
ಶಿವಮೊಗ್ಗ: ಡಿಸಿ ಕಚೇರಿ ಮುಂಭಾಗದಲ್ಲಿರುವ ಮೈದಾನದ ವಿವಾದ ಮತ್ತಷ್ಟು ಉಲ್ಬನಗೊಳ್ಳುವ ಎಲ್ಲಾ ಲಕ್ಷಣ ಕಾಣಿಸಿಕೊಳ್ಳತೊಡಗಿವೆ.

ರಂಜಾನ್ ಹಬ್ಬದ ನಂತರ ಮೈದಾನಕ್ಕೆ ಬೇಲಿ ಹಾಕಿ ಯಾವುದೇ ಖಾಸಗಿ ವಾಹನಗಳು ಒಳಗೆ ಪ್ರವೇಶಿಸದಂತೆ ತಡೆಹಿಡಿಯಲಾಗಿತ್ತು. ಇದನ್ನು ಹಿಂದೂ ಪರ ಸಂಘಟನೆಗಳು ವಿರೋಧಿಸಿ ನಿನ್ನೆ ಪ್ರತಿಭಟನೆ ನಡೆಸಿದ್ದರು. ವಾತಾವರಣ ಬಿಗಡಾಯಿಸುತ್ತಿದ್ದಂತೆ ಮಧ್ಯ ಪ್ರವೇಶ ಮಾಡಿದ್ದ ಜಿಲ್ಲಾ ರಕ್ಷಣಾಧಿಕಾರಿಗಳು ಬೇಲಿಯನ್ನು ತೆರವುಗೊಳಿಸುವುದಾಗಿ ಭರವಸೆ ನೀಡಿದ್ದರ ಪ್ರಕಾರ ಬೇಲಿಯನ್ನು ತೆರವುಗೊಳಿಸಲಾಗಿತ್ತು. ಆದರೆ ಬೇಲಿಯನ್ನು ತೆಗೆದುಹಾಕಿದ್ದರೂ ಕೂಡಾ ಪೋಲಿಸ್ ಬ್ಯಾರಿಕೇಡ್ ಹಾಕಲಾಗಿತ್ತು.

ಇಂದು ಮುಸ್ಲಿಂ ಸಂಘಟನೆಗಳು ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದ್ದರ ಹಿನ್ನೆಲೆಯಲ್ಲಿ ಮೈದಾನ ಹಾಗೂ ಡಿಸಿ ಕಚೇರಿ ಸುತ್ತ ಮುತ್ತ ಬಾರೀ ಪೋಲಿಸ್ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಇಂದೂ ಕೂಡಾ ಮೈದಾನದೊಳಗೆ ಯಾವ ವಾಹನಗಳೂ ಪ್ರವೇಶಿಸದಂತೆ ನಿರ್ಭಂದ ಹೇರಲಾಗಿತ್ತು. ಅಲ್ಲದೆ ಡಿಸಿ ಕಚೇರಿ ಎದುರಿನ ಮೈದಾನದ ರಸ್ತೆಯನ್ನು ಶ್ರೀ ರಾಘವೇಂದ್ರಸ್ವಾಮಿ ಮಠದ ವರೆಗೆ ಸಂಪೂರ್ಣ ಬಂದ್ ಮಾಡಲಾಗಿತ್ತು. ಮೈದನದ ಆವರಣದಲ್ಲಿರುವ ಎಸ್.ಬಿ.ಐ.ಬ್ಯಾಂಕ್ ಒಂದನ್ನು ಬಿಟ್ಟು ಉಲಿದೆಲ್ಲ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು.

ಸಧ್ಯಕ್ಕೆ ವಿವಾದ ತಣ್ಣಗಾದಂತೆ ಕಂಡರೂ ಮುಂದಿನ ದಿನಗಳಲ್ಲಿ ಹಿಂದೂ ಸಂಘಟನೆಗಳು ಸೇರಿದಂತೆ ಸಾರ್ವಜನಿಕರ ಆಕ್ರೋಶ ಹೆಚ್ಚಾಗಲಿದೆ ಎಂಬ ಅಂಶವನ್ನು ಸಾರ್ವಜನಿಕರು ಮಾತಾಡಿಕೊಳ್ಳುತ್ತಿದ್ದುದು ಕಂಡು ಬಂತು. ಈ ಹಿಂದೆ ಸ್ಥಿತಿಯನ್ನೇ ಮುಂದುವರಿಸಿದರೆ ಸಾರ್ವಜನಿಕರಿಗೆ ವಾಹನ ನಿಲ್ಲಿಸಲು ಅವಕಾಶ ಕಲ್ಪಿಸಿದರೆ ಯಾವ ತೊಂದರೆಯೂ ಆಗುವುದಿಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.