ಶಿವಮೊಗ್ಗ, ನ.22:
ಜಿಲ್ಲೆಯ ಹಲವೆಡೆ ಸಾಂಕ್ರಾಮಿಕ ರೋಗಗಳು ಕಂಡು ಬರುತ್ತಿದ್ದು, ಹರಡದಂತೆ ತಡೆಯಲು ಸೂಕ್ತ ಕ್ರಮಗಳನ್ನು ಕೈಗೊಂಡು ಸಾರ್ವಜನಿಕರು ಸಹಕರಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ ಸುರಗಿಹಳ್ಳಿ ಅವರು ಮನವಿ ಮಾಡಿದ್ದಾರೆ.
ಜಿಲ್ಲೆಯಲ್ಲಿ ಪ್ರಸ್ತುತ ವರ್ಷ ಇದುವರೆಗೆ ಡೆಂಗ್ಯು 381, ಚಿಕನ್ಗುನ್ಯ 169, ಮಲೇರಿಯಾ 2, ಇಲಿಜ್ವರ 22 ಮತ್ತು ಮಂಗನ ಕಾಯಿಲೆ 13 ಪ್ರಕರಣಗಳು ಪತ್ತೆಯಾಗಿವೆ. ಸಾಂಕ್ರಾಮಿಕ ರೋಗಗಳು ಹರಡದಂತೆ ತಡೆಯಲು ಸಾರ್ವಜನಿಕರ ಪಾತ್ರ ಬಹಳ ಮುಖ್ಯವಾಗಿದೆ. ಗ್ರಾಮದಲ್ಲಿ ಯಾವುದೇ ಸಭೆ, ಸಮಾರಂಭಗಳು ನಡೆಸುವ ಮೊದಲು ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು. ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ವಾಂತಿ ಬೇಧಿ ಪ್ರಕರಣ ಕಂಡು ಬಂದಲ್ಲಿ ತಕ್ಷಣ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬೇಕು ಎಂದು ಅವರು ತಿಳಿಸಿದ್ದಾರೆ.
ವಾಂತಿ ಬೇಧಿ ಉಂಟಾದಾಗ ಡಿ ಹೈಡ್ರೇಷನ್ ಆಗುವುದರಿಂದ ತಕ್ಷಣ ಚಿಕಿತ್ಸೆಯನ್ನು ಮನೆಯಲ್ಲಿಯೇ ಪ್ರಾರಂಭಿಸಬೇಕು. ಲೀಟರ್ ಶುದ್ಧವಾದ ನೀರಿಗೆ 1 ಚಮಚ ಉಪ್ಪು ಮತ್ತು 8 ಚಮಚ ಸಕ್ಕರೆ ದ್ರಾವಣ ತಯಾರಿಸಿ ಆಸ್ಪತ್ರೆಗೆ ಹೋಗುವವರೆಗೆ ಸ್ವಲ್ಪ ಸ್ವಲ್ಪ ಕುಡಿಸಬೇಕು. ಕುಡಿಯಲು ಬಳಸುವ ನೀರಿನ ಎಲ್ಲಾ ಮೂಲಗಳನ್ನು ಎಚ್2ಎಸ್ ಪರೀಕ್ಷೆಗೆ ಒಳಪಡಿಸಿ, ಕಲುಷಿತ ಎಂದು ವರದಿ ಬಂದಲ್ಲಿ ಸ್ಥಳೀಯ ಆಡಳಿತದ ಗಮನಕ್ಕೆ ತರಬೇಕು. ಹಾಗೂ ಮರು ಪರೀಕ್ಷೆ ಮಾದರಿಗಳನ್ನು ಒಳಪಡಿಸಿ ನೀರು ಕುಡಿಯಲು ಯೋಗ್ಯವೆಂದು ದೃಢೀಕರಿಸಬೇಕು.
ವಾಂತಿ ಬೇಧಿ ಕಂಡು ಬಂದಲ್ಲಿ ಗ್ರಾಮದಲ್ಲಿ ಸಂತೆ ಮತ್ತು ಜಾತ್ರೆಗಳನ್ನು ಮುಂದೂಡಬೇಕು. ಗ್ರಾಮದಲ್ಲಿ ಬಯಲು ಮಲ ವಿಸರ್ಜನೆ ಮಾಡಬಾರದು. ರಸ್ತೆ ಬದಿಯಲ್ಲಿ ತೆರೆದಿಟ್ಟ ಕರಿದ ಆಹಾರ ಪದಾರ್ಥ, ಕತ್ತರಿಸಿದ ಹಣ್ಣು ಹಾಗೂ ತಂಪು ಪಾನೀಯಗಳನ್ನು ಸೇವಿಸಬಾರದು. ಕುಡಿಯಲು ಕಾಯಿಸಿ ಆರಿಸಿದ ನೀರು ಹಾಗೂ ಬಿಸಿ ಪದಾರ್ಥ ಸೇವಿಸಬೇಕು. ಮನೆಯಲ್ಲಿ ತಯಾರಿಸಿದ ಆಹಾರ ಪದಾರ್ಥಗಳನ್ನು ನೊಣಗಳು ಮುಟ್ಟದಂತೆ ಮುಚ್ಚಿಡಬೇಕು.
ಮುಂಜಾಗರೂಕತಾ ಕ್ರಮ: ನಗರ ಪ್ರದೇಶ ವ್ಯಾಪ್ತಿಯಲ್ಲಿ ಆರೋಗ್ಯ ಕಾರ್ಯಕರ್ತರಿಂದ ಪ್ರತಿ ಮನೆ ಮನೆಗೆ ಭೇಟಿ ನೀಡಿ ಲಾರ್ವ/ಜ್ವರ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗಿದೆ. ಸಾಂಕ್ರಾಮಿಕ ರೋಗಗಳ ಬಗ್ಗೆ ನಿಗಾ ವಹಿಸಲು ಎಲ್ಲಾ ಆರೋಗ್ಯ ಕಾರ್ಯಕರ್ತರ ವಾಟ್ಸಾಪ್ ಗ್ರೂಪ್ಗಳನ್ನು ರಚಿಸಲಾಗಿದ್ದು, ಪ್ರತಿದಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ನಗರ ಪ್ರದೇಶದಲ್ಲಿರುವ ಖಾಸಗಿ ಆಸ್ಪತ್ರೆಗಳಿಗೆ ಶಂಕಿತ ಡೆಂಗ್ಯ, ಇಲಿಜ್ವರ, ಎಚ್1ಎನ್1 ಪ್ರಕರಣ ಕಂಡು ಬಂದಲ್ಲಿ ನಿಗಾ ವಹಿಸಲಾಗುತ್ತಿದ್ದು, ಆಸ್ಪತ್ರೆಗೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಗುತ್ತಿದೆ. ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕಾಗಿ ರ್ಯಾಪಿಡ್ ರೆಸ್ಪಾನ್ಸ್ ತಂಡವನ್ನು ರಚಿಸಲಾಗಿದೆ. ಫೋನ್ ಇನ್ ಕಾರ್ಯಕ್ರಮಗಳ ಮೂಲಕ ಜನರಿಗೆ ಸಾಮಾನ್ಯ ಮಾಹಿತಿ ನೀಡಲು ಮತ್ತು ಖಾಸಗಿ ಆಸ್ಪತ್ರೆಯ ವೈದ್ಯರಿಗೆ ಸಾಂಕ್ರಾಮಿಕ ರೋಗಗಳ ಕುರಿತು ಕಾರ್ಯಾಗಾರ ನಡೆಸಲಾಗಿದೆ.
ಸಾರ್ವಜನಿಕರು ಎಲ್ಲಾ ಮುಂಜಾಗರೂಕತಾ ಕ್ರಮಗಳನ್ನು ಅನುಸರಿಸುವ ಮೂಲಕ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಲು ಸಹಕರಿಸುವಂತೆ ಅವರು ಮನವಿ ಮಾಡಿದ್ದಾರೆ.