ಶಿವಮೊಗ್ಗ:
ಸಪ್ತಸ್ವರ ಸಂಗೀತ ಸಭಾದಿಂದ ಭಾರತರತ್ನ ಪಂ. ಭೀಮಸೇನ ಜೋಶಿ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಮಾ. 6 ರಂದು ಸಂಜೆ 6 ಗಂಟೆಗೆ ನಗರದ ಕುವೆಂಪು ರಂಗಮಂದಿರದಲ್ಲಿ 78 ನೇ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮದಲ್ಲಿ ಪಂ. ಕೃಷ್ಣೇಂದ್ರ ವಾಡಿಕರ್ ಹಾಗೂ ಸಂಗಡಿಗರಿಂದ ಸಂತವಾಣಿ ಮತ್ತು ದಾಸವಾಣಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಗೀತ ಸಭಾದ ಗೌರವಾಧ್ಯಕ್ಷ ಭಾಸ್ಕರ್ ಜಿ. ಕಾಮತ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಪ್ತಸ್ವರ ಸಂಗೀತ ಸಭಾವು ಪ್ರತಿಬಾರಿ ಹಿಂದೂಸ್ತಾನಿ ಸಂಗೀತ ಕಾರ್ಯಕ್ರಮ ಆಯೋಜಿಸುತ್ತಿತ್ತು. ಆದರೆ, ಈ ಬಾರಿ ಸಂತವಾಣಿ ಮತ್ತು ದಾಸವಾಣಿ ಕಾರ್ಯಕ್ರಮ ಆಯೋಜಿಸಿದೆ. ಖ್ಯಾತ ಹಿಂದೂಸ್ತಾನಿ ಗಾಯಕ ಕೃಷ್ಣೇಂದ್ರ ವಾಡಿಕರ್ ಈ ಕಾರ್ಯಕ್ರಮ ನಡೆಸಿಕೊಡುವರು. ಇವರ ಜೊತೆಗೆ ರೇಖಾಅರುಣ ಹಂಪಿಹೊಳಿ ಹಾರ್ಮೋನಿಯಂ, ಜಗದೀಶ್ ಕುರ್ತಕೋಟಿ ತಬಲಾ, ಪ್ರಮೋದ್ ಶಾಮ್ ಆನೂರ್ ಅವರು ಪಖವಾಜ್, ಸುಧೀಂದ್ರ ಆಚಾರ್ ತಾಳದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಕೃಷ್ಣೇಂದ್ರ ವಾಡಿಕರ್ ಭೀಮಸೇನ್ ಜೋಶಿ ಅವರ ರೀತಿಯಲ್ಲೇ ಹಾಡುತ್ತಾರೆ ಎಂಬ ಮಾತಿದೆ. ಅನೇಕ ಸಂಗೀತ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸಿದ್ದಾರೆ. ಸಂಗೀತ ಪ್ರಕಾರವಾದ ಕಿರಾಣ –ಘರಾಣದಲ್ಲಿ ಪ್ರತಿಭೆ ಸಾಧಿಸಿದ್ದಾರೆ. ಶ್ರೀಪತಿ ಪಾಡಿಗಾರ್ ಅವರ ಶಿಷ್ಯರಾಗಿರುವ ಇವರು ಭರವಸೆಯ ಗಾಯಕರಾಗಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಗೀತಸಭಾದ ಅಧ್ಯಕ್ಷ ಅರುಣ ಹಂಪಿಹೊಳಿ, ಕಾರ್ಯದರ್ಶಿ ಕೆ.ಜಿ. ಕುಮಾರಶಾಸ್ತ್ರಿ, ಆರ್. ಅಚ್ಯುತರಾವ್, ಎನ್.ಹೆಚ್. ದೇವಕುಮಾರ್, ವಿವೇಕಾನಂದ ನಾಯಕ್, ವಿನೋದ್ ಪೈ ಇದ್ದರು.