ಶಿವಮೊಗ್ಗ: ಕಲಿಕೆಯ ಹಂತದಲ್ಲೇ ಶಾಲೆಯ ಸಮವಸ್ತ್ರ, ಹಿಜಾಬ್-ಕೇಸರಿ ರಗಳೆ ಶಿವಮೊಗ್ಗ ನಗರದಲ್ಲಿ ಮಕ್ಕಳ ನಡುವೆ ಅದರಲ್ಲೂ ಕಾಲೇಜು ಹುಡುಗರ ನಡುವೆ ಬಹುದೊಡ್ಡ ಗಂಡಾಂತರ ಸೃಷ್ಠಿಮಾಡಿದೆ.
ಶಿವಮೊಗ್ಗ ಮೀನಾಕ್ಷಿ ಭವನ್ ಬಳಿಯ ಕಾಲೇಜಿನಲ್ಲಿ ಸಮವಸ್ತ್ರ ಧರಿಸದೇ ಬಂದವರನ್ನು ಒಳಗೆ ಬಿಡದ ಹಿನ್ನೆಲೆಯಲ್ಲಿ ಆರಂಭವಾದ ಈ ಗಲಾಟೆ ಅಣ್ಣ-ತಮ್ಮಂದಿರಂತಿದ್ದ, ಸಹೋದರಿ, ಸಹೋದರಿಯರ ಬಾಂಧವ್ಯದಲ್ಲಿದ್ದ ಕಾಲೇಜು ಬಳಿ ವಿದ್ಯಾರ್ಥಿಗಳಲ್ಲಿ ಮಾರಾಮಾರಿ ಸೃಷ್ಠಿಸಿದ್ದು, ಜಿಲ್ಲಾಡಳಿತ ಹಾಗೂ ಜಿಲ್ಲಾ ರಕ್ಷಣಾಧಿಕಾರಿಗಳ ತಂಡ ಬಿಗಿಭದ್ರತೆ ರೂಪಿಸಲು ಹೊರಟಿದೆ.
ಕಾಲೇಜು ವಿದ್ಯಾರ್ಥಿಗಳ ಈ ಘೋಷಣೆಗಳ ಕೂಗು, ಜೈಕಾರ-ಧಿಕ್ಕಾರಗಳ ಕೇಕೆ ಹೊಡೆಯುವಿಕೆ ಯುವ ಮನಸ್ಸುಗಳಲ್ಲಿ ಅಕ್ರೋಶ ಸೃಷ್ಠಿಸಿದ್ದು, ಸುಳ್ಳೇನಲ್ಲಾ. ಕಲ್ಲು ತೂರಾಟಕ್ಕೆ ಕಿಡಿಗೇಡಿಗಳು ಮುಂದಾಗಿದ್ದು, ಪೊಲೀಸರು ಕಾಲೇಜಿಗೆ ರಜೆ ನೀಡಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸುವ ಹಿನ್ನೆಲೆಯಲ್ಲಿ ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಇಡೀ ಶಿವಮೊಗ್ಗ ಈಗ ಬೂದಿ ಮುಚ್ಚಿದ ಕೆಂಡದಂತಾಗಿದೆ.