
Nagesh Hegde ಸರ್ ಹೀಗೆ ಬರೆಯುತ್ತಾರೆ.
ಓದಲೇಬೇಕಾದ ಲೇಖನ.
ಭಾರತೀಯರಲ್ಲಿ ರೋಗನಿರೋಧಕ ಶಕ್ತಿ (ರೋ.ಶ.) ಗಟ್ಟಿ ಇದೆ; ಈ ದೇಶದ ಉಷ್ಣಾಂಶವೂ ವೈರಾಣುವನ್ನು ಹಿಮ್ಮೆಟ್ಟಿಸುವಂತಿದೆ. ಆದರೆ ಮಾಧ್ಯಮಗಳ ಡೋಲು ತಮಟೆಯಿಂದಾಗಿ ನಮ್ಮ ರೋ.ಶ. ತಗ್ಗುವ, ನಾವು ಸೋಲುವ ಸಾಧ್ಯತೆ ಹೆಚ್ಚುತ್ತಿದೆ. ಈ ಕುರಿತು ತುಸು ಉದ್ದನ್ನ ಆದರೆ ಸರಳವಾದ ವೈಜ್ಞಾನಿಕ ವಿಶ್ಲೇಷಣೆ ಇಲ್ಲಿದೆ:
ದೇಹವೆಂಬ ಈ ಭದ್ರಕೋಟೆ ಗಟ್ಟಿಯಾಗಿದ್ದರೆ ಕೊರೊನಾ ವೈರಸ್ಸನ್ನು ಸುಲಭವಾಗಿ ಮಣಿಸಬಹುದು. ಇಳಿವಯಸ್ಸಿನಲ್ಲಿ ರೋಗನಿರೋಧಕ ವ್ಯವಸ್ಥೆ (ಇಮ್ಯೂನ್ ಸಿಸ್ಟಮ್) ಕಡಿಮೆಯಾಗುತ್ತದೆ ಎಂಬುದೇನೋ ನಿಜ. ಆದರೆ ಇಲ್ಲೊಂದು ಸ್ವಾರಸ್ಯ ಇದೆ. ನಮ್ಮ ವಯಸ್ಸಿಗೂ ರೋಗನಿರೋಧಕತೆಗೂ ಅಷ್ಟೇನೂ ನೇರ ಸಂಬಂಧ ಇಲ್ಲ. ನಿಮ್ಮ ವಯಸ್ಸು ೪೫ ಇದ್ದರೆ ನಿಮ್ಮ ರೋಗನಿರೋಧಕ ವ್ಯವಸ್ಥೆಗೆ ೬೦ ವರ್ಷ ಆಗಿರಬಹುದು. ಅಥವಾ ಅದು ೨೫ರ ಯೌವನದಲ್ಲಿರಬಹುದು.
ನಮ್ಮ ದೇಹದ ಎಲ್ಲ ಅಂಗಾಂಗಗಳೂ ಅಷ್ಟೆ. ನಿಮಗೆ ೪೫ ವರ್ಷ ಆಗಿದ್ದರೆ ನಿಮ್ಮ ಕಣ್ಣಿಗೆ ೫೫ ಅಥವಾ ೩೫ ಆಗಿರಬಹುದು. ನಿಮ್ಮ ಕೂದಲಿಗೆ ೫೫ ವರ್ಷ ಆಗಿರಬಹುದು; ನಿಮ್ಮ ಕಿವಿಗೆ ೪೦ ಮತ್ತು ದಂತಪಂಕ್ತಿಗೆ ೩೫ ಆಗಿರಬಹುದು (ಈ ವಿಲಕ್ಷಣತೆಯ ಕುರಿತು ಅಂಕಿತ ಪುಸ್ತಕ ಪ್ರಕಟಿಸಿದ ‘ನಮ್ಮೊಳಗಿನ ಬ್ರಹ್ಮಾಂಡ’ ಎಂಬ ನನ್ನ ಪುಸ್ತಕದಲ್ಲಿ ವಿಸ್ತೃತ ಲೇಖನ ಇದೆ).
ಈ ನಮ್ಮ ರೋಗನಿರೋಧಕ ಶಕ್ತಿಯ ಲಕ್ಷಣಗಳೇನು?
ಎಲ್ಲರ ದೇಹದಲ್ಲೂ ಎರಡು ಬಗೆಯ ರೋಗನಿರೋಧಕ ಶಕ್ತಿ (ರೋ.ಶ.) ಇರುತ್ತದೆ.
(1) ಜನ್ಮತಃ ಬಂದಿರುವುದು. ನಾವು ಮಗುವಾಗಿದ್ದಾಗಲಿಂದ ಮ್ಯಾಕ್ರೊಫೇಜ್ ಮತ್ತು ನ್ಯೂಟ್ರೊಫಿಲ್ಸ್ ಹೆಸರಿನ ಕೋಶಗಳು ರಕ್ತದಲ್ಲಿ ಓಡಾಡುತ್ತಿರುತ್ತವೆ. ದೇಹದಲ್ಲಿ ರೋಗಾಣುಗಳು ಹೊಕ್ಕರೆ ಇದು ತಕ್ಷಣವೇ ದಾಳಿ ಮಾಡಲು ಸಜ್ಜಾಗಿರುತ್ತದೆ.
(2) ಸಾಂದರ್ಭಿಕ ವ್ಯವಸ್ಥೆ: ದಾಳಿಗೆ ಬಂದ ರೋಗಾಣುವಿನ ಗುರುತು ಚೆಹರೆಯನ್ನು ಸರಿಯಾಗಿ ನೋಡಿ, ಅದರ ಶಸ್ತ್ರಾಸ್ತ್ರಗಳ ಅಧ್ಯಯನ ಮಾಡಿ, ಅದನ್ನು ಮಣಿಸಬಲ್ಲ ಪ್ರತ್ಯಸ್ತ್ರಗಳನ್ನು ಸಿದ್ಧಪಡಿಸಿಕೊಂಡು ಯುದ್ಧಕ್ಕೆ ಇಳಿಯುತ್ತದೆ. ಕೌರವ ಗದೆಯನ್ನು ಹೊತ್ತಿದ್ದರಿಂದಲೇ ಗದೆ ಹಿಡಿದ ಭೀಮನನ್ನೇ ಯುದ್ಧಕ್ಕೆ ಇಳಿಸಿದ್ದನಲ್ಲ ಆ ಕೃಷ್ಣ? ಹಾಗೇ ಇದು. ಆದರೆ ಈ ರೋ.ಶ. ತಕ್ಷಣಕ್ಕೆ ಪ್ರಕಟ ಆಗುವುದಿಲ್ಲ. ಸೂಕ್ತ ವೇಷ ಧರಿಸಿ ರಂಗಕ್ಕೆ ಬರಲು ತುಸು ಸಮಯ ಬೇಕು ತಾನೆ? ರಕ್ತದಲ್ಲಿ T ಕೋಶ, B ಕೋಶ ಹಾಗೂ ಪ್ರತಿಕಾಯಗಳು (ಆಂಟಿಬಾಡೀಸ್) ಹೀಗೆ ಹೊಸದಾಗಿ ಸೃಷ್ಟಿಯಾಗಿ ಯುದ್ಧಕ್ಕೆ ಇಳಿಯುತ್ತವೆ.
ಒಮ್ಮೆ ಇವು ವೇಷ ಧರಿಸಲು ಕಲಿತರೆ ನಮ್ಮ ದೇಹ ಅದನ್ನು ಎಂದೂ ಮರೆಯುವುದಿಲ್ಲ. ಮಮ್ಸ್ ಅಥವಾ ದಢಾರದ ರೋಗಾಣುಗಳ ವಿರುದ್ಧ ಶಸ್ತ್ರಾಸ್ತ್ರ ಸಜ್ಜಾಗಿ, ಬಾಲ್ಯದಲ್ಲಿ ಈ ರೋಗಗಳನ್ನು ಮಣಿಸಿದ್ದೇ ಆದರೆ ಮುಂದೆ ಎಂದೂ ಈ ರೋಗಗಳು ಬಾರದಂತೆ ದೇಹ ಅದೇ ಶಸ್ತ್ರಾಸ್ತ್ರವನ್ನು ಶೀಘ್ರದಲ್ಲೇ ಹಿಡಿದು ನಿಲ್ಲುತ್ತದೆ.