ಶಿವಮೊಗ್ಗ: ಸಂವಿಧಾನಿಕ ಧಾರ್ಮಿಕ ಸ್ವಾತಂತ್ರ್ಯ ಧಮನಿಸುತ್ತಿರುವ ಕೋಮುವಾದಿ ಶಕ್ತಿಗಳ ವಿರುದ್ಧ ಹಾಗೂ ಹಿಜಾಬ್ ಧರಿಸಲು ಸರ್ಕಾರ ನಿಷೇಧಿಸಿರುವ ಆದೇಶವನ್ನು ಪುನರ್ ಪರಿಶೀಲಿಸುವಂತೆ ಆಗ್ರಹಿಸಿ ಶಿವಮೊಗ್ಗ ಮಹಿಳಾ ಒಕ್ಕೂಟದ ನೇತೃತ್ವದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಾಗೂ ಒಕ್ಕೂಟದ ಸದಸ್ಯರು ಇಂದು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆದು ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ದೇಶದ ಸಂವಿಧಾನವು ತಿಳಿಸಿರುವಂತೆ ಹಕ್ಕು ಮತ್ತು ಕರ್ತವ್ಯಗಳನ್ನು ಪಾಲನೆ ಮಾಡಿಕೊಂಡು ನಾವುಗಳು ಧಾರ್ಮಿಕ ಮತ್ತು ಶೈಕ್ಷಣಿಕ ಹಕ್ಕುಗಳನ್ನು ರೂಢಿಸಿಕೊಂಡು ಹಿಂದಿನಿಂದಲೂ ಅನುಸರಿಸಿಕೊಂಡು ನಮ್ಮ ಜೀವನವನ್ನು ಸಾಗಿಸಿಕೊಂಡು ಬರುತ್ತಿದ್ದು, ಅದರಂತೆ ಪ್ರತಿಯೊಬ್ಬರೂ ಶಿಕ್ಷಣವನ್ನು ಪಡೆಯುವ ಮೂಲಕ ದೇಶದ ಅಭಿವೃದ್ಧಿಯಲ್ಲಿ ಮತ್ತು ಜ್ಞಾನಾರ್ಜನೆ ಸಲುವಾಗಿ ಈ ಶಿಕ್ಷಣವನ್ನು ಅನುಸರಿಸಿಕೊಂಡು ಬರುತ್ತಿದ್ದೇವೆ ಎಂದು ಮನವಿಯಲ್ಲಿ ವಿದ್ಯಾರ್ಥಿನಿಯರು ತಿಳಿಸಿದ್ದಾರೆ.
ನಾವು ಹಿಜಾಬ್ ಮತ್ತು ಬುರ್ಖಾ ಧರಿಸುವ ಮೂಲಕ ಪ್ರತಿಯೊಬ್ಬ ಮುಸ್ಲಿಮರಿಗೆ ಮನೆಯಿಂದ ಆಚೆ ಹೋದಂತಹ ಸಂದರ್ಭದಲ್ಲಿ ಹಾಗೂ ವೃತ್ತಿ ಮಾಡುವ ಮತ್ತು ಶೈಕ್ಷಣಿಕವಾಗಿ ಕಲಿಯುವಂತಹ ಶಾಲೆ ಕಾಲೇಜ್ ಹಾಗೂ ಸಭೆ ಸಮಾರಂಭಗಳಲ್ಲಿ ಮತ್ತು ವಿವಾಹ ಸಂದರ್ಭದಲ್ಲಿ ಸಹ ಸಂಪ್ರದಾಯದಂತೆ ಹಾಗೂ ಇನ್ನೊಬ್ಬರ ಘನತೆ ಮತ್ತು ಗೌರವಕ್ಕೆ ಧಕ್ಕೆಯಾಗದಂತೆ ಮತ್ತು ಈ ನಮ್ಮ ಸಂವಿಧಾನದ ಕಾನೂನು ಅಡಿಯಲ್ಲಿ ಹೇಳಿದಂತಹ ಎಲ್ಲಾ ನಿಯಮಗಳನ್ನು ಪಾಲನೆ ಮಾಡಿಕೊಂಡು ಇದುವರೆಗೂ ಸಹ ಸಹಬಾಳ್ವೆಯಿಂದ ಶಾಲಾ-ಕಾಲೇಜುಗಳಲ್ಲಿ ಜ್ಞಾನಾರ್ಜನೆಯನ್ನು ಮಾಡಿಕೊಂಡು ಹೋಗುತ್ತಿದ್ದು ಅಲ್ಲಿ ಯಾವತ್ತು ಸಹ ನಮ್ಮನ್ನು ನಮ್ಮ ಸಹಪಾಠಿ ವಿದ್ಯಾರ್ಥಿಮಿತ್ರರು ನಾವುಗಳು ಧರಿಸುವಂತಹ ಹಿಜಾಬ್ ಮತ್ತು ಬುರ್ಖಾ ವಸ್ತ್ರ ಉಡುಪುಗಳ ಹಾಕುವ ಬಗ್ಗೆ ಎಲ್ಲಿಯೂ ವಿರೋಧವನ್ನು ವ್ಯಕ್ತಪಡಿಸುವುದಿಲ್ಲ ಎಂದು ತಿಳಿಸಿದ್ದಾರೆ.
ನಮ್ಮ ಬಗ್ಗೆ ಯಾವ ಶೈಕ್ಷಣಿಕ ಸಂಸ್ಥೆಗಳು ಮತ್ತು ಸರ್ಕಾರಿ ಶಾಲೆಗಳು ಹಾಗೂ ಅಧ್ಯಾಪಕರು ಸಹ ಈ ಬಗ್ಗೆ ಆರೋಪವನ್ನು ಸಹ ಮಾಡಿರುವುದಿಲ್ಲ ಏಕಾಏಕಿ ಕುಂದಾಪುರ ಮತ್ತು ಉಡುಪಿಯ ಕೆಲವೇ ಶಾಲೆಗಳಲ್ಲಿ ನಮ್ಮ ಅಕ್ಕ ತಂಗಿಯರು ಮತ್ತು ವಿದ್ಯಾರ್ಥಿಗಳು ಧರಿಸುವಂತಹ ಕೇವಲ ರಾಜಕೀಯ ಮತ್ತು ಕೆಲವೊಂದು ಕೋಮುವಾದ ಸಂಘಟನೆಗಳ ಪಿತೂರಿಯಿಂದ ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಈ ರೀತಿ ಗುರುತರ ಆರೋಪಗಳನ್ನು ಮಾಡುವುದರಿಂದ ಅವರ ವಿದ್ಯಾಭ್ಯಾಸದ ಮೇಲೆ ಮತ್ತು ಅವರ ಪೋಷಕರ ಮೇಲೆ ಹೆಚ್ಚಿನ ಒತ್ತಡ ಬೀಳುವ ಮೂಲಕ ಮುಂದಿನ ಶೈಕ್ಷಣಿಕ ಜೀವನವು ಮೊಟಕುಗೊಳ್ಳುತ್ತದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರವು ಮಾಡಿರುವಂತಹ ವಸ್ತ್ರಸಂಹಿತೆ ಆದೇಶದಲ್ಲಿ ಕೆಲವೊಂದು ಮಾರ್ಪಾಡುಗಳನ್ನು ಮಾಡಿ ಈ ಹಿಂದೆ ಮುಸ್ಲಿಂ ವಿದ್ಯಾರ್ಥಿನಿಯರು ಧರಿಸಿಕೊಂಡು ಬರುತ್ತಿದ್ದಂತಹ ಹಿಜಾಬ್ ಹಾಗೂ ಬುರ್ಖಾವನ್ನು ಧರಿಸಿಕೊಂಡು ಬರಲು ತಾವುಗಳು ಅನುಮತಿ ನೀಡುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನೆಯ ನೇತೃತ್ವವನ್ನು ಒಕ್ಕೂಟದ ಮುಖಂಡರಾದ ಎಹಸಸ್ ಎ ನಾಯಬ್, ಹೀನ ಕೌಸರ್, ಯಾಸ್ಮಿನ್, ಒಮ್ಮೆ ಸಲ್ಮಾ, ಸೋಫಿಯಾ, ಹಸೀನಾ, ಪೀಸ್ ಆರ್ಗನೈಜೆಷನ್ನ ಅಧ್ಯಕ್ಷ ರಿಯಾಜ್ ಅಹಮ್ಮದ್ ವಹಿಸಿದ್ದು, 500 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.