
ಶಿವಮೊಗ್ಗ: ಎಲ್ಲೆಡೆ ಯುಗಾದಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಯುಗಾದಿ ಹಬ್ಬದ ಪ್ರಯುಕ್ತ ನಗರದ ವಿವಿಧ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರಾಗಿ ಸಾಗಿತ್ತು. ಬೆಲೆ ಏರಿಕೆಯಾಗಿದ್ದರೂ ವಸ್ತುಗಳನ್ನು ಕೊಂಡುಕೊಳ್ಳಲು ಜನರು ಮುಗಿಬಿದ್ದಿದ್ದರು.
ನಗರದ ಪ್ರಮುಖ ವಹಿವಾಟು ಕೇಂದ್ರಗಳಾದ ಗಾಂಧಿ ಬಜಾರ್, ಎಪಿಎಂಸಿ ತರಕಾರಿ ಮಾರುಕಟ್ಟೆ, ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣï ಸಮೀಪದ ಹೂವಿನ ಮಾರುಕಟ್ಟೆಯಲ್ಲಿ ವ್ಯಾಪಾರ ಭರ್ಜರಿಯಾಗಿ ನಡೆದಿತ್ತು. ಜನರು ತಾಜಾ ಹೂವು, ಹಣ್ಣು, ತರಕಾರಿ, ತಳಿರು ತೋರಣಗಳನ್ನು ಖರೀದಿಸುತ್ತಿದ್ದರು.

ಬೆಲೆ ಏರಿಕೆ ನಡುವೆಯೂ ಹಬ್ಬದ ಸಿದ್ಧತೆ ಮಾತ್ರ ಜೋರಾಗಿಯೇ ನಡೆಯುತ್ತಿದೆ. ಮಾರುಕಟ್ಟೆಯಲ್ಲಿ ಶನಿವಾರ ಜನಜಂಗುಳಿ ಕಂಡುಬಂತು. ಗಾಂಧಿ ಬಜಾರ್, ಶಿವಪ್ಪ ನಾಯಕ ವೃತ್ತದಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಹೊಸ ಬಟ್ಟೆ ಖರೀದಿ, ದಿನಸಿ, ಮಾವಿನ ಸೊಪ್ಪು, ಬೇವಿನ ಹೂವು ಮತ್ತು ಸೊಪ್ಪು, ಹೂವು, ಹಣ್ಣು ಹಂಪಲು ಖರೀದಿಯಲ್ಲಿ ಜನರು ತೊಡಗಿದ್ದರು.
ಶಿವÀಪ್ಪನಾಯಕ ಹೂವಿನ ಮಾರುಕಟ್ಟೆ, ನೆಹರೂ ರಸ್ತೆ, ಬಿ.ಎಚ್. ರಸ್ತೆ, ದುರ್ಗಿಗುಡಿ, ಗೋಪಿ ವೃತ್ತ, ಸವಳಂಗ ರಸ್ತೆ ಮುಂತಾದ ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ ಜನಜಂಗುಳಿ ಇತ್ತು. ಅಂಗಡಿಗಳಲ್ಲೂ ವ್ಯಾಪಾರ ಜೋರಾಗಿತ್ತು. ಪ್ರಮುಖ ವೃತ್ತಗಳಲ್ಲಿ ಮಾವು, ಕಹಿಬೇವು, ಬಾಳೆ ಕಂದು, ಹಣ್ಣು ಖರೀದಿ ನಡೆಯಿತು.
ಹÀಣ್ಣಿನ ದರ ತುಸು ಏರಿಕೆಯಾಗಿದೆ. ಈ ಮೊದಲು ಪ್ರತಿ ಕೆಜಿಗೆ 100 ರೂ.ರಷ್ಟು ಇದ್ದಂತಹ ಸೀಬೆ ಹಣ್ಣು 120 ರೂ.ಗೆ ಏರಿಕೆಯಾಗಿದೆ. ಏಲಕ್ಕಿ ಬಾಳೆಹಣ್ಣಿಗೆ 80 ರೂ.ಇದ್ದದ್ದು ಈಗ 100 ರೂ.ಆಗಿದೆ. ಮೂಸಂಬಿ 80 ರೂ.ಇದ್ದದ್ದು ಈಗ 100 ರೂ ಗೆ ಮಾರಾಟವಾಗುತ್ತಿದೆ. ಸೇಬು 200 ರೂ., ದಾಳಿಂಬೆ 250 ರೂ. ಅಷ್ಟಿತ್ತು, ಪಪ್ಪಾಯ 40 ರೂ ಇತ್ತು ಈಗ 60 ರೂ.ಯಂತೆ ವ್ಯಾಪಾರಸ್ಥರು ಮಾರಾಟ ಮಾಡುತ್ತಿದ್ದರು.

ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಹೂಗಳ ಪೂರೈಕೆ ಕಡಿಮೆಯಾಗಿದೆ. ಇದರಿಂದ ಬೆಲೆ ಅಧಿಕವಾಗಿದೆ. ಪ್ರತಿ ಕೆಜಿಯಂತೆ ಗುಲಾಬಿ 400 ರೂ., ಸೇವಂತಿಗೆ 250 ಯಿಂದ 300 ರೂ., ಮಲ್ಲಿಗೆ 500 ರೂ.ಯಿಂದ 600 ರೂ., ಕನಕಾಂಬರ 600 ರೂ.ದಿಂದ 800 ರೂ., ಕಾಕಡ 500 ರೂ.ಗೆ ಮಾರಾಟ ನಡೆಯುತ್ತಿತ್ತು.

ಯುಗಾದಿ ವಿಶೇಷ ಖಾದ್ಯವಾದ ಹೋಳಿಗೆ ಮತ್ತು ಸಿಹಿ ಖಾದ್ಯಕ್ಕೆ ಅಗತ್ಯವಾದ ತೊಗರಿ ಬೇಳೆ, ಬೆಲ್ಲ, ಸಕ್ಕರೆ, ಅಡುಗೆ ಎಣ್ಣೆ ಸೇರಿದಂತೆ ಇತರೆ ದಿನಸಿ ವಸ್ತುಗಳನ್ನು ಜನರು ಕೊಂಡೊಯ್ಯುತ್ತಿದ್ದರು. ಹಬ್ಬದ ಮರುದಿನ ವರ್ಷ ತೊಡಕು ಇರುವುದರಿಂದ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ನಿಂಬೆಹಣ್ಣು, ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು, ಸೌತೆಕಾಯಿ, ತೆಂಗಿನ ಕಾಯಿ ಖರೀದಿ ಕೂಡ ಮಾರುಕಟ್ಟೆಯಲ್ಲಿ ನಡೆಯುತ್ತಿತ್ತು. ಬೆಲೆ ಏರಿಕೆಯ ಬಿಸಿ ನಡುವೆ ಹೊಸ ವರ್ಷವನ್ನು ಸಂಭ್ರಮದಿಂದ ಬರ ಮಾಡಿಕೊಳ್ಳಲು ಜನರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಯುಗಾದಿ ಮತ್ತು ರಂಜಾನ್ ಹಬ್ಬದ ರಜೆ ಪ್ರಯುಕ್ತ ಹೊರ ಊರುಗಳಲ್ಲಿ ಕೆಲಸ ಮಾಡುತ್ತಿರುವವರು ತಮ್ಮ ಊರುಗಳಿಗೆ ತೆರಳುತ್ತಿದ್ದು, ಕೆಎಸ್ಆರ್ಟಿಸಿ ಹಾಗೂ ಖಾಸಗಿ ಬಸ್ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿತ್ತು. ಶಿವಮೊಗ್ಗಕ್ಕೆ ಬರುವ ರೈಲುಗಳಲ್ಲೂ ಪ್ರಯಾಣಿಕರ ಸಂಖ್ಯೆ ಹೆಚ್ಚಿತ್ತು.