ಶಿವಮೊಗ್ಗ: ನಗರದ ಎಸ್.ಪಿ.ಎಂ. ರಸ್ತೆಯಲ್ಲಿರುವ ಇತಿಹಾಸ ಪ್ರಸಿದ್ಧ ನಗರದ ಕೋಟೆ ಶ್ರೀ ಮಾರಿಕಾಂಬ ದೇವಾಲಯದಲ್ಲಿ ಅ. 11ರಿಂದ 21ರವರೆಗೆ ಶರನ್ನವರಾತ್ರಿ ಉತ್ಸವ ಆಯೋಜಿಸಲಾಗಿದೆ.

ಉತ್ಸವದ ಅಂಗವಾಗಿ ಪ್ರತಿದಿನ ಬೆಳಿಗ್ಗೆ 8.30ರಿಂದ ಅಮ್ಮನವರಿಗೆ ಅಭಿಷೇಕ, ಅರ್ಚನೆ, ಪಾರಾಯಣ ಹಾಗೂ ಹೋಮ ನಡೆಯಲಿದ್ದು, ಬೆಳಿಗ್ಗೆ 11.30ಕ್ಕೆ ಪೂರ್ಣಾಹುತಿ, ಮಹಾಮಂಗಳಾರತಿ ಮತ್ತು ತೀರ್ಥಪ್ರಸಾದ ವಿನಿಯೋಗ ಇರಲಿದೆ. ಸಂಜೆ 6ರಿಂದ ರಾತ್ರಿ 8.30ರವರೆಗೆ ವಿವಿಧ ಮಹಿಳಾ ಮಂಡಳಿಗಳಿಂದ ಭಜನೆ ಕಾರ್ಯಕ್ರಮ ನಡೆಯಲಿದೆ.

ಪ್ರತಿದಿನ ದೇವಿಗೆ ವಿಶೇಷ ಅಲಂಕಾರ ಮಾಡಲಾಗುವುದು. ಅ. 11ರಂದು ಶೈಲಪುತ್ರಿ, 12ರಂದು ಬ್ರಹ್ಮಚಾರಿಣಿ, 13ರಂದು ಚಂದ್ರಘಂಟ, 14ರಂದು ಕೂಷ್ಮಾಂಡ, 15ರಂದು ಸ್ಕಂದಮಾತ, 16ರಂದು ಸರಸ್ವತಿ, 17ರಂದು ಕಾತ್ಯಾಯಿನಿ, 18ರಂದು ದುರ್ಗಾದೇವಿ, 19ರಂದು ಅನ್ನಪೂರ್ಣೇಶ್ವರಿ, 20ರಂದು ಮಹಿಷಾಸುರ ಮರ್ದಿನಿ ಹಾಗೂ 21ರಂದು ಚಂಡಿಕಾದುರ್ಗಾಪರಮೇಶ್ವರಿ ಅಲಂಕಾರ ನೆರವೇರಲಿದೆ.

ಅ. 18ರಂದು ದುರ್ಗಾಷ್ಟಮಿ ಪ್ರಯುಕ್ತ ಸಾಮೂಹಿಕ ಶ್ರೀ ಚಂಡಿಕಾ ಹೋಮ ಆಯೋಜಿಸಲಾಗಿದೆ. ಭಾಗವಹಿಸುವವರು ₹101 ನೀಡಿ ಮುಂಚಿತವಾಗಿ ಹೆಸರು ನೋಂದಾಯಿಸಿಕೊಳ್ಳಬೇಕು.

ಒಂದು ದಿನದ ಸರ್ವಸೇವೆಗೆ ₹1,201, ಹೂವಿನ ಅಲಂಕಾರ ಸೇವೆಗೆ ₹1,001 ಹಾಗೂ ಪ್ರಸಾದ ಸೇವೆಗೆ ₹3,000 ನಿಗದಿಪಡಿಸಲಾಗಿದೆ. ತುಲಾಭಾರ, ಉಯ್ಯಾಲೆ ಸೇವೆ ಹಾಗೂ ಪ್ರಾಕಾರೋತ್ಸವ ಮಾಡಿಸುವವರು ಮುಂಚಿತವಾಗಿ ಹೆಸರು ನೋಂದಾಯಿಸಿ ಸೇವಾ ರಶೀದಿ

ಪಡೆಯಬೇಕು ಎಂದು ಕೋಟೆ ಶ್ರೀ ಮಾರಿಕಾಂಬ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.