ನಾನಿಲ್ಲಿ ಹೇಳುವ ಮಾತುಗಳನ್ನು ಸೂಕ್ಷ್ಮವಾಗಿ ತಾರ್ಕಿಕವಾಗಿ ಮತ್ತು ವಾಸ್ತವದಲ್ಲಿ ಅವಲೋಕಿಸಿ, ತಪ್ಪೋ ಸರಿಯೋ ನೀವೇ ನಿರ್ಧರಿಸಿ.

ಮೊದಲು ಇತ್ತೀಚೆಗಿನ ಕೆಲವು ಗಾಬರಿ ಹುಟ್ಟಿಸುವ ವಿದ್ಯಮಾನಗಳನ್ನು ನೋಡೋಣ. ಕರೋನಾ ವೈರಸ್ ನಿರ್ಮೂಲನೆಗೆ ಲಾಕ್ ಡೌನ್ ಹೇರಿದ ನಂತರ ಜನ ಮನೆಗಳಲ್ಲಿ ಬಂಧಿಯಾಗಿದ್ದಾರೆ. ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಉಳಿದೆಲ್ಲಾ ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ. ಇಡೀ ರಾಷ್ಟ್ರದಲ್ಲಿ ತುರ್ತು ಪರಿಸ್ಥಿತಿ ರೀತಿಯ ವಾತಾವರಣವಿದೆ. ಸುದ್ದಿ ಮಾಧ್ಯಮಗಳು ಪ್ರತಿ ನಿತ್ಯ ಕರೋನಾ ಅಟ್ಟಹಾಸವನ್ನು ಎಳೆಎಳೆಯಾಗಿ ವಿವರಿಸುತ್ತಿವೆ. ವರ್ಕ್ ಫ್ರಂ ಹೋಂ ಮಾಡುತ್ತಿರುವ ಗಂಡ ಹೆಂಡತಿಯರ ನಡುವೆ ಸಣ್ಣ ಸಣ್ಣ ವಿಷಯಗಳಿಗೂ ಜಗಳ ಹೆಚ್ಚಾಗುತ್ತಿವೆಯಂತೆ. ಇದಕ್ಕಿಂತ ಆಘಾತಕಾರಿ ವಿಷಯ ಇವತ್ತಿನ ಪತ್ರಿಕೆಯೊಂದರಲ್ಲಿ ವರದಿಯಾಗಿದೆ. ಹೆಂಡತಿಯ ಮೇಲೆ ಗಂಡ ದೈಹಿಕವಾಗಿ ಹಲ್ಲೆ ಮಾಡುತ್ತಿರುವ ಪ್ರಕರಣ ಹೆಚ್ಚಾಗುತ್ತಿದೆಯಂತೆ. ಕಾರಣ ಮಾನಸಿಕ ಕ್ಷೋಭೆ ಮತ್ತು ತೀರದ ಹತಾಶೆ. ಎಂಡ್ ಮೋಸ್ಟ್ ಪ್ರಾಬಬಲಿ ಇದಕ್ಕೆ ಕಾರಣ ಆಲ್ಕೋಹಾಲಿಕ್ ಗಂಡನಿಗೆ ಎಣ್ಣೆ ಇಲ್ಲದೆ ಮಾನಸಿಕ ನಿಯಂತ್ರಣ ಸಾಧ್ಯವಾಗ್ತಿಲ್ಲ. 
ಕರೋನಾ ಬಾಧೆಯಿಂದ ಸತ್ತವರು ರಾಜ್ಯದಲ್ಲಿ ಮೂವರು. ಆದರೆ ಹೆಂಡ ಸಿಗದೆ ಸತ್ತವರ ಸಂಖ್ಯೆ 16ಕ್ಕೇರಿದೆ. ಉಡುಪಿ ಜಿಲ್ಲೆಯೊಂದರಲ್ಲೇ ಆರು ಜನ ಈ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿನ್ನೆ ನಮ್ಮ ಸಾಗರದಂತ ತಾಲೂಕು ಕೇಂದ್ರದಲ್ಲಿ ಇಬ್ಬರು ಎಣ್ಣೆ ಲಭ್ಯವಿಲ್ಲ ಎಂದು ಹತಾಶೆಯಿಂದ ಪ್ರಾಣ ಬಿಟ್ಟಿದ್ದಾರೆ. ಎಲ್ಲೋ ಒಬ್ಬ ಇದೇ ಕಾರಣಕ್ಕೆ ಕತ್ತು ಕುಯ್ದುಕೊಂಡು ಆಸ್ಪತ್ರೆಯಲ್ಲಿದ್ದಾನಂತೆ. ಪ್ರತಿ ದಿನ ಕೂಲಿ ಕೆಲಸ ಮಾಡುವ ಶ್ರಮಿಕ ವರ್ಗ ರಾತ್ರಿ ಒಂದು ಪೆಗ್ ಏರಿಸಿ ತಮ್ಮ ದಣಿವಾರಿಸಿಕೊಳ್ಳುತ್ತಾರೆ. ಈ ವರ್ಗ ಈಗ ತಮಗೆ ಎಣ್ಣೆ ಸಿಗದಿದ್ದರೆ ತಾವು ಕೆಲಸ ಮಾಡುವುದಿಲ್ಲ ಎಂದು ಹಠ ಹಿಡಿದಿದ್ದಾರಂತೆ. ತೀರಾ ಈ ಮಟ್ಟದಲ್ಲಿ ಆಲ್ಕೋಹಾಲಿಕ್ ಆಗಿದೆಯಾ ನಮ್ಮ ಸಮಾಜ? ಕರೋನಾ ಸಾವಿಗಿಂತ ಭೀಕರ ಸ್ಥಿತಿ ಇದು. ಯಾರು ಕಾರಣ ಇದಕ್ಕೆ? 
ಖಂಡಿತಾ ಸಮಾಜವನ್ನು ಈ ಮಟ್ಟದಲ್ಲಿ ಕೆಳಗಿಳಿಸಿದ್ದು ನಮ್ಮ ಸರ್ಕಾರಗಳೇ. ಮೊದಲು ಹೇಗಿತ್ತು ಪರಿಸ್ಥಿತಿ ನೋಡೋಣ. ನಾನು ಹುಟ್ಟಿ ಬೆಳೆದ ತ್ಯಾಗರ್ತಿಯಲ್ಲಿ ಯಾರಾದರೂ ಮೋಜಿಗೆ ಎಣ್ಣೆ ಹೊಡೆಯುವವರು ಅಪರೂಪಕ್ಕೆ ಹಬ್ಬ ಹರಿದಿನಗಳಲ್ಲಿ ಮದುವೆ ಸಮಾರಂಭಗಳಲ್ಲಿ ಮತ್ತು ಮಾರಿಜಾತ್ರೆಯಂಥ ಉತ್ಸವಗಳಿದ್ದಾಗ ಮಾತ್ರ ಸಾಗರದಿಂದ ಸರಕು ತಂದಿಟ್ಟುಕೊಂಡು ಕುಡಿಯುತ್ತಿದ್ದರು. ಅಥವಾ ವಾರಕ್ಕೊಂದು ಬಾರಿಯೋ ತಿಂಗಳಿಗೆ ಒಮ್ಮೆಯೋ ಅದಕ್ಕೆಂದೇ ಸಾಗರಕ್ಕೆ ಹೋಗುತ್ತಿದ್ದರು. ಸಾಗರದಲ್ಲಾದರೂ ಎರಡೋ ಮೂರೋ ಬಾರ್ ಎಂಡ್ ರೆಸ್ಟೋರೆಂಟ್ ಗಳು ಮತ್ತು ಅಷ್ಟೇ ಪ್ರಮಾಣದ ವೈನ್ ಶಾಪ್ ಗಳು ಇದ್ದವು. ಆದರೆ ನಮ್ಮ ಆಳುವ ಸರ್ಕಾರಗಳಿಗೆ ಯಾವಾಗ ಅಬಕಾರಿಯಲ್ಲಿ ಭರ್ಜರಿ ಲಾಭ ಮಾಡಬಹುದು ಎಂದು ಗೊತ್ತಾಯಿತೋ, ಎಗ್ಗು ಸಿಗ್ಗಿಲ್ಲದೇ ಬಾರ್ ಲೈಸೆನ್ಸ್ ಕೊಡಲು ಮುಂದಾಯಿತು. ಸರ್ಕಾರದ್ದೇ ಎಂಎಸ್ಐಎಲ್ ಎಂಆರ್ಪಿ ದರದಲ್ಲಿ ಮದ್ಯ ಸರಬರಾಜು ಮಳಿಗೆ ಶುರುವಾಯಿತು. ಕಾಂಪಿಟೇಶನ್ ಗೆ ಬಿದ್ದ ಮದ್ಯ ವರ್ತಕರು ದೊಡ್ಡ ದೊಡ್ಡ ಎಂ ಆರ್ ಪಿ ಔಟ್ ಲೆಟ್ ಗಳನ್ನು ತೆರೆದು ವ್ಯಾಪಾರ ಶುರು ಮಾಡಿದರು. ಈಗ ರಾಜ್ಯದ ಪ್ರತೀ ನಗರಗಳ ಗಲ್ಲಿ ಗಲ್ಲಿಗಳಲ್ಲಿ ಎಂಆರ್ಪಿ ಔಟ್ ಲೆಟ್ ಗಳಿವೆ. ಕೈಗೆಟುಕದಷ್ಟು ದೂರವಿದ್ದಾಗ ಮದ್ಯ ವ್ಯಸನಿಗಳ ಸಂಖ್ಯೆ ಕಡಿಮೆ ಇತ್ತು. ಮದ್ಯ ಸೇವನೆಯೂ ಅಪರೂಪವಾಗಿತ್ತು. ಆದ್ರೆ ಎಡವಿ ಬಿದ್ದರೆ ಹೆಂಡದಂಗಡಿ ಸಿಕ್ಕರೇ ಯಾರು ತಾನೆ ಬಿಟ್ಟಾರು. 
ಬೆಂಗಳೂರಿನಂಥ ಮಹಾನಗರದಲ್ಲಿ ಪ್ರತೀ ಏರಿಯಾದಲ್ಲಿ ಕನಿಷ್ಟ ಹತ್ತರಿಂದ ಹದಿನೈದು ವೈನ್ ಶಾಪ್ ಗಳಿವೆ. ಹತ್ತಾರು ಬಾರ್ ಎಂಡ್ ರೆಸ್ಟೋರೆಂಟ್, ಒಂದೋ ಎರಡೋ ಪಬ್ – ಕ್ಲಬ್ ಗಳಿವೆ. ಕೈ ತುಂಬಾ ಸಂಬಳ ಪಡೆವ ನಮ್ಮ ಐಟಿ ಬಿಟಿ ಉದ್ಯೋಗಿಗಳಿಗೆ ವೀಕೆಂಡ್ ಅರ್ಥವೇ ಗುಂಡು ತುಂಡುಗಳ ಸಮಾರಾಧನೆ. ಕೆಲವು ವರ್ಷಗಳ ಮೊದಲು ಸಂಜೆ ಮಾತ್ರ ಕ್ಯೂ ಇರುತ್ತಿದ್ದ ಶಾರಬಿನಂಗಡಿಯಲ್ಲಿ ಈಗ ಬೆಳ್ಳಂಬೆಳಿಗ್ಗೆಯೇ ಜನ ಮುತ್ತಿಕೊಂಡಿರುತ್ತಾರೆ. ಸಾಫ್ಟ್ ವೇರ್ ಕ್ಷೇತ್ರದಲ್ಲಿ ಪುರುಷರಷ್ಟೇ ಸಮಾನವಾಗಿ ಮಹಿಳೆಯರೂ ಮಧ್ಯ ವ್ಯಸನಿಗಳಾಗಿದ್ದಾರೆ. ಬನಶಂಕರಿ ಬಿಡಿಎ ಪಾರ್ಕ್ ನಲ್ಲಿ ಒಂದು ಪಬ್ ಇದೆ, ಅಲ್ಲಿ ಹೆಚ್ಚಾಗಿ ಹೋಗುವುದೇ ಟೆಕ್ಕಿ ಯುವತಿಯರು. ಯುವ ಸಮುದಾಯ ಹೀಗೆ ನಶೆಯಲ್ಲಿ ಮುಳುಗೇಳಲು ಕಾರಣ ಇದೇ ಪ್ರಭುತ್ವ. ಹೆಂಡದಿಂದ ಖಜಾನೆ ತುಂಬಿಸಿಕೊಳ್ಳುವ ಆಸೆಬುರುಕತನ. ಯುವಕ ಯುವತಿಯರನ್ನು ಮದ್ಯವ್ಯಸನಿಗಳನ್ನು ಯಾಕೆ ಬಯ್ಯಬೇಕು. ಅವರನ್ನು ದಾರಿ ತಪ್ಪಿಸಿದ ಸರ್ಕಾರಗಳಿಗೆ ಬಯ್ಯಬೇಕು. 
ಈಗ ಲಾಕ್ ಡೌನ್ ಕಾರಣಕ್ಕೆ ಏಕಾಏಕಿ ಹೆಂಡದಂಗಡಿಗಳನ್ನು ಮುಚ್ಚಿದಾಗ ಗುಂಡಿಗೆ ಅಡಿಕ್ಟ್ ಆಗಿರುವ ಈ ದುರ್ಬಲ ಗುಂಡಿಗೆಯ  ಜೀವಗಳಿಗೆ ಆತ್ಮಹತ್ಯೆಯೆ ಲೇಸು ಎನ್ನಿಸಿದೆ. ಈ ಪಾಪಕಾರ್ಯಕ್ಕೆ ಪ್ರಭುತ್ವವೇ ನೇರ ಹೊಣೆ. ಇವರನ್ನೆಲ್ಲಾ ಕೌನ್ಸಲಿಂಗ್ ಗೆ ಒಳಪಡಿಸಿ ವೈದ್ಯರಿಂದ ಗುಣಪಡಿಸಿ ಎಂದು ಹೇಳುವುದು ಸುಲಭ ಆದರೆ ವಾಸ್ತವದಲ್ಲಿ ಇದು ಸಾಧ್ಯವೇ? ತಾಂತ್ರಿಕವಾಗಿ ಯೋಚಿಸಿ ನೋಡಿ ಈ ದುಸ್ತರ ಸ್ಥಿತಿಯಲ್ಲಿ ಇದಾಗುತ್ತದಾ? 
ಕೇರಳದಲ್ಲಿ ಸಿಎಂ ಪಿಣರಾಯಿ ವಿಜಯನ್ ಸರ್ಕಾರ ಮತ್ತು ತೆಲಂಗಾಣ ಸರ್ಕಾರಗಳು ಮಧ್ಯ ಮಾರಾಟಕ್ಕೆ ನಿಯಂತ್ರಣ ಸಹಿತ ಅನುಮತಿ ಕೊಟ್ಟಿರುವುದು ಇದೇ ಕಾರಣಕ್ಕೆ. ಕರ್ನಾಟಕ ಸರ್ಕಾರಕ್ಕೂ ಈಗ ಬೇರೆ ದಾರಿ ಇಲ್ಲ. ನೀವು ಉಪ್ಪು ತಿಂದಿದ್ದೀರಿ ಈಗ ಸಮಾಜಕ್ಕೆ ಯಾಕೆ  ನೀರು ಕುಡಿಸುತ್ತೀರಿ? ಸಾವಿನ ಸಂಖ್ಯೆ ಹೆಚ್ಚುವ ಮೊದಲು ಇದಕ್ಕೊಂದು ಸೂಕ್ತ ಕ್ರಮ ಕೈಗೊಳ್ಳಿ. ಇಲ್ಲವಾದರೆ ಏಪ್ರಿಲ್ 14ರ ಲಾಕ್ ಡೌನ್ ತೆರವಿಗೂ ಮೊದಲೇ ಮದ್ಯವ್ಯಸನಿಗಳ ಸಾವಿನ ಸಂಖ್ಯೆ ಕರೋನಾ ಸಾವುಗಳಿಗಿಂದ ಹತ್ತುಪಟ್ಟು ಹೆಚ್ಚಾದರೂ ಅಚ್ಚರಿಯೇನಿಲ್ಲ. 

– ವಿಭಾ, ಮಲೆನಾಡು ಎಕ್ಸ್‍ಪ್ರೆಸ್‍

By admin

ನಿಮ್ಮದೊಂದು ಉತ್ತರ

You missed

error: Content is protected !!