ಶಿವಮೊಗ್ಗ, ಮೇ 06
ರಾಜ್ಯ ಬಿಜೆಪಿ ಸರ್ಕಾರದಲ್ಲಿ ನಡೆಯುತ್ತಿರುವ ವ್ಯಾಪಕ ಭ್ರಷ್ಟಾಚಾರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮೇ ೧೦ರಂದು ಶಿವಮೊಗ್ಗದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಬೃಹತ್ ಪ್ರತಿಭಟನಾ ರ‍್ಯಾಲಿ ಹಾಗೂ ಬಹಿರಂಗ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಂಸದ ಧ್ರುವನಾರಾಯಣ್ ತಿಳಿಸಿದರು.


ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಜಾಗೃತಿ ಮೂಡಿಸಲು ಈಗಾಗಲೇ ಕೆಪಿಸಿಸಿ ವತಿಯಿಂದ ೯ ತಂಡಗಳನ್ನು ರಚಿಸಿ, ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿದ್ದು, ಕೊನೆಯದಾಗಿ ಶಿವಮೊಗ್ಗದಲ್ಲಿ ರ್ಯಾಲಿ ನಡೆಸಲಾಗುತ್ತಿದೆ ಎಂದರು.
ಮೇ ೧೦ರಂದು ಬೆಳಿಗ್ಗೆ ೧೧ ಗಂಟೆಗೆ ಅಶೋಕ ವೃತ್ತದಿಂದ ಪ್ರತಿಭಟನಾ ರ್ಯಾಲಿ ಆರಂಭವಾಗಿ ಬಿ.ಹೆಚ್.ರಸ್ತೆ, ನೆಹರೂ ರಸ್ತೆ, ಗೋಪಿ ವೃತ್ತದ ಮೂಲಕ ಬಾಲರಾಜ್ ಅರಸ್ ರಸ್ತೆಯಲ್ಲಿರುವ ಭೋವಿ ಸಮು ದಾಯ ಭವನ ತಲುಪಲಿದೆ. ನಂತರ ಅಲ್ಲಿ ಬಹಿರಂಗ ಸಭೆ ನಡೆಯಲಿದ್ದು, ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಮುಖಂಡರು ಭಾಗವಹಿಸಲಿ ದ್ದಾರೆ ಎಂದರು.


ಕಾಮಗಾರಿಗಳಲ್ಲಿ ಶೇ. ೪೦ರಷ್ಟು ಕಮಿಷನ್ ಪಡೆಯುವುದನ್ನು ಸರ್ಕಾರ ನಿಯಂತ್ರಿಸುತ್ತಿಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಚಿವ ಕೆ.ಎಸ್.ಈಶ್ವರಪ್ಪ ಅವರ ತಲೆದಂಡವಾಗಿದೆ. ಪಿಎಸ್‌ಐ ನೇಮಕಾತಿಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದ್ದು, ಸದನದಲ್ಲಿ ಸರ್ಕಾರ ಯಾವುದೇ ಅಕ್ರಮ ನಡೆದಿಲ್ಲ ಎಂದು ಹೇಳಿತ್ತು. ಆದರೆ, ದಿನದಿಂದ ದಿನಕ್ಕೆ ಈ ಹಗರಣ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಇದು ರಾಜ್ಯದಲ್ಲಿ ನಡೆದ ದೊಡ್ಡ ಹಗರಣವಾಗಿದೆ. ಇಂತಹ ಹಗರಣವನ್ನು ಸಿಐಡಿ ತನಿಖೆ ವಹಿಸಲಾಗಿದೆ. ಆದರೆ, ಈ ಹಗರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸುತ್ತಿದೆ ಎಂದರು.


ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ಮಾಜಿ ಶಾಸಕರಾದ ಆರ್. ಪ್ರಸನ್ನಕುಮಾರ್, ಬೇಳೂರು ಗೋಪಾಲಕೃಷ್ಣ, ಪ್ರಮುಖ ರಾದ ಆರ್. ಎಂ. ಮಂಜುನಾಥಗೌಡ, ಶಾಂತವೀರಪ್ಪ ಗೌಡ, ಇಸ್ಮಾಯಿಲ್ ಖಾನ್, ಬಲದೇವ ಕೃಷ್ಣ, ಡಾ. ಶ್ರೀನಿವಾಸ್ ಕರಿಯಣ್ಣ, ಎಸ್.ಪಿ. ಶೇಷಾದ್ರಿ, ಸಿ.ಎಸ್. ಚಂದ್ರಭೂಪಾಲ್, ವಿಶ್ವನಾಥ್ ಕಾಶಿ, ಕಲಗೋಡು ರತ್ನಾಕರ್, ವಿಜಯಲಕ್ಷ್ಮೀ ಪಾಟೀಲ್, ಎಂ. ಚಂದನ್, ವೈ.ಹೆಚ್. ನಾಗರಾಜ್. ಹೆಚ್.ಪಿ. ಗಿರೀಶ್ ಇನ್ನಿತರರು ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!