ಶಿವಮೊಗ್ಗ: ಪದ್ಮಶ್ರೀ ಪಂಡಿತ್ ಎಂ.ವೆಂಕಟೇಶ ಕುಮಾರ ಅವರು ದೇಶ, ವಿದೇಶಗಳಲ್ಲಿ ನೂರಾರು ಸಂಗೀತ ಕಾರ್ಯಕ್ರಮ ನೀಡಿ ಹಿಂದೂಸ್ತಾನಿ ಸಂಗೀತ ರಸಿಕರ ಹೃದಯಗಳಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ. ಸಂಗೀತ ಕ್ಷೇತ್ರದ ದಿಗ್ಗಜರ ಪ್ರಶಂಸೆಗೆ ಒಳಗಾಗಿರುವ ಅಪೂರ್ವ ಗಾಯಕರಾಗಿರುವ ವೆಂಕಟೇಶ್ ಅವರು ಸಂಗೀತ ಕ್ಷೇತ್ರದ ಮೇರು ಕಲಾವಿದ ಎಂದು ಸಪ್ತಸ್ವರ ಸಂಗೀತ ಸಭಾದ ಗೌರವಾಧ್ಯಕ್ಷ ಭಾಸ್ಕರ್ ಜಿ. ಕಾಮತ್ ಬಣ್ಣಿಸಿದರು.


ಧಾರವಾಡದ ಜಿ.ಬಿ.ಜೋಷಿ ಮೆಮೋರಿಯಲ್ ಟ್ರಸ್ಟ್, ಹುಬ್ಬಳ್ಳಿಯ ಕ್ಷಮತಾ, ಇನ್‌ಫೋಸಿಸ್, ಎಲ್‌ಐಸಿ, ಎಲ್‌ಐಸಿ ಹೆಚ್‌ಎಫ್‌ಎಲ್, ಕೇಂದ್ರ ಸಂಸ್ಕೃತಿ ಸಚಿವಾಲಯ ಸಹಯೋಗದಲ್ಲಿ ಸ್ಥಳೀಯವಾಗಿ ಸಪ್ತಸ್ವರ ಸಂಗೀತ ಸಭಾ ಮತ್ತು ವಿವಿಡ್ ಲಿಪಿ ಆಯೋಜನೆಯಲ್ಲಿ ಭಾರತ ರತ್ನ ಪಂಡಿತ್ ಭೀಮಸೇನ ಜೋಶಿ ಇವರ ಜನ್ಮ ಶತಮಾನೋತ್ಸವದ ಅಂಗವಾಗಿ ಕುವೆಂಪು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮದ ಅಂತ್ಯದಲ್ಲಿ ಸಂಗೀತ ಕಲಾವಿದರನ್ನು ಅಭಿನಂದಿಸಿ ಅವರು ಸಾಂಕೇತಿಕವಾಗಿ ಮಾತನಾಡಿದರು.


ಮಧುರಮಯ ಧ್ವನಿಯ ಗಾಯಕ ವೆಂಕಟೇಶ್ ತಮ್ಮ ಗಾನಸುಧೆಯಿಂದ ಜನಪ್ರಿಯರಾಗಿದ್ದಾರೆ. ಭಾವ ತುಂಬಿ ಹಾಡುವ ಈ ಅಪ್ರತಿಮ ಕಲಾವಿದರು ಶಿವಮೊಗ್ಗಕ್ಕೆ ಬಂದು ಇಲ್ಲಿನ ಸಂಗೀತ ಪ್ರೇಮಿಗಳಿಗೆ ಸಂಗೀತದ ರಸದೌತಣವನ್ನು ಉಣ ಬಡಿಸಿದ್ದಾರೆ. ಇದೊಂದು ಅಪರೂಪದ, ಅಪೂರ್ವವಾದ ಕಾರ್ಯಕ್ರಮ ಎಂದರು.
ಇದಕ್ಕೂ ಮುನ್ನ ವೆಂಕಟೇಶ್ ಅವರು ಸುಮಾರು ಎರಡು ಗಂಟೆ ಅದ್ಭುತವಾಗಿ ಗಾಯನ ನಡೆಸಿದರು. ಇವರಿಗೆ ಪ್ರಸಿದ್ಧ ತಬಲ ವಾದಕ ಪಂಡಿತ್ ಕೇಶವ ಜೋಶಿ ಹಾಗೂ ಹಾರ್ಮೋನಿಯಂನಲ್ಲಿ ಸತೀಶ್ ಭಟ್ ಹೆಗ್ಗಾರು ಸಾಥ್ ನೀಡಿದರು.


ಇದೇ ಸಂದರ್ಭದಲ್ಲಿ ಯುವ ಗಾಯಕ ಶ್ರೀನಿವಾಸ ಹಂಪಿಹೊಳಿ ಗಾಯನ ನಡೆಸಿದರೆ, ಸಂಗೀತ ಸಾಧಕಿ ಪ್ರಶಸ್ತಿ ಪುರಸ್ಕೃತೆ ರೇಖಾ ಅರುಣ ಹಂಪಿಹೊಳಿ ಹಾರ್ಮೋನಿಯಂ, ದತ್ತಾತ್ರೇಯ ಜೋಷಿ ತಬಲಾ ಸಾಥ್ ನೀಡಿದರು.
ಸಂಸ್ಥೆಯ ಅಧ್ಯಕ್ಷ ಅರುಣ್ ಹಂಪಿಹೊಳಿ, ಉಪಾಧ್ಯಕ್ಷ ಆರ್. ಅಚ್ಯುತರಾವ್, ಕಾರ್ಯದರ್ಶಿ ಕೆ.ಜಿ.ಕುಮಾರ ಶಾಸ್ತ್ರಿ, ವಿವೇಕಾನಂದ ನಾಯಕ್, ಎನ್.ಹೆಚ್. ದೇವುಕುಮಾರ್, ದ್ವಾರಕನಾಥ್, ಸಾಹಿತಿ ಎಂ.ಎನ್.ಸುಂದರರಾಜ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!