ಮಾಜಿ ಮುಖ್ಯಮಂತ್ರ ಹೆಚ್‌ಡಿ ಕುಮಾರಸ್ವಾಮಿ ಘೋಷಣೆ
ಭದ್ರಾವತಿ,ಸೆ.21:
ಮುಂಬರುವ ವಿಧಾನಸಭಾ ಚುನಾವಣೆಗೆ ಯಾರೂ ಸಜ್ಜಾಗಿಲ್ಲ. ಸಮಯ ಇದೆ ಎಂದು ಕಾಯುತ್ತಿದ್ದಾರಷ್ಟೆ. ಮತಗಳ ಬೇಟೆ ಜೊತೆ ಪಕ್ಷಗಳ ಟಿಕೇಟಿಗೆ ಕಾಲ ಕಾಯುತ್ತಿದ್ದಾರೆ.
ಇದೇ ಮೊದಲಬಾರಿ ವಿಧಾನಸಭಾ ಚುನಾವಣೆಗೆ ಕ್ಷೇತ್ರವೊಂದರ ಅಧಿಕೃತ ಅಭ್ಯರ್ಥಿಯನ್ನು ಜೆಡಿಎಸ್ ನಿಂದ ಘೋಷಿಸಲಾಗಿದೆ.
ಭದ್ರಾವತಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಶಾಸಕ ದಿ. ಅಪ್ಪಾಜಿಗೌಡರ ಪತ್ನಿ ಶಾರದಾ ಅವರ ಹೆಸರನ್ನು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ಮದ್ಯಾಹ್ನ ಘೋಷಣೆ ಮಾಡಿದ್ದಾರೆ.
ಗೋಣಿ ಬೀಡಿನಲ್ಲಿ ದಿ. ಅಪ್ಪಾಜಿ ಗೌಡರ ಪುತ್ಥಳಿ ಅನಾವರಣದ ಬಳಿಕ ಮಾತನಾಡಿದ ಅವರು, ಭದ್ರಾವತಿ ಕ್ಷೇತ್ರದ ಜನರ ಪಕ್ಷದ ಹಾಗೂ ಅಪ್ಪಾಜಿ ಗೌಡರ ಬೆಂಬಲಿಗರ ಧ್ವನಿಗೆ ನಾನು ಬೆಲೆ ಕೊಡುತ್ತೇನೆ. ಕ್ಷೇತ್ರದ ಜನರ ಅಭಿಪ್ರಾಯ ನಮಗೆ ಮುಖ್ಯ. ಇಲ್ಲಿನ ಜನತೆ ತಮ್ಮ ಅಭ್ಯರ್ಥಿ ಯಾರು ಎಂದು ಈಗಲೇ ನಿರ್ಧರಿಸಿದ್ದಾರೆ. ಎಲ್ಲರ ಇಚ್ಛೆಯಂತೆ ಶಾರದಾ ಅಪ್ಪಾಜಿ ಗೌಡರನ್ನು ತಮ್ಮ ಪಕ್ಷದ ಅಭ್ಯರ್ಥಿಯನ್ನಾಗಿ ಮಾಡುತ್ತೇವೆ ಎಂದರು.
ಇದೇ ತಿಂಗಳ 27ರಂದು ಬೆಂಗಳೂರಿನಲ್ಲಿ ಪಕ್ಷದ ಕಾರ್ಯಾಗಾರ ನಡೆಯಲಿದ್ದು, ಉಳಿದ ವಿಚಾರಗಳನ್ನು ಅಂದು ಚರ್ಚೆ ಮಾಡುತ್ತೇವೆ. ಮೊದಲ ಹಂತದಲ್ಲಿ 140 ಅಭ್ಯರ್ಥಿಗಳ ಕಾರ್ಯಾಗಾರ ನಡೆಯಲಿದ್ದು, ಅಲ್ಲಿ ಎಲ್ಲ ವಿಷಯಗಳ ಬಗ್ಗೆ ಚರ್ಚೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.
ಅಪ್ಪಾಜಿಗೌಡರು ಬದುಕಿದ್ದಷ್ಟು ಕಾಲ ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಏನೇ ಸಾಧನೆ ಮಾಡಿದ್ದರೂ, ಅದಕ್ಕೆ ಅವರ ಪತ್ನಿ ಶಾರದಾ ಅವರ ಸಹಕಾರವೇ ಪ್ರಮುಖ ಕಾರಣ. ಹೀಗಾಗಿ ಭದ್ರಾವತಿ ಜೆಡಿಎಸ್ ನೇತೃತ್ವವನ್ನು ಅವರಿಗೆ ವಹಿಸಿ, ನಿಮ್ಮ ಮನೆ ಮಗಳನ್ನು ನಿಮ್ಮ ಮಡಿಲಿಗೆ ಹಾಕಿದ್ದೇವೆ. ಅವರನ್ನು ಗೆಲ್ಲಿಸುವ ಜವಾಬ್ಧಾರಿ ಜನತೆಯ ಮೇಲಿದೆ ಎಂದರು.