ಶಿವಮೊಗ್ಗ: ಶಿಕ್ಷಣವೆಂಬುದು ನಾಲ್ಕು ಗೋಡೆಗಳ ನಡುವಿನ ಕಲಿಕೆಗೆ ಸೀಮಿತವಾಗದೆ, ಸಮಾಜದೊಂದಿಗೆ ಬೆರೆತು, ಅನುಭವಗಳ ಮೂಲಕ ಬದುಕಿನ ಮೌಲ್ಯಗಳನ್ನು ಅರಿತುಕೊಳ್ಳಬೇಕು ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ನಿರ್ದೇಶಕರಾದ ಎಂ.ಎಸ್.ಅನಂತದತ್ತ ಹೇಳಿದರು.

ಚೀಲೂರಿನ ರಾಷ್ಟ್ರೀಯ ಇಂಗ್ಲೀಷ್ ಪ್ರೌಢಶಾಲೆಯಲ್ಲಿ ಮಂಗಳವಾರ ಸಂಜೆ ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ ಬಿಎಡ್ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪೌರತ್ವ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಬದುಕಿನ ವೈವಿಧ್ಯಮಯ ಸಂಗತಿಗಳು, ಸಮಾಜದ ವಿವಿಧ ಸ್ತರಗಳ ಜನರ ಒಡನಾಟ ಹಾಗೂ ಸುತ್ತಮುತ್ತಲಿನ ವ್ಯಕ್ತಿತ್ವಗಳ ಜೀವನಾನುಭವಗಳು ಕಲಿಕೆಯ ಅಮೂಲ್ಯ ಪಾಠಗಳಾಗಬೇಕು. ಸುತ್ತಲಿನ ಸಾಧಕರಿಂದ ಪ್ರೇರಣೆ ಪಡೆದು, ಎಲ್ಲರೊಳಗೊಂದಾಗಿ ಬೆಳೆದು, ಅನುಭವದಿಂದ ಗಳಿಸಿದ ಜ್ಞಾನವನ್ನು ಬದುಕಿನಲ್ಲಿ ಸಾಕಾರಗೊಳಿಸಿಕೊಳ್ಳಬೇಕು ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಕೆ.ಚಿದಾನಂದ ಮಾತನಾಡಿ, ಮನುಷ್ಯ ಮನುಷ್ಯನಾಗಿ ಉಳಿಯಲು ಸಮಾಜದಲ್ಲಿ ಸಾಮಾಜಿಕ ಅಭಿಯಂತರರ ಅಗತ್ಯವಿದೆ. ಶಿಕ್ಷಕರು ತಮ್ಮ ವೃತ್ತಿಯನ್ನು ಕೇವಲ ಉದ್ಯೋಗವೆಂದು ಪರಿಗಣಿಸದೆ, ಬದ್ಧತೆ, ಆತ್ಮೀಯತೆ ಮತ್ತು ಮಾನವೀಯ ಮೌಲ್ಯಗಳೊಂದಿಗೆ ನಿರ್ವಹಿಸಿದಾಗ ಮಾತ್ರ ಶಿಕ್ಷಣ ಕ್ಷೇತ್ರದಲ್ಲಿ ಪರಿಪೂರ್ಣತೆ ಸಾಧ್ಯ.

ವಿದ್ಯಾರ್ಥಿಗಳಲ್ಲಿ ಪಠ್ಯಜ್ಞಾನದ ಜೊತೆಗೆ ಬದುಕಿನ ಮೌಲ್ಯಗಳು ಹಾಗೂ ಸಾಮಾಜಿಕ ಪ್ರಜ್ಞೆಯನ್ನು ಬೆಳೆಸುವ ಜವಾಬ್ದಾರಿಯೂ ಶಿಕ್ಷಕರ ಮೇಲಿದೆ ಎಂದರು.

ಮನುಷ್ಯ ಸಂಬಂಧಗಳಿಗೆ ಹೆಚ್ಚಿನ ಆದ್ಯತೆ ನೀಡುವಂತಹ ಕಾರ್ಯಚಟುವಟಿಕೆಗಳು ಇಂದಿನ ಸಮಾಜದಲ್ಲಿ ರೂಪುಗೊಳ್ಳಬೇಕು. ಕೃತಕ ಬುದ್ಧಿಮತ್ತೆ (ಎಐ) ಮಾಹಿತಿ ಒದಗಿಸಬಲ್ಲದು. ಆದರೆ ಆ ಮಾಹಿತಿಯನ್ನು ಮೌಲ್ಯಯುತ ಜ್ಞಾನವನ್ನಾಗಿ ಪರಿವರ್ತಿಸಿ, ಮಾನವೀಯ ಸಂವೇದನೆ ಮತ್ತು ವಿವೇಕವನ್ನು ಬೆಳೆಸುವ ಕಾರ್ಯದಲ್ಲಿ ಶಿಕ್ಷಕರ ಪಾತ್ರ ಅನನ್ಯವಾದುದು. ತಂತ್ರಜ್ಞಾನದ ಬೆಳವಣಿಗೆಯ ನಡುವೆಯೂ ಮಾನವೀಯ ಮೌಲ್ಯಗಳನ್ನು ಜೀವಂತವಾಗಿಡುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ.

ಎನ್ಇಎಸ್ ಸಾರ್ವಜನಿಕ ಸಂಪರ್ಕಾಧಿಕಾರಿ ಸಿ.ಎಂ. ನೃಪತುಂಗ ಮಾತನಾಡಿದರು. ಸಹಾಯಕ ಪ್ರಾಧ್ಯಾಪಕ ಡಾ. ಮಂಜು ಎನ್.ಡಿ. ಪ್ರಾಸ್ತಾವಿಕವಾಗಿ ಮಾತನಾಡಿದರು.