ಶಿವಮೊಗ್ಗ, : ಶಿವಮೊಗ್ಗ ನಗರದ ಸ್ಮಾರ್ಟ್ಸಿಟಿಯ ಕ್ವಾಲಿಟಿ ಪರಿಶೀಲನೆ, ಶಿವಮೊಗ್ಗ ಜಿಲ್ಲೆಯಲ್ಲಿ ಹರಡಿರುವ ಗಾಂಜಾ ನಿಯಂತ್ರಣ, ಹುಣಸೋಡು ಪ್ರಕರಣದ ಸಂಪೂರ್ಣ ಪರಿಹಾರ, ರೆವಿನ್ಯೂ ಭೂಮಿಗಳ ಸಮಗ್ರ ದಾಖಲಾತಿ ಸೇರಿದಂತೆ ಶರಾವತಿ ಹಿನ್ನೀರಿ ಗಾಗಿ ಭೂಮಿ ಕಳೆದುಕೊಂಡ ರೈತರ ಬದುಕಿಗೆ ಅಗತ್ಯವಿರುವ ಸೌಲಭ್ಯಗಳಿಗಾಗಿ ಅತ್ಯಂತ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಇಂದಿಲ್ಲಿ ಹೇಳಿದರು.
ತಮ್ಮ ಅಧಿಕಾರವಧಿಯ ದಿನಗಳನ್ನು ಹಾಗೂ ನಿರ್ವಹಿಸಿದ ಜಿಲ್ಲೆಗಳ ಜವಾಬ್ದಾರಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಸೆಲ್ವಮಣಿ ಅವರು ಮನಬಿಚ್ಚಿ ಮಾತನಾಡುತ್ತಾ, ಕಂದಾಯ ಭೂಮಿಯ ವಿಷಯಕ್ಕೆ ಸಂಬಂಧಪಟ್ಟಂತೆ ಪ್ರಭಾವಿಗಳ ಒತ್ತುವರಿ ಒತ್ತಡ, ಅಸಬಲ ರೈತರಿಗೆ ಸಿಗಬಹುದಾದ ಬದುಕಿನ ಆಸರೆಯ ಭೂಮಿಯನ್ನು ಕೊಡಿಸುವ ನಿಟ್ಟಿನಲ್ಲಿ ಕಾನೂನಾತ್ಮಕವಾಗಿ ಕಾರ್ಯನಿರ್ವ ಹಿಸಲಾಗುತ್ತದೆ ಎಂದು ಇಂದು ಬೆಳಗ್ಗೆ ಶಿವಮೊಗ್ಗ ಪ್ರೆಸ್ಟ್ರಸ್ಟ್ ಆಯೋಜಿಸಿದ್ದ ಸಂವಾದ ಸಮಾರಂಭದಲ್ಲಿ ಹೇಳಿದರು.
ಗೂ ಕಂದಾಯ ವಿಭಾಗದ ಸಮಸ್ತ ವಿಷಯಗಳಾದ ಬಗರ್ಹುಕ್ಕುಂ ಅರಣ್ಯ ಹಕ್ಕುಕಾಯಿದೆ ಮೊದಲಾದ ಎಲ್ಲಾ ವಿಷಯಗಳ ಬಗ್ಗೆ ಅತ್ಯಂತ ಕಾಳಜಿವಹಿಸಿ ಸೂಕ್ತ ವ್ಯಕ್ತಿಗಳಿಗೆ ಅದರಲ್ಲೂ ನೊಂದ ರೈತರಿಗೆ ನ್ಯಾಯ ಒದಗಿಸಲಾಗುತ್ತದೆ ಎಂದು ಪರೋಕ್ಷವಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು.
ಶಿವಮೊಗ್ಗದಂತಹ ಮಲೆನಾಡು ಭಾಗದಲ್ಲಿ ಕರ್ತವ್ಯನಿರ್ವಹಿಸಲು ಖುಷಿ ಎನಿಸುತ್ತದೆ. ನಾನು ಜಿಲ್ಲಾಧಿಕಾರಿಯಾಗಿ ಸಮಸ್ತರಿಗೂ ಸದಾ ಕಾಲ ಸ್ಪಂದಿಸುತ್ತೇನೆ ಅವರ ಜೊತೆ ಸದಾ ಕಾಲ ಮಾತನಾಡಲು, ಅವರ ಸಮಸ್ಯೆಯನ್ನು ಬಗೆಹರಿಸಲು ಬದ್ದನಾಗಿದ್ದೇನೆ ಎಂದು ಹೇಳಿದರು. (ಬಾಕ್ಸ್ ನೋಡಿ)
ಶಿವಮೊಗ್ಗ ಸ್ಮಾರ್ಟ್ಸಿಟಿ ಕಾಮಗಾರಿಯ ಬಗ್ಗೆ ಬಹುತೇಕ ಆರೋಪಗಳಿವೆ. ನನ್ನ ಜೊತೆ ಮಾತನಾಡಿದ ನೀವುಗಳೂ ಸಹ ಈ ಬಗ್ಗೆ ವಿವರಿಸಿದ್ದೀರಿ. ರಸ್ತೆ ಚಿಕ್ಕದಾಗುವಿಕೆ, ಹಂಪ್ಸ್, ಸಿಗ್ನಲ್, ಡ್ರೈನೇಜ್, ಈಗ ಆಗುತ್ತಿರುವ ಕಿರಿಕಿರಿಗಳ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳುತ್ತೇನೆ. ಜನರಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗಲು ಬಿಡುವುದಿಲ್ಲವೆಂದರು.
ಹುಣಸೋಡು ಬಾಂಬ್ ಬ್ಲಾಸ್ಟಿಂಗ್ಗೆ ಸಂಬಂಧಪಟ್ಟಂತೆ ಪತ್ರಕರ್ತರ ಪ್ರಶ್ನೆಗೆ ಅಲ್ಲಿ ನೊಂದವರಿಗೆ ಸೂಕ್ತ ಪರಿಹಾರ ನೀಡಲಾಗುತ್ತದೆ. ಅಕ್ರಮ ಮರಳು ಹಾಗೂ ಕಲ್ಲುಗಣಿಗಾರಿಕೆಗೆ ಯಾವುದೇ ಅವಕಾಶ ನೀಡುವುದಿಲ್ಲ ಎಂದ ಜಿಲ್ಲಾಧಿಕಾರಿಗಳು ಮಲೆನಾಡಿನ ಈ ಭಾಗದಲ್ಲಿನ ಕೆಎಫ್ಡಿ ಸೇರಿದಂತೆ ಎಲ್ಲಾ ಆರೋಗ್ಯ ಸಮಸ್ಯೆಗಳಿಗೆ ನಿರಂತರವಾಗಿ ಸ್ಪಂದಿಸಲಾಗುತ್ತದೆ. ಜಿಲ್ಲಾಡಳಿತ ಈ ವಿಷಯದಲ್ಲಿ ಸದಾ ಮುಕ್ತವಾಗಿರುತ್ತದೆ ಎಂದರು.
ಸಂವಾದದಲ್ಲಿ ಅಧ್ಯಕ್ಷತೆಯನ್ನು ಟ್ರಸ್ಟ್ನ ಅಧ್ಯಕ್ಷ ಎನ್.ಮಂಜುನಾಥ್ ವಹಿಸಿದ್ದು, ಕಾರ್ಯದರ್ಶಿ ನಾಗರಾಜ್ನೇರಿಗೆ, ಮಾದ್ಯಮ ಅಕಾಡೆಮಿ ಸದಸ್ಯ ಗೋಪಾಲ್ ಯಡಗೆರೆ, ವ್ಯವಸ್ಥಾಪಕ ಟ್ರಸ್ಟಿ ಜಿ.ಪದ್ಮನಾಭ್ ಉಪಸ್ಥಿತರಿದ್ದರು, ಟ್ರಸ್ಟಿ ಎಸ್.ಕೆ.ಗಜೇಂದ್ರಸ್ವಾಮಿ ಸ್ವಾಗತಿಸಿ, ನಿರೂಪಿಸಿದರು.
ಜಿಲ್ಲಾಧಿಕಾರಿ ಕೊಠಡಿ ಸದಾ ಓಪನ್
ಶಿವಮೊಗ್ಗ: ಸಭೆ, ಸಮಾರಂಭ ಜಾಹೂ ಕಛೇರಿಯ ತುರ್ತುಕಾರ್ಯಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಅವಧಿಯಲ್ಲಿ ಯಾವಾಗಬೇಕಾದರೂ ಸಾರ್ವಜನಿಕರು ನನ್ನನ್ನು ಬೇಟಿಮಾಡಬಹುದು. ಅದಕ್ಕೆ ಯಾವುದೇ ನಿಬಂಧನೆಗಳಿಲ್ಲ ಎಂದು ಶಿವಮೊಗ್ಗದ ನೂತನ ಜಿಲ್ಲಾಧಿಕಾರಿ ಸೆಲ್ವಮಣಿ ಹೇಳಿದರು.
ನನ್ನ ಕಛೇರಿ ಯಾವಾಗಲೂ ತೆರೆದಿರುತ್ತದೆ. ಯಾವುದೇ ಸಮಸ್ಯೆಗಳಿಗೆ ಭೇಟಿ ಮಾಡಬಹುದು. ಯಾವುದೇ ಕಂಡಿಷನ್ ಇಲ್ಲ. ಕಛೇರಿಯ ಮುಖ್ಯ ಸಭೆಗಳು ಮತ್ತಿತರ ಕಾರ್ಯಕ್ರಮಗಳ ಅವಧಿಯಲ್ಲಿ ಭೇಟಿ ಮಾಡುವುದು ವಿಳಂಬವಾಗಬಹುದಷ್ಟೆ. ಜಿಲ್ಲಾಧಿಕಾರಿಗಳ ಭೇಟಿಗೆ ನಿಗಧಿತ ಸಮಯ ಘೋಷಿಸಿಕೊಂಡಿದ್ದ ಕೆಲ ಜಿಲ್ಲಾಧಿಕಾರಿಗಳ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಸರಳ ಹಾಗೂ ಸಹಜ ಧ್ವನಿಯಲ್ಲಿ ಉತ್ತರಿಸಿದ ಡಾ.ಸೆಲ್ವಮಣಿ ಅವರು ಜಿಲ್ಲೆಯಲ್ಲಿ ಆಗಬೇಕಾದ ಕಾರ್ಯಗಳ ಬಗ್ಗೆ ಹಾಗೂ ನಡೆಯುತ್ತಿರುವ ಅಕ್ರಮಗಳ ಬಗ್ಗೆ ನನಗೆ ಮಾಹಿತಿ ನೀಡಿ ಎಂದು ಮಾಧ್ಯಮಗಳ ಮೂಲಕ ವಿನಂತಿಸಿದರು.


