ಶಿವಮೊಗ್ಗ: ಶಿವಮೊಗ್ಗ ನಗರದ ಬೊಮ್ಮನಕಟ್ಟೆ ಮುಖ್ಯ ರಸ್ತೆಯನ್ನು ಅಗಲೀಕರಣ ಮಾಡಬೇಕೆಂದು ಒತ್ತಾಯಿಸಿ ಮಹಾನಗರ ಪಾಲಿಕೆ ಮಾಜಿ ಸದಸ್ಯ ಇ. ವಿಶ್ವಾಸ್ ಇಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.

ಶಿವಮೊಗ್ಗ ನಗರದ ಬೊಮ್ಮನಕಟ್ಟೆ ಆಶ್ರಯ ಬಡಾವಣೆ, ಹಳೇ ಬೊಮ್ಮನಕಟ್ಟೆ ಹಾಗೂ ಸುತ್ತ ಮುತ್ತಲಿನ ಪ್ರದೇಶವು ಅತಿ ಹೆಚ್ಚು ಜನ ವಸತಿ ಹೊಂದಿದ ಪ್ರದೇಶವಾಗಿದ್ದು ಸುಮಾರು 12,000 ಸಾವಿರಕ್ಕೂ ಹೆಚ್ಚು ಮನೆಗಳು ಇರುವ ಪ್ರದೇಶವಾಗಿದೆ.

ನಗರದಿಂದ ಬೊಮ್ಮನಕಟ್ಟೆಗೆ ಸಂಪರ್ಕಿಸುವ ಏಕೈಕ ಮಾರ್ಗವಾದ ಫ್ರೀಡಂ ಪಾರ್ಕ್ ಪಕ್ಕದಿಂದ ಹಾದು ಹೋಗುವ ರಸ್ತೆಯು ಅತ್ಯಂತ ಕಿರಿದಾಗಿದ್ದು ವಾಹನ ಸಂಚಾರಕ್ಕೆ ಬಹಳ ತೊಂದರೆಯಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಈ ಪ್ರದೇಶವು ನಗರದಿಂದ ದೂರವಿರುವ ಕಾರಣ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಹಾಗೂ ಕಛೇರಿಗೆ ತೆರಳಲು ಪ್ರತಿಯೊಂದು ಮನೆಯಲ್ಲಿಯೂ ಒಂದು-ಎರಡು ವಾಹನಗಳನ್ನು ಹೊಂದಿರುತ್ತಾರೆ. ಅಲ್ಲದೆ ಶಾಲಾ ಸಮಯದಲ್ಲಿ ಹಲವಾರು ಶಾಲಾ ವಾಹನಗಳು, ನಗರ ಸಾರಿಗೆ ಬಸ್ಗಳು, ಖಾಸಗಿ ವಾಹನಗಳ ಓಡಾಟ ಈ ರಸ್ತೆಯಲ್ಲಿ ಹೆಚ್ಚಾಗಿದ್ದು ಹಲವು ಅಪಘಾತಗಳಿಗೆ ಕಾರಣವಾಗಿದೆ.

ಆದ್ದರಿಂದ ಈ ಪ್ರದೇಶದಲ್ಲಿ ಉಂಟಾಗುತ್ತಿರುವ ವಾಹನ ದಟ್ಟಣೆ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕೀರ್ತಿ ನಗರ ರೈಲ್ವೆ ಗೇಟ್ನಿಂದ ಬೊಮ್ಮನಕಟ್ಟೆ ಆಶ್ರಯ ಬಡಾವಣೆ ಕೊನೆಯ ಬಸ್ ನಿಲ್ದಾಣದವರೆಗೆ ರಸ್ತೆ ಅಗಲೀಕರಣ ಮಾಡಿ ದ್ವಿಪಥದ ಮಾರ್ಗವಾಗಿ ಬದಲಾಯಿಸಿದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ಹೇಳಲಾಗಿದೆ.

ಅಲ್ಲದೆ ಶಿವಮೊಗ್ಗ-ಸಾಗರ ರೈಲ್ವೇ ಮಾರ್ಗವು ಇದೇ ರಸ್ತೆಗೆ ಅಡ್ಡಲಾಗಿ ಹಾದು ಹೋಗಿದ್ದು ರೈಲುಗಳ ಸಂಚಾರದ ಸಮಯದಲ್ಲಿ ಕೀರ್ತಿ ನಗರ ಗೇಟ್ ಬಳಿ ವಾಹನ ದಟ್ಟಣೆಯು ಅಧಿಕವಾಗಿ ಸಂಚಾರಕ್ಕೆ ಪದೇ ಪದೇ ತೊಂದರೆ ಆಗುತ್ತಿದೆ. ಆದ್ದರಿಂದ ಇಲ್ಲಿ ರೈಲ್ವೇ ಮೇಲ್ಸೇತುವೆ ಕಾರ್ಯವನ್ನು ಆದಷ್ಟು ಶೀಘ್ರವಾಗಿ ಕೈಗೆತ್ತಿಕೊಂಡು ಪೂರ್ಣಗೊಳಿಸಿಕೊಡಬೇಕೆಂದು ಮನವಿಯಲ್ಲಿ ಕೋರಲಾಗಿದೆ.