ಗಜೇಂದ್ರ ಸ್ವಾಮಿ
ಶಿವಮೊಗ್ಗ, ಮಾ.17:
ಜಿಲ್ಲೆಯ ಕಾನೂನು ಸುವ್ಯವಸ್ಥೆಗೋಸ್ಕರ 144 ಸೆಕ್ಷನ್ ಜಾರಿಯಾಗಿ ನಿಷೇದಾಜ್ಣೆ ಇದ್ದರೂ ಸಹ ಜನರ ಬದುಕಿನ ನಿತ್ಯ ಕಾಯಕಗಳಿಗೆ, ದುಡಿಮೆಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಂಡ ವಿಚಾರದಲ್ಲಿ ಶಿವಮೊಗ್ಗ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಹಾಗೂ ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀಪ್ರಸಾದ್ ಅವರ ಕಾರ್ಯ ಕ್ಷಮತೆ ಸಾರ್ವಜನಿಕ ಪ್ರಶಂಸೆಗೆ ಪಾತ್ರವಾಗಿದೆ.
ಕಳೆದ ಎರಡು ದಿನದ ಹಿಂದಿನ ದಿನಾವಳಿ, ನಿತ್ಯದ ಬದುಕು ಹಾಗೂ ಜನಜೀವನ ಗಮನಿಸಿದಾಗ ಜಿಲ್ಲೆಯ ವ್ಯವಸ್ಥೆ ಅವಲೋಕಿಸಿದಾಗ ಈ ಅಧಿಕಾರಿಗಳು ಕೈಗೊಂಡ ಕ್ರಮಗಳು ಹಾಗೂ ನಿಷೇದಾಜ್ಣೆ ಹೆಸರಿನಲ್ಲಿ ಯಾವುದೇ ಕಿರಿಕಿರಿ ಮಾಡದ ಪೊಲೀಸರ ವರ್ತನೆ ನಿಜಕ್ಕೂ ಸ್ತುತ್ಯಾರ್ಹವಾಗಿತ್ತು.
ಮೊದಲಿನ ದಿನಗಳಿಗೂ ಹಾಗೂ ಈಗ ಕಳೆದ ಎರಡುದಿನಗಳಿಗೂ ಹೋಲಿಕೆ ಮಾಡಿ ನೋಡಿದರೆ ಜಿಲ್ಲಾ ವ್ಯವಸ್ಥೆ ಜವಾಬ್ದಾರಿ ಹೊತ್ತ ಈ ಅಧಿಕಾರಿಗಳ ಮಾನವೀಯ ಮೌಲ್ಯಗಳ ಕಾರ್ಯಕ್ರಮಗಳಿಲ್ಲಿ ವಿಶೇಷವೆನಿಸಿವೆ.
ಅಂದಿನ ದುಡಿಮೆ ನಂಬಿ ಬದುಕುವ ಅದೆಷ್ಟೋ ಜನರಿಗೆ ಈ ಎರಡು ದಿನ ನಿಷೇದಾಜ್ಣೆ ಯಾವುದೇ ತೊಂದರೆ ನೀಡಿಲ್ಲ. ಜನ ಶಾಂತವಾಗಿ ತಮ್ಮ ತಮ್ಮ ಕರ್ತವ್ಯದೊಳಗಿದ್ದರೆ ನಮ್ಮಿಂದ ಯಾವುದೆ ತೊಂದರೆ ಇಲ್ಲ ಎಂಬಂತೆ ಪೊಲೀಸರು ಕೇವಲ ನಿಗಾವಹಿಸುವಿಕೆಗೆ ಮಾತ್ರ ಸೀಮಿತವಾಗಿದ್ದರ ಹಿಂದೆ ಜಿಲ್ಲೆಯ ಈ ಅಧಿಕಾರಿಗಳಿಬ್ಬರು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಲ್. ವೈಶಾಲಿ ಅವರು ರಕ್ಷಣಾ ವ್ಯವಸ್ಥೆಯ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಸೂಚನೆ ನೀಡಿದ್ದೇ ಕಾರಣವೆನ್ನಲಾಗಿದೆ.
ಕಳೆದ ಎರಡು ವರುಷ ಕರಾಳ ಕೊರೊನಾ ಮಾರಿಯಿಂದ ಬದುಕು ಕಳೆದುಕೊಂಡು ಹೊಸತನದ ಕನಸು ಕಾಣುವಷ್ಟರಲ್ಲಿ ಮತ್ತೆ ಕಾಡಿದ ಈ ಕಿರಿಕ್ ನಿಂದ ಬೇಸತ್ತಿದ್ದ ಜನರ ಮನದಾಳ ಅರಿತ ಜಿಲ್ಲೆಯ ಈ ಅಧಿಕಾರಿಗಳ ಕ್ರಮ ಜನರ ಶಾಂತ ಬದುಕಿಗೆ ಸ್ಪೂರ್ತಿ ಆಗಿದ್ದಂತೂ ಸತ್ಯ.
ನೀವೆಲ್ಲಾ ಶಾಂತವಾಗಿ ನಿಮ್ಮ ಬದುಕ ಕರ್ತವ್ಯದಲ್ಲಿ ಇದ್ದರೆ ನಮ್ಮಿಂದ ಯಾವುದೇ ತೊಂದರೆ ಇಲ್ಲ ಎಂಬಂತೆ ಸಂದೇಶ ಸಾರಿ, ಭದ್ರತೆಯ ಬದುಕು ಕಟ್ಟಿಕೊಟ್ಟ ಡಿಸಿ, ಎಸ್ಪಿ ಹಾಗೂ ಸಿಇಓ ಅವರ ನೇತೃತ್ವದ ಜಿಲ್ಲಾಡಳಿತದ ತಂಡಕ್ಕೆ ಮುಕ್ತ ಪ್ರಶಂಸೆ ವ್ಯಕ್ತವಾಗಿದೆ.
ಶಿವಮೊಗ್ಗ ಜಿಲ್ಲೆಯ ಜನತೆ ಶಾಂತಿಪ್ರಿಯರೆಂಬುದನ್ನು ಈಗ ಸಾರ್ವಜನಿಕರೇ ಸಾರಬೇಕಿದೆ. ಜಿಲ್ಲಾಡಳಿತದ ಈ ಶಾಂತಿಯ ಭದ್ರತೆಗೆ ಕೈಜೋಡಿಸಬೇಕಿದೆ.