಯವಾಗಿದೆ. ಆದ್ದರಿಂದ ಗೌರಿ ಹಂತಕರಿಗೆ ಸನ್ಮಾನ ಮಾಡಿರುವ ವ್ಯಕ್ತಿಗಳನ್ನು ಕೊಲೆ ಪ್ರಚೋದನೆಯಡಿ ಬಂಧಿಸಬೇಕು. ಹಿಂಸೆ ಮತ್ತು ದ್ವೇಷಕ್ಕೆ ಪ್ರಚೋದನೆ ನೀಡುತ್ತಿರುವ ಕೋಮುವಾದಿ ಸಂಘಟನೆಗಳ ಮೇಲೆ ಕ್ರಮ ಜರುಗಿಸಬೇಕು. ಗೌರಿ ಕೊಲೆಯ ವಿಚಾರಣೆ ತ್ವರಿತಗೊಳಿಸಿ ಹಂತಕರಿಗೆ ಶೀಘ್ರ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಪ್ರತಿಭಟನೆಯಲ್ಲಿ ಗೌರಿ ಬಳಗದ ಕೆ.ಎಲ್. ಅಶೋಕ್, ಬಿ. ಚಂದ್ರೇಗೌಡ, ಕೆ. ರಾಘವೇಂದ್ರ, ಟೆಲೆಕ್ಸ್ ರವಿಕುಮಾರ್, ಹಾಲೇಶಪ್ಪ, ಜಗದೀಶ್, ಶೃಂಗೇಶ್, ದೇಶಾದ್ರಿ ಹೊಸ್ಮನೆ, ಕೆ.ಪಿ. ಶ್ರೀಪಾಲ್ ಮೊದಲಾವರಿದ್ದರು.