ಶಿವಮೊಗ್ಗ ಗ್ರಾಮಾಂತರ ಶಾಸಕರ ವಿರುದ್ಧ ಕಾಂತರಾಜ್ ಸೋಮಿನಕೊಪ್ಪ ಗಂಭೀರ ಆರೋಪ
ಶಿವಮೊಗ್ಗ ಗ್ರಾಮಾಂತರ ಶಾಸಕರ ಕ್ರಿಯಾಶೀಲತೆ ನಿಜಕ್ಕೂ ಬೇಸರ ಹುಟ್ಟಿಸುವಂತಿದೆ. ಯಾವುದೇ ಅಭಿವೃದ್ಧಿ ಕಾರ್ಯಗಳು, ಜನಪಯೋಗಿ ಕಾರ್ಯಗಳು ನಡೆಯುತ್ತಿಲ್ಲ. ಭಾರತೀಯ ಜನತಾ ಪಕ್ಷದ ಬೂತ್ ಕಮಿಟಿ ಅವರಿಗಾಗಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಬಡವರ ಅನ್ನಕಿತ್ತುಕೊಂಡು ಬೂತ್ ಪದಾಧಿಕಾರಿಗಳಿಗೆ ಹಂಚಿದ್ದಾರೆ ಎಂದು ಶಿವಮೊಗ್ಗ ಗ್ರಾಮಾಂತರ ಜೆಡಿಎಸ್ ಅಧ್ಯಕ್ಷ ಸೋಮಿನಕೊಪ್ಪ ಕಾಂತರಾಜ್ ಇಂದಿಲ್ಲಿ ಗಂಭೀರ ಆರೋಪ ಮಾಡಿದರು.
ನಾವು ಮಾಡುತ್ತಿರುವ ಆಪಾದನೆಗಳಿಗೆ ಶಾಸಕರು ಸ್ಪಷ್ಟನೆ ನೀಡುವುದು ಬೇಡ. ಇಲ್ಲಿಯವರೆಗೆ ಹಿಂದಿನ ಶಾಸಕರಾದ ಶಾರದಾ ಪೂರ‍್ಯಾನಾಯ್ಕ್ ಒತ್ತಾಸೆ ಮೇರೆಗೆ ಅಂದಿನ ಸರ್ಕಾರ ಸಚಿವರ ಮೂಲಕ ತಂದ ಅನುದಾನವನ್ನು ಸಮರ್ಪಕವಾಗಿ ಇಲ್ಲಿಯವರೆಗೂ ಬಳಸಿಕೊಂಡಿಲ್ಲ. ಸುಳ್ಳು ಆಶ್ವಾಸನೆ ನೀಡುವುದರಲ್ಲೇ ದಿನ ದೂಡುತ್ತಿದ್ದಾರೆ ಎಂದು ಅವರು ಇಂದು ಬೆಳಗ್ಗೆ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ನಾವು ಮಾಡುವ ಆರೋಪಗಳು ಸ್ಪಷ್ಟವಾಗಿವೆ. ಇಲ್ಲಿ ಸಂಸದರ ಬಗ್ಗೆ ಆಗಲೀ, ಸಚಿವರ ಬಗ್ಗೆ ಆಗಲೀ, ಬಿಜೆಪಿ ವಿರುದ್ಧವಾಗಲೀ ಆಕ್ಷೇಪ ಬರುತ್ತಿಲ್ಲ. ಅವರು ಮಾಡಿರುವ ಐದಾರು ಉದಾಹರಣೆಯ ಕಾರ್ಯಕ್ರಮವನ್ನು ಅವಲೋಕಿಸಿದಾಗ ನಿಮಗೆ ಅರ್ಥವಾಗುತ್ತದೆ ಎಂದರು.
ಶಿವಮೊಗ್ಗ ತಾಲ್ಲೂಕು ಕಛೇರಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ
ಶಿವಮೊಗ್ಗ ಗ್ರಾಮಾಂತರ ವಿಚಾರದಲ್ಲಿ ವೃದ್ದಾಪ್ಯ, ವಿಧವಾ ವೇತನ ಮಂಜೂರು, ಜಮೀನುಗಳ ಖಾತೆ ಬದಲಾವಣೆ ಮೊದಲಾದವುಗಳಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ. ಇಲ್ಲಿನ ಗ್ರಾಮಾಂತರ ಹಾಗೂ ನಗರ ಪ್ರದೇಶದ ಕಾರ್ಯಗಳಲ್ಲಿ ನೌಕರರಿಗೆ ನೀಡಬೇಕಾದ ಮಾಮೂಲಿ ವ್ಯವಹಾರ ಮಿತಿಮೀರಿದೆ ಕನಿಷ್ಠ ಶಾಸಕರು ಇತ್ತ ಗಮನಿಸಿ ಅದನ್ನು ತಪ್ಪಿಸುವ ಚಿಕ್ಕ ಪ್ರಯತ್ನ ನಡೆದಿಲ್ಲ.
ಸೋಮಿನಕೊಪ್ಪ ಕಾಂತರಾಜ್
ಏತನೀರಾವರಿ ಯೋಜನೆಯಲ್ಲಿ ಹಿಂದಿನ ಸಚಿವ ಪುಟ್ಟರಾಜು ಅವರು ಬಿಡುಗಡೆ ಮಾಡಿದ್ದ ೮.೦೫ಕೋಟಿ ಅನುದಾನದಲ್ಲಿ ಹೇಗೋ ಆಲ್ದಳ್ಳಿವರೆಗೆ ನೀರು ಬಂದಿದೆ. ಸಮ್ಮಿಶ್ರ ಸರ್ಕಾರದ ಕಾಲದಲ್ಲಿ ಮಾಡಿದ್ದ ಕಾರ್ಯವಿದು ಆದರೆ ಮಂಡಗಟ್ಟ ಕೆರೆಯಿಂದ ಚೌಡಿಕೆರೆಗೆ ನೀರು ತುಂಬುವ ಹಾಗೂ ೧೫ ಕೆರೆಗಳಿಗೆ ನೀರುಣಿಸುವ ೩೦ ಕೋಟಿ ರೂ. ಕಾಮಗಾರಿ ಹಿಂದೆಯೇ ಮಂಜೂರಾಗಿದ್ದರೂ ಅದನ್ನು ಸಮರ್ಪಕವಾಗಿ ಬಳಸಿಕೊಂಡಿಲ್ಲ. ಒಂದು ಅಡಿ ಪೈಪನ್ನು ಮೂರು ಭಾಗ ಮಾಡಿ ಮೂರು ಇಂಚುಗಳ ಪೈಪ್ ಹಾಕಿದ್ದಾರೆ. ಹತ್ತಾರು ಎಕರೆ ಇರುವ ಕೆರೆಗಳು ಈ ಮೂರು ಇಂಚಿನ ಪೈಪಿನ ನೀರಿನಲ್ಲಿ ತುಂಬುತ್ತವೇಯೇ. ಸಣ್ಣ ಜ್ಞಾನ ಇಲ್ಲದ ಇಂಜಿನಿಯರ್‌ಗಳಿಗೆ ತಿದ್ದಿ ಬುದ್ದಿಹೇಳುವ ಕಾರ್ಯವನ್ನು ಶಾಸಕರು ಮಾಡಿಲ್ಲ.
ಅರಣ್ಯ ಹಕ್ಕು ಜಾರಿ ಹಾಗೂ ಬಗರ್‌ಹುಕ್ಕುಂ ಸಮಿತಿಯ ಅಧ್ಯಕ್ಷರೂ ಆಗಿರುವ ಶಾಸಕರು ಈ ಸಂಬಂಧ ಈ ಕಾರಣ ಹೇಳಿ ಒಂದೇ ಒಂದು ಸಭೆ ನಡೆಸಿಲ್ಲ. ಕರ್ಮಕ್ಕೆ ಇಡೀ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮೂರು ವರ್ಷಗಳಿಂದ ಬಸವ ಹಾಗೂ ಇಂದಿರಾ ಆವಾಸ್ ಯೋಜನೆಯಡಿ ಒಂದೇ ಒಂದು ಮನೆ ಕೊಡಿಸಿಲ್ಲ ಎಂದು ಆರೋಪಿಸಿದರು.
ಸುಳ್ಳುಹೇಳಬೇಡಿ: ಹಿಂದೆ ರೈಲ್ವೆ ಯೋಜನೆಯ ಉದ್ದೇಶಕ್ಕೆ ಎಡವಾಲ, ಹಿತ್ತೂರು, ಮುದುವಾಲ ಮೊದಲಾದ ಕಡೆ ರೈತರು ಭೂಮಿಯನ್ನು ಸರ್ಕಾರಕ್ಕೆ ನೀಡಿದ್ದರು. ಅವರಿಗೆಲ್ಲಾ ಕನಿಷ್ಟ ೪೦ ಲಕ್ಷ ಕೊಡಿಸುತ್ತೇನೆ ಎಂದು ಎಲ್ಲೆಡೆ ಸುಳ್ಳು ಹೇಳಿದ್ದ ಶಾಸಕರು ಗರಿಷ್ಟ ೧೫, ಕನಿಷ್ಟ ೬ ಲಕ್ಷ ಮಾತ್ರ ಹಣ ನೀಡಿರುವುದನ್ನು ಗಮನಿಸಿಯೇ ಇಲ್ಲವೆಂದರು.
ಶಾಸಕರ ಬಗ್ಗೆ ಮಾತ್ರ ಮಾಡುತ್ತಿರುವ ಆರೋಪ ಸ್ಪಷ್ಟನೆಗೆ ಅಲ್ಲ. ಕಾರ್ಮಿಕ ಇಲಾಖೆ ಕೊಡಮಾಡಿದ ಕಿಟ್‌ಗಳನ್ನು ತಮ್ಮ ಅಕ್ಷರ ಕಾಲೇಜಿನಲ್ಲಿ ಇಟ್ಟುಕೊಂಡು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಬೂತ್ ಪದಾಧಿಕಾರಿಗಳಿಗೆ ಮಾತ್ರ ಕೊಟ್ಟಿರುವುದನ್ನು ಜನ ಗಮನಿಸಿದ್ದಾರೆ. ಇದಕ್ಕೆ ಪಾಠ ಕಲಿಸುತ್ತಾರೆ. ತಾವು ಉಳಿದ ಅವಧಿಯಲ್ಲಾದರೂ ಜನಪರ ಕಾರ್ಯಕ್ರಮಗಳನ್ನು ಮಾಡಿ, ಶಿವಮೊಗ್ಗ-ಹೊಳೆಹೊನ್ನೂರು ಕಾಮಗಾರಿ ರಸ್ತೆ ಅಷ್ಟೋಂದು ಹಾಳಾಗಿದ್ದರೂ ಅದಕ್ಕೊಂದು ಬೇಡಿಕೆಯನ್ನು ಇಡಲಾಗಿಲ್ಲ. ಕೆಲಸ ಮಾಡಿ ಎಂಬುದಷ್ಟೆ ನಮ್ಮ ಒತ್ತಾಯ ಎಂದು ಕಾಂತರಾಜ್ ಹೇಳಿದರು.