ಶಿವಮೊಗ್ಗ: ಕಲಿಕಾ ಗುಣಮಟ್ಟದಲ್ಲಿ ಅನೇಕ ರೀತಿಯ ಸುಧಾರಣೆಗಳಾಗಿದ್ದು, ವಿದ್ಯೆಯ ಜತೆಗೆ ಅನೇಕ ಮೌಲ್ಯಗಳನ್ನು ಕಲಿಸುವ ಶಿಕ್ಷಣವನ್ನು ಜಾರಿಗೆ ತರಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಚಂದ್ರಪ್ಪ ಎಸ್.ಗುಂಡಪಲ್ಲಿ ಹೇಳಿದರು.

ಅವರು ಇಂದು ನಗರದ ಡಿವಿಎಸ್ ಸಂಯುಕ್ತ ಪ.ಪೂ.ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಸರ್ಕಾರ ದ್ವಿತೀಯ ಪಿ.ಯು.ಸಿ.ಗೆ 5 ಮಾಡೆಲ್ ಪತ್ರಿಕೆಗಳನ್ನು ನೀಡಿದ್ದು ಅವುಗಳನ್ನು ಓದಿದಲ್ಲಿ ವಿದ್ಯಾರ್ಥಿಗಳಿಗೆ ತುಂಬಾ ಪ್ರಯೋಜನವಾಗಲಿದೆ. ಡಿವಿಎಸ್ ಸಂಸ್ಥೆ ಅತ್ಯಂತ ಉತ್ತಮ ಶಿಕ್ಷಣ ಸಂಸ್ಥೆಯಾಗಿದ್ದು ಇಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಸ್ಥಾನ ಗಳಿಸಿದ್ದಾರೆ. ವಿದ್ಯೆಯ ಜತೆಗೆ ಹಿರಿಯರನ್ನೂ ಗೌರವಿಸುವುದು, ರಾಷ್ಟ್ರ ಪ್ರೇಮವನ್ನು ಬೆಳೆಸಿಕೊಳ್ಳುವುದು, ಮೌಲ್ಯಾಧಾರಿತ ಶಿಕ್ಷಣ ಪಡೆಯುವುದು ಅತೀ ಮುಖ್ಯ ಎಂದರು.

ಇನ್ನೋರ್ವ ಮುಖ್ಯ ಅತಿಥಿಗಳಾದ ಡಾ.ಗಿರೀಶ್ ಬಾಬು ಮಾತನಾಡಿ, ಬೇರೆಯವರ ನೆಮ್ಮದಿಗೆ ನೆರವಾಗುವುದೇ ಸಾರ್ಥಕ ಜೀವನವಾಗಿದೆ. ಬರೇ ಎಂಬಿಬಿಎಸ್ ಮಾತ್ರವಲ್ಲ. ಅಲ್ಲಿ ಸ್ಥಾನ ವಂಚಿತರಾದರೆ ಬಿಎಂಎಸ್, ಪಶುಸಂಗೋಪನೆ, ಯೋಗ ಮತ್ತು ನ್ಯಾಚುರೋಪಥಿ, ಯುನಾನಿ, ದಂತವೈದ್ಯ ವಿಭಾಗದಲ್ಲೂ ವೈದ್ಯರಾಗಬಹುದು. ಪ್ಯಾರಾ ಮೆಡಿಕಲ್ ಕೋರ್ಸುಗಳು, ವೈದ್ಯಕೀಯ ತಾಂತ್ರಿಕ ಕೋರ್ಸುಗಳು ಬಹಳಷ್ಟಿದ್ದು, ಅವುಗಳ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರು.

ಹೆಚ್ಚುವರಿ ರಕ್ಷಣಾಧಿಕಾರಿ ಕಾರಿಯಪ್ಪ ಮಾತನಾಡಿ ವಿಶ್ವದಲ್ಲಿ 2 ಮುಖ್ಯ ಪಿಡುಗುಗಳಿದ್ದು ಒಂದು ಸೈಬರ್ ಕ್ರೈಂ ಇನ್ನೊಂದು ಡ್ರಗ್ಸ್ ಎಡಿಕ್ಸ್ ಇವು ನಮ್ಮ ಬೆಳವಣಿಗೆಯನ್ನು ಕುಂಠಿತಗೊಳಿಸಿ ದೇಶದ ಆರ್ಥಿಕ ಸ್ಥಿತಿಯನ್ನು ಬುಡಮೇಲು ಮಾಡುತ್ತದೆ. ಅದೇ ರೀತಿ ಬಹುತೇಕ ಜನರು ಮತ್ತು ವಿದ್ಯಾರ್ಥಿಗಳು ಮೊಬೈಲ್ ಹೊಂದಿದ್ದು ಇಂಟರ್ ನೆಟ್ ಬಳಕೆ ಮಾಡುತ್ತಿದ್ದಾರೆ.

ಅದರಲ್ಲಿ ಒಳ್ಳೆಯದು, ಕೆಟ್ಟದ್ದು ಎರಡೂ ಇದೆ. ನಮ್ಮ ಜ್ಞಾನ ಬೆಳೆಸಲು ಉಪಯೋಗಿಸಬೇಕು. ಕೆಲವು ಆ್ಯಪ್ ಗಳು ನಿಮ್ಮ ಭವಿಷ್ಯವನ್ನೇ ಹಾಳುಮಾಡುತ್ತವೆ. ನೀವು ಏನನ್ನು ಹೆಚ್ಚು ಹೆಚ್ಚು ಮೊಬೈಲಿನಲ್ಲಿ ಹುಡುಕುತ್ತಿರುತ್ತೀರೋ ಅವು ಹೆಚ್ಚಾಗಿ ಬರುತ್ತಿರುತ್ತವೆ. ಅರಿವಿಲ್ಲದೆ ಮೋಸದ ಜಾಲದಲ್ಲಿ ಸಿಲುಕಿಕೊಳ್ಳುತ್ತೀರಿ. ತಂದೆ ತಾಯಿಯ ಆಸೆ ಪೂರೈಸಲು ಮತ್ತು ಒಳ್ಳೆಯ ಭವಿಷ್ಯಕ್ಕಾಗಿ ಹಾಗೂ ದೇಶದ ಒಳ್ಳೆಯ ಪ್ರಜೆಗಳಾಗಲು ಒಳ್ಳೆಯ ಹವ್ಯಾಸ ಬೆಳೆಸಿಕೊಳ್ಳಿ. ಸೈಬರ್ ಕ್ರೈಂ, ಮಾದಕ ವಸ್ತುಗಳ ಬಗ್ಗೆ ಎಚ್ಚೆತ್ತುಕೊಳ್ಳಿ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಸ.ಪ.ಪೂ.ಕಾಲೇಜಿನ ಪ್ರಾಂಶುಪಾಲ ಜೆ.ಎಫ್.ಕುಟ್ರಿ, ಸಂಸ್ಥೆಯ ಕಾರ್ಯದರ್ಶಿ ಎಸ್.ಪಿ.ದಿನೇಶ್, ನಿರ್ದೇಶಕ ರುದ್ರಪ್ಪ ಕೊಳಲೆ, ಡಾ.ಸತೀಶ್ ಕುಮಾರ್ ಶೆಟ್ಟಿ, ಡಾ.ಎಚ್.ಮಂಜುನಾಥ, ಕುಲಸಚಿವ ಪ್ರೊ.ಎಂ.ವೆಂಕಟೇಶ್, ಮುಖ್ಯೋಪಾಧ್ಯಾಯ ಶ್ರೀಧರ್ ಇದ್ದರು. ಬಿ.ಗೋಪಿನಾಥ್ ಅಧ್ಯಕ್ಷತೆ ವಹಿಸಿದ್ದರು.