ಶಿವಮೊಗ್ಗ: ಕುಡಿಯುವ ನೀರಿಗೆ ಆಗ್ರಹಿಸಿ ಪತ್ರಿಕಾ ಛಾಯಾಗ್ರಾಹ ಕರೇ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆಗೆ ಕುಳಿತ ಅಪರೂಪದ ಘಟನೆ ಇಂದು ನಡೆದಿದೆ.
ಜಿಲ್ಲಾ ಕೇಂದ್ರ ಸ್ಥಾನವಾದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಸುಮಾರು ೮.೫ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಶುದ್ಧ ನೀರಿನ ಘಟಕ ಕಾರ್ಯನಿರ್ವಹಿಸದೇ ಅನೇಕ ತಿಂಗಳು ಕಳೆದಿದ್ದು, ಈ ಬಗ್ಗೆ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳಿಗೆ ಪತ್ರಕರ್ತರೇ ಅನೇಕ ಬಾರಿ ಗಮನಕ್ಕೆ ತಂದಿದ್ದರೂ, ಅದನ್ನು ಸರಿಪಡಿಸುವ ಗೋಜಿಗೆ ಹೋಗದೇ ಇದ್ದ ಕಾರಣ ಅನಿವಾರ್ಯವಾಗಿ ಪತ್ರಿಕಾ ಛಾಯಾಗ್ರಾಹಕರು ಇಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿದರು.
ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದ್ದರೂ, ಸರಿಪಡಿಸದ ಜಿಲ್ಲಾಡಳಿತದ ವಿರುದ್ಧ ಪತ್ರಕರ್ತರ ಧರಣಿಗೆ ರೈತ ನಾಯಕ ಕೆ.ಟಿ. ಗಂಗಾಧರ್ ಸೇರಿದಂತೆ ಅನೇಕ ಸಂಘಟನೆಗಳ ಮುಖಂಡರು ಬೆಂಬಲ ನೀಡಿದರು.
ಮಹಾನಗರ ಪಾಲಿಕೆ ಆಯುಕ್ತರ ಗಮನಕ್ಕೂ ತರಲಾಯಿತು. ತಕ್ಷಣ ಓಡೋಡಿ ಬಂದ ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಅಧಿಕಾರಿಗಳು ಸರಿಪಡಿಸಿದರಾದರೂ ನಿರಂತರ ನೀರು ಸರಬರಾಜಿಗೆ ಒತ್ತಾಯಿಸಿ ಅದನ್ನು ಲಿಖಿತ ರೂಪದಲ್ಲಿ ಕೊಡುವವರೆಗೆ ಧರಣಿ ಹಿಂಪಡೆಯುವುದಿಲ್ಲ ಎಂದು ಪ್ರತಿಭಟನಾನಿರತರು ಪಟ್ಟು ಹಿಡಿದರು.
ಅಪರ ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸಿ ನಿರಂತರ ನೀರು ಸರಬರಾಜು ವ್ಯವಸ್ಥೆಗೆ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದೆ ನಂತರ ಧರಣಿ ಸ್ಥಗಿತಗೊಳಿಸಲಾಯಿತು.
ಈ ಸಂದರ್ಭದಲ್ಲಿ ಪತ್ರಿಕಾ ಛಾಯಾಗ್ರಾಹಕರಾದ ಶಿವಮೊಗ್ಗ ನಂದನ್, ಕೆ.ಆರ್. ಸೋಮನಾಥ್, ನಿಂಗನಗೌಡ, ನಾಗರಾಜ್ ಶೆಣೈ, ವಿಜಯಕುಮಾರ್, ಸ್ಪಂದನ ಚಂದ್ರು, ಹೋರಾಟಗಾರ ಕೆ.ಪಿ. ಶ್ರೀಪಾಲ್, ಟಿ.ಹೆಚ್. ಹಾಲೇಶಪ್ಪ ಮೊದಲಾದವರಿದ್ದರು.