ಶಿವಮೊಗ್ಗ: ಅಗತ್ಯ ವಸ್ತು ಬಟ್ಟೆಗಳ ಮೇಲೆ ಶೇ. 5 ರಿಂದ 12 ಕ್ಕೆ ಜಿ.ಎಸ್.ಟಿ. ಏರಿಕೆ ಮಾಡುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಶಿವಮೊಗ್ಗದ ಜವಳಿ ವರ್ತಕರ ಸಂಘದ ವತಿಯಿಂದ ಡಿ. 16 ರ ನಾಳೆ ಬೆಳಗ್ಗೆ 10 ಗಂಟೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.

ಜ. 1 ರಿಂದ ಕೇಂದ್ರ ಸರ್ಕಾರವು ಜನಸಾಮಾನ್ಯರ ಅಗತ್ಯವು ಹಾಗೂ ಅತ್ಯಾವಶ್ಯಕ ವಸ್ತುವಾದ ಬಟ್ಟೆಗಳ ಮೇಲೆ ಈಗಿರುವ ಶೇ. 5 ಜಿ.ಎಸ್.ಟಿ.ಯಿಂದ ಶೇ. 12 ಕ್ಕೆ ಏರಿಸುತ್ತಿದೆ. ಇಂತಹ ಜವಳಿ ವಸ್ತುಗಳ ಮೇಲೆ ಶೇ. 12 ರಷ್ಟು ಜಿ.ಎಸ್.ಟಿ. ವಿಧಿಸುತ್ತಿರುವುದು ಅನ್ಯಾಯದ ಪರಮಾವಧಿಯಾಗಿದೆ ಎಂದು ಜವಳಿ ವರ್ತಕರ ಸಂಘದ ಅಧ್ಯಕ್ಷ ಟಿ.ಆರ್. ವೆಂಕಟೇಶಮೂರ್ತಿ ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕಳೆದ ಎರಡು ವರ್ಷಗಳಿಂದ ಕೊರೋನಾ ಲಾಕ್ ಡೌನ್ ನಿಂದಾಗಿ ಜವಳಿ ವರ್ತಕರು ವ್ಯಾಪಾರವಿಲ್ಲದೇ, ಹೈರಾಣಾಗಿ ಆತಂಕದಿಂದ ಬದುಕು ದುಸ್ತರವಾಗಿರುವಂತಹ ಸಂದರ್ಭದಲ್ಲಿ ಗಾಯದ ಮೇಲೆ ಬರೆ ಎಳೆದಂತೆ ಜಿ.ಎಸ್.ಟಿ. ಏರಿಕೆ ಮಾಡುತ್ತಿರುವುದು ಖಂಡನೀಯ. ಜಿ.ಎಸ್.ಟಿ. ಏರಿಕೆಯಿಂದ ತೆರಿಗೆ ತಪ್ಪಿಸುವ ಅನ್ಯ ಮಾರ್ಗಗಳಿಗೂ ದಾರಿಯಾಗಲಿದೆ. ಜಿ.ಎಸ್.ಟಿ. ಹೆಚ್ಚಳ ಮಾಡಿದರೆ ಗ್ರಾಹಕರಿಗೆ ಹೊರೆಯಾಗಲಿದೆ ಎಂದರು.

ಸಂಘದ ಸದಸ್ಯತ್ವ ಪಡೆದಿರುವ ನಗರದ 200 ಜವಳಿ ಅಂಗಡಿಗಳನ್ನು ನಾಳೆ ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನಾ ಮೆರವಣಿಗೆ ರಾಮಣ್ಣ ಶ್ರೇಷ್ಠಿ ಪಾರ್ಕ್ ನಿಂದ ಹೊರಟು ಗಾಂಧಿ ಬಜಾರ್, ನೆಹರೂ ರಸ್ತೆ, ದುರ್ಗಿಗುಡಿ, ಕುವೆಂಪು ರಸ್ತೆ, ಶಿವಮೂರ್ತಿ ವೃತ್ತ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿ ಮನವಿ ನೀಡಲಾಗುವುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಪಿ.ವಿ. ಪ್ರಭಾಕರ್ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಅನಿಲ್ ಕುಮಾರ್ ಶೆಟ್ಟಿ, ಭಾಸ್ಕರ್, ಪ್ರಮೋದ್, ಹರೀಶ್, ಇನ್ನಿತರರು ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!