
ಶಿವಮೊಗ್ಗ: ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಮೈದಾನದ ವಿವಾದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಂದು ಮರ್ಕಜಿ ಸುನ್ನಿ ಜಾಮಿಯಾ ಮಸ್ಜಿದ್ ಸಮಿತಿಯ ಪದಾಧಿಕಾರಿಗಳು ಮತ್ತು ಸಾರ್ವಜನಿಕರು ಹಾಗೂ ಜಿಲ್ಲಾಧಿಕಾರಿಗಳು, ಜಿಲ್ಲಾ ರಕ್ಷಣಾಧಿಕಾರಿಗಳು, ಪಾಲಿಕೆ ಆಯುಕ್ತರು, ಅಧಿಕಾರಿಗಳ ಸಭೆಯಲ್ಲಿ ಕೆಲವು ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಈ ಮೈದಾನ ದಾಖಲೆಗಳಲ್ಲಿ ವಖ್ಫ್ ಆಸ್ತಿ ಎಂದು ನಮೂದಾಗಿದ್ದು ಈ ಸಂಬಂಧ ಸಮಿತಿಯವರು ಕೆಲವು ದಾಖಲೆಗಳನ್ನು ಸಲ್ಲಿಸಿದ್ದಾರೆ. ಈ ಬಗ್ಗೆ ಪಾಲಿಕೆಯಲ್ಲಿರುವ ದಾಖಲೆಗಳನ್ನೂ ಕೂಡಾ ಪರಿಶೀಲಿಸಬೇಕಾಗಿದೆ. ಅಲ್ಲದೆ ಮೂಲ ದಾಖಲೆಗಳು ಕೂಡಾ ಬೇಕಾಗಿದ್ದು ಎಲ್ಲವನ್ನೂ ಪರಿಶೀಲಿಸಿ ನಂತರ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಸದ್ಯಕ್ಕೆ ವಿವಾದಿತ ಮೈದಾನದಲ್ಲಿ ಯಾವುದೇ ವಾಹನಗಳ ನಿಲುಗಡೆಗೆ ಅವಕಾಶವಿಲ್ಲ. ಅಲ್ಲಿ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ.

ಇಂದಿನ ಸಭೆಯಲ್ಲಿ ಮುಸ್ಲಿಮರ ಅನೇಕ ಸಮಸ್ಯೆಗಳ ಬಗ್ಗೆಯೂ ಗಮನಕ್ಕೆ ತಂದಿದ್ದಾರೆ. ಖಬರಸ್ತಾನ್ ಜಮೀನಿನ ಬಗ್ಗೆಯೂ ಕೆಲವೊಂದು ಮಾಹಿತಿ ನೀಡಿದ್ದಾರೆ. ಎಲ್ಲವನ್ನೂ ಗಮನಿಸಿ ದಾಖಲೆ ಪರಿಶೀಲನೆಗೆ ಸಮಯ ಕೇಳಿದ್ದೇವೆ. ಅಲ್ಲಿಯವರೆಗೆ ಆ ಮೈದಾನದಲ್ಲಿ ಯಾವುದೇ ಚಟುವಟಿಕೆಗಳಿಗೆ ಅವಕಾಶ ಇರುವುದಿಲ್ಲ. ಈ ಅಸ್ತಿಗೆ ಸಂಬಂಧಿಸಿದಂತೆ ಇನ್ನೂ ಹೆಚ್ಚಿನ ಪರಿಶೀಲನೆ ಅಗತ್ಯ ಇರುವುದರಿಂದ ಸದ್ಯಕ್ಕೆ ಬ್ಯಾರಿಕೇಡ್ ಹಾಕಿ ಆ ಜಾಗವನ್ನು ರಕ್ಷಿಸಲಾಗುವುದು ಎಂದರು.

ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಮಾತನಾಡಿ, ನಗರದಲ್ಲಿ ಯವುದೇ ಅಹಿತಕರ ಘಟನೆ ನಡೆದಿಲ್ಲ. ಪರಿಸ್ಥಿತಿ ಶಾಂತವಾಗಿದೆ. ಕಾನೂನಾತ್ಮಕವಾಗಿ ಪರಿಶೀಲನೆ ಮಾಡಿದ ಬಳಿಕ ಮುಂದಿನ ತೀರ್ಮಾನ ತಿಳಿಸಲಾಗುವುದು. ಸದ್ಯಕ್ಕೆ ಯಥಾಸ್ಥಿತಿ ಕಾಯ್ದುಕೊಳ್ಳಲಾಗುವುದು ಎಂದರು. ಸಭೆಯಲ್ಲಿ ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು.