ಶಿವಮೊಗ್ಗ: ಇಂದಿನ ವೇಗದ ಜೀವನದಲ್ಲಿ ಮಾನಸಿಕ ಒತ್ತಡವು ಸಾಮಾನ್ಯ ಸಮಸ್ಯೆಯಾಗಿದ್ದು, ಒತ್ತಡದ ನಿರ್ವಹಣೆಗೆ ಕ್ರೀಡೆ ಸಹಕಾರಿಯಾಗಿದ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಅಭಿಪ್ರಾಯಪಟ್ಟರು.
ನಗರದ ರಾಷ್ಟ್ರೀಯ ಔಷಧ ಮಹಾವಿದ್ಯಾಲಯದ ವತಿಯಿಂದ ಗುರುವಾರ ನೆಹರು ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಕ್ರೀಡೋತ್ಸವ-2026 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕ್ರೀಡೆಯು ವಿದ್ಯಾರ್ಥಿಗಳ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಉತ್ತಮಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಸ್ಪರ್ಧೆಗಳಲ್ಲಿ ಕ್ರೀಡಾಸ್ಫೂರ್ತಿಯೊಂದಿಗಿನ ಭಾಗವಹಿಸುವಿಕೆಯು, ನಮ್ಮಲ್ಲಿ ಶಿಸ್ತು, ಸಹಕಾರ ಮತ್ತು ಆತ್ಮವಿಶ್ವಾಸದಂತಹ ಉತ್ತಮ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಸಹಕಾರಿಯಾಗಿದೆ ಎಂದು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ.ಎಸ್.ಎನ್.ಶ್ರೀಹರ್ಷ ಮಾತನಾಡಿ, ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೇಹ ಚುರುಕಾಗುತ್ತದೆ ಮತ್ತು ಮನಸ್ಸು ಹರ್ಷಿತವಾಗುತ್ತದೆ. ಭಾರತದ ಕ್ರೀಡಾ ತಾರೆ ನೀರಜ್ ಚೋಪ್ರಾ ರಂತಹ ಕ್ರೀಡಾ ವೀರರ ಸಾಧನೆಗಳು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿವೆ. ಕ್ರೀಡೆಗಳು ವ್ಯಕ್ತಿಯಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ. ತಂಡದಲ್ಲಿ ಆಟವಾಡುವುದರಿಂದ ಸಹಕಾರ ಮನೋಭಾವ ಬೆಳೆಯುತ್ತವೆ. ಇದರ ಮೂಲಕ ವ್ಯಕ್ತಿಯ ವ್ಯಕ್ತಿತ್ವವೂ ಉತ್ತಮವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ದಿನನಿತ್ಯ ಸ್ವಲ್ಪ ಸಮಯವನ್ನು ಕ್ರೀಡೆಗಳಿಗೆ ಮೀಸಲಿಡಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕ್ರೀಡಾ ಸಂಯೋಜಕ ಡಾ. ಅನಿಲ್ ಕುಮಾರ್ ಎಸ್.ಎಂ. ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.