ಶಿವಮೊಗ್ಗ: ಸೂಳೆಬೈಲ್ ಇದ್ದಾನಗರದಲ್ಲಿ ಮನೆಯ ವಿದ್ಯುತ್ ಶುಲ್ಕ ಬಾಕಿ ಉಳಿಸಿಕೊಂಡ ವಿಚಾರಕ್ಕೆ ಸಂಬಂಧಿಕರೇ ವ್ಯಕ್ತಿಗೆ ಚಾಕುವಿನಿಂದ ಇರಿದು ಕೊಲೆ ಬೆದರಿಕೆ ಹಾಕಿರುವ ಪ್ರಕರಣ ದಾಖಲಾಗಿದೆ.
ಇದ್ದಾನಗರ 2ನೇ ಕ್ರಾಸ್‌ನ ಮಹಮ್ಮದ್ ಅತಾವುಲ್ಲಾ ಅವರಿಗೆ ಸಹೋದರ ಮಹಮ್ಮದ್ ಜಿಯಾವುಲ್ಲಾ, ಈತನ ಪುತ್ರ ಮಹಮ್ಮದ್ ಆಸೀಫ್, ಸಹೋದರಿ ಜೀನತ್ ಉನ್ನಿಸಾ ಮತ್ತು ಈಕೆಯ ಪುತ್ರ ಸೈಯದ್ ಸೈಫಾನ್ ಚಾಕುವಿಂದ ಇರಿದು ಕೊಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಮಹಮ್ಮದ್ ಅತಾವುಲ್ಲಾ ಅವರ ಅಕ್ಕ ಶಕೀಲಾಬಾನು ಅವರು ಸೂಳೆಬೈಲ್‌ನಲ್ಲಿ ಮನೆ ಕಟ್ಟಿಸಿದ್ದರು. ನಿರ್ಮಾಣದ ವೇಳೆ ಮಹಮ್ಮದ್ ಅತಾವುಲ್ಲಾ ಅವರೇ ಜವಾಬ್ದಾರಿ ತೆಗೆದುಕೊಂಡು ಮನೆ ಕಟ್ಟಿಸಿದ್ದರು. ಆನಂತರ ಅದೇ ಮನೆಗೆ ಕುಟುಂಬ ಸಮೇತ ವಾಸವಾಗಿದ್ದರು. ಈ ನಡುವೆ ಶಕೀಲಾಬಾನು ಮತ್ತು ಮಹಮ್ಮದ್ ಅತಾವುಲ್ಲಾ ನಡುವೆ ವೈಮನಸ್ಸು ಉಂಟಾಗಿತ್ತು. ಹಿರಿಯರ ಸಮಕ್ಷಮದಲ್ಲಿ ಅತಾವುಲ್ಲಾ ಮನೆ ಖಾಲಿ ಮಾಡಿದ್ದರು. ಆದರೆ ಮನೆಯ ವಿದ್ಯುತ್ ಶುಲ್ಕ ಪಾವತಿಸಿರಲಿಲ್ಲ ಎನ್ನಲಾಗಿದೆ. ಇದೇ ವಿಚಾರವಾಗಿ ಜಗಳ ತೆಗೆದು ಅತಾವುಲ್ಲಾನ ಮೇಲೆ ಹಲ್ಲೆ ನಡೆಸಿದ್ದು, ಕೊಲೆ ಬೆದರಿಕೆಯನ್ನೂ ಹಾಕಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಮಹಮದ್ ಅತಾವುಲ್ಲಾ ತುಂಗಾನಗರ ಠಾಣೆಗೆ ದೂರು ನೀಡಿದ್ದಾರೆ.