ಕೃಷಿಕ್ಷೇತ್ರೋತ್ಸವ ಮುಂದೂಡಿಕೆ

ಕನ್ನಡ ಚಿತ್ರರಂಗದ ಮೇರುನಟ ಪುನೀತ್ ರಾಜ್ ಕುಮಾರ್ ಆಕಾಲಿಕ ಮರಣದ ಹಿನ್ನೆಲೆಯಲ್ಲಿ ಅ.೩೧ರಂದು ರೈತರಿಗಾಗಿ ಹಮ್ಮಿಕೊಂಡಿದ್ದ ಕೆಳದಿ ಶಿವಪ್ಪನಾಯ್ಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯದ ಕೃಷಿಕ್ಷೇತ್ರೋತ್ಸವ ಹಾಗೂ ವಿಚಾರ ಸಂಕಿರಣವನ್ನು ಮುಂದೂಡಲಾಗಿದೆ ಎಂದು ವಿವಿ ಪ್ರಕಟಣೆಯಲ್ಲಿ ತಿಳಿಸಿದೆ.

ಅಪ್ಪು ನಿಧನಕ್ಕೆ ಶಾಸಕ ರುದ್ರೇಗೌಡರ ಸಂತಾಪ

ಕನ್ನಡದ ಮೇರುನಟ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಪುನೀತ್ ರಾಜ್ ಕುಮಾರ್ ಅವರ ನಿಧನಕ್ಕೆ ವಿಧಾನಪರಿಷತ್ ಶಾಸಕ ಹಾಗೂ ಕೈಗೋರಿಕೊದ್ಯಮಿ ಎಸ್.ರುದ್ರೇಗೌಡ ತೀವ್ರ ಕಂಬನಿ ಮಿಡಿದಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ ಅಭಿನಯಕ್ಕೆ ಮನಸೋತವರಲ್ಲಿ ನಾನೂಒಬ್ಬ. ಅವರಿಗೆ ಅಭಿಮಾನಿಯಾಗಿದ್ದೇನೆ. ಅವರ ಚಿತ್ರರಂಗದ ಸಾಧನೆ, ಜೊತೆಗೆ ಸಮಾಜ ಮುಖಿ ಕಾರ್ಯಗಳು ನಾಡಿಗೆ ಆದರ್ಶ ಹಾಗೂ ಮಾದರಿಯಾಗಿವೆ. ಅವರ ಆಕಾಲಿಕ ನಿಧನಕ್ಕೆ ಕಂಬನಿ ಮಿಡಿದಿರುವ ರುದ್ರೇಗೌಡರು ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟುಂಬವರ್ಗಕ್ಕೆ ಹಾಗೂ ಅಸಂಖ್ಯಾತ ಅಭಿಮಾನಿಗಳಿಗೆ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

ನದಿಯಲ್ಲಿ ಮಹಿಳೆ ಶವಪತ್ತೆ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪಟ್ಟಣದ ತುಂಗಾ ನದಿಯಲ್ಲಿ ಇಂದು ಬೆಳಗ್ಗೆ ಮಹಿಳೆಯೋರ್ವರ ಶವ ತೇಲುತ್ತಿರುವುದು ಪತ್ತೆಯಾಗಿದೆ. ತೆಪ್ಪೋತ್ಸವ ನಡೆಯುವ ನದಿಯ ಅಂಗಳದಲ್ಲಿ ಶವ ತೇಲುತ್ತಿರುವುದನ್ನು ಸಾರ್ವಜನಿಕರು ಗುರುತಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತ ಮಹಿಳೆಯ ಗುರುತು ಪತ್ತೆ ಕಾರ್ಯ ಈಗ ನಡೆಯಬೇಕಿದೆ.

ಜೂಜುಕೋರರ ಬಂಧನ

ಶಿವಮೊಗ್ಗ ಜಿಲ್ಲೆಯ ಸೊರಬ ಪಟ್ಟಣದಲ್ಲಿ ಹಾಗೂ ಶಿರಾಳಕೊಪ್ಪ ಕ್ರಾಸ್‌ಬಳಿ ಓಸಿ ಜೂಜಾಟದಲ್ಲಿ ತೊಡಗಿದ್ದ ಇಬ್ಬರನ್ನು ಬಂಧಿಸುವಲ್ಲಿ ಆಯಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಸೊರಬ ಪಟ್ಟಣದ ಬಸ್‌ನಿಲ್ದಾಣದ ಬಳಿ ಓರ್ವನನ್ನು ಬಂಧಿಸಲಾಗಿದ್ದು, ಶಿರಾಳಕೊಪ್ಪದಲ್ಲಿಯೂ ಸಹ ಓರ್ವನನ್ನು ಬಂಧಿಸಲಾಗಿದೆ.

ಅಕ್ರಮ ಮದ್ಯಮಾರಾಟ

ಕಾನೂನು ಬಾಹಿರವಾಗಿ ಮದ್ಯಮಾರಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಭದ್ರಾವತಿ ಕಾಗದನಗರ ಪೊಲೀಸರು ಪತ್ತೆಹಚ್ಚಿ ಆರೋಪಿಯನ್ನು ಬಂಧಿಸಿ ಸುಮಾರು ೩೫೧೬ ರೂ. ಮೌಲ್ಯದ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ.
ಭದ್ರಾವತಿ ೬ನೇ ವಾರ್ಡ್‌ನ ಮಿಲ್ಟ್ರೀ ಹೋಟೆಲ್‌ನಲ್ಲಿ ಪ್ರಕರಣವನ್ನು ಪತ್ತೆಹಚ್ಚಲಾಗಿದೆ.

ಅಡಕೆ ಕಳುವು

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಅಕ್ಕಿಮನೆ ಸಂಗಳ ಗ್ರಾಮದಲ್ಲಿ ಸುಮಾರು ೮ಕಿಂಟ್ವಲ್ ಹಸಿ ಅಡಕೆಯನ್ನು ಕಳ್ಳರು ಕದ್ದೋಯ್ದಿರುವ ಘಟನೆ ವರದಿಯಾಗಿದೆ.
ಸುಮಾರು ೪೫ ಸಾವಿರ ರೂ ಮೌಲ್ಯದ ಅಡಿಕೆಯನ್ನು ಕಳ್ಳತನ ಮಾಡಲಾಗಿದೆ ಎಂದು ಸಾಗರ ಗ್ರಾಮಾಂತರ ಪೊಲೀಸರಿಗೆ ದೂರು ನೀಡಲಾಗಿದೆ.

ಅಪರಿಚಿತ ವಾಹನ ಡಿಕ್ಕಿ : ಸಾವು

ಭದ್ರಾವತಿ ತಾಲ್ಲೂಕು ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ಸಂಜೆ ಬೈಕ್‌ವೊಂದಕ್ಕೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವು ಕಂಡಿದ್ದಾರೆ.
ಆಗರದಳ್ಳಿ ಕ್ಯಾಂಪ್‌ನ ಬಳಿ ಈ ಘಟನೆ ನಡೆದಿದ್ದು, ಮೃತ ಬೈಕ್‌ಸವಾರನನ್ನು ಶಾಂತಕುಮಾರ್ ಎಂದು ಗುರುತಿಸಲಾಗಿದೆ. ಬೈಕ್‌ಗೆ ಡಿಕ್ಕಿ ಹೊಡೆದ ವಾಹನ ಪರಾರಿಯಾಗಿದೆ.
ಹೊಳೆಹೊನ್ನೂರು ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಮೀನು ಹಿಡಿಯಲು ಹೋದವ ನೀರುಪಾಲು

ಜಿಲ್ಲೆಯ ಶಿಕಾರಿಪುರ ತಾಲ್ಲೂಕು ತುಮರಿ ಹೊಸೂರು ಗ್ರಾಮದಲ್ಲಿ ಮೀನು ಹಿಡಿಯಲು ಹೋದ ವ್ಯಕ್ತಿಯೋರ್ವ ಕೆರೆಯಲಿ ಮುಳುಗಿ ಸಾವು ಕಂಡ ಘಟನೆ ನಿನ್ನೆ ನಡೆದಿದೆ.
ಹೊಸೂರು ಗ್ರಾಮದ ಶಾನುಭೋಗರ ವಡ್ಡದ ಕೆರೆಯಲ್ಲಿ ಮೀನು ಹಿಡಿಯಲು ಹೋದ ಚಿಕ್ಕಜಂಬೂರಿನ ನಾಗರಾಜ್ ಮೃತ ದುರ್ದೈವಿ. ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

By admin

ನಿಮ್ಮದೊಂದು ಉತ್ತರ

You missed

error: Content is protected !!