
ಶಿವಮೊಗ್ಗ,ಅ.11:
ಶಿವಮೊಗ್ಗ ನಗರದಲ್ಲಿ ನಾಡಹಬ್ಬ ದಸರಾ ಹಬ್ಬದ ಸಂತಸಮಯ ವಾತಾವರಣ ಈ ವರುಷವೂ ಪ್ರಜ್ವಲಿಸಿದೆ.

ಶಿವಮೊಗ್ಗ ಮಹಾನಗರ ಪಾಲಿಕೆಯ ಆವರಣದಲ್ಲಿ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ದಸರಾ ಮಹೋತ್ಸವಕ್ಕೆ ಇಂದು ಸಂಜೆ ಚಾಲನೆ ನೀಡಲಾಯಿತು.

ಪೂಜಾ ವಿಧಿವಿಧಾನಗಳ ಬಳಿಕ ಹೂವು ಹಾಗೂ ವಿವಿಧ ಅಲಂಕಾರಗಳಿಂದ ಸಿಂಗರಿಸಿದ ವಾಹನದಲ್ಲಿ ತಾಯಿ ಚಾಮುಂಡೇಶ್ವರಿ ದೇವಿಯನ್ನು ಪ್ರತಿಷ್ಠಾಪಿಸಿ, ಕೋಟೆ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದತ್ತ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.
ಡೊಳ್ಳು, ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆಗರ ಮೆರುಗು ನೀಡಿತು.

ತಾಯಿ ಚಾಮುಂಡೇಶ್ವರಿ ದೇವಿಯ ಮೆರವಣಿಗೆಗೆ ಸಾಂಪ್ರದಾಯಿಕ ಕಲಾತಂಡಗಳು ವಿಶೇಷ ಮೆರುಗು ನೀಡಿದ್ದವು. ಡೊಳ್ಳು ಹಾಗೂ ವಿವಿಧ ವಾದ್ಯಗೋಷ್ಠಿಗಳ ನಾದದ ನಡುವೆ ತಲೆಯ ಮೇಲೆ ಕಳಸ ಹೊತ್ತ ಮಹಿಳೆಯರು ಮೆರವಣಿಗೆಯಲ್ಲಿ ಸಾಗಿದರು. ಅಪಾರ ಸಾರ್ವಜನಿಕರು ದೇವಿಯ ದರ್ಶನ ಪಡೆದು ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿದ ಮೆರವಣಿಗೆಯು ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿತು. ದೇವಿಯ ಅಲಂಕೃತ ವಾಹನ ಸಾರ್ವಜನಿಕರ ಗಮನ ಸೆಳೆಯಿತು.
ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಉದ್ಘಾಟನಾ ಕಾರ್ಯಕ್ರಮ ಅತ್ಯಂತ ವಿಶೇಷವಾಗಿತ್ತು.

ಮಹಾನಗರ ಪಾಲಿಕೆಯ ಆವರಣದಿಂದ ಆರಂಭಗೊಂಡ ಮೆರವಣಿಗೆಯು ಶಿವಪ್ಪನಾಯಕ ಪ್ರತಿಮೆ ಹಾಗೂ ಬಿ.ಎಚ್. ರಸ್ತೆ ಮಾರ್ಗವಾಗಿ ಕೋಟೆ ಪ್ರದೇಶದ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನವನ್ನು ತಲುಪಿತು. ದೇವಸ್ಥಾನದಲ್ಲಿ ನಡೆದ ದಸರಾ ಆರಂಭದ ಕಾರ್ಯಕ್ರಮವನ್ನು ಹಿರಿಯ ಚಿತ್ರನಟ ಶ್ರೀನಾಥ್ ಉದ್ಘಾಟಿಸಿದರು.
ಪೂಜೆ, ಸಾಂಪ್ರದಾಯಿಕ ಮೆರವಣಿಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಶಿವಮೊಗ್ಗದ ದಸರಾ ಮಹೋತ್ಸವಕ್ಕೆ ಸಂಭ್ರಮದ ಆರಂಭ ದೊರೆತಿದ್ದು, ನಾಡಿನ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಪ್ರತಿಬಿಂಬಿಸುವ ದಸರಾ ಆಚರಣೆಯು ನಗರದಲ್ಲಿ ಹಬ್ಬದ ವಾತಾವರಣವನ್ನು ಹೆಚ್ಚಿಸಿದೆ.

ಮಲೆನಾಡಿನ ಜನರ ಪ್ರೀತಿ ಹಾಗೂ ಅಭಿಮಾನಕ್ಕೆ ಕನ್ನಡ ಚಿತ್ರರಂಗದ ಹಿರಿಯ ನಟ ಶ್ರೀನಾಥ್ ಅವರು ಕುಣಿದು ಕುಪ್ಪಳಿಸಿದರು. ಶಿವಮೊಗ್ಗದ ದಸರಾ ಮಹೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ಅಭಿಮಾನಿಗಳ ಆತ್ಮೀಯ ಸ್ವಾಗತ ಹಾಗೂ ಪ್ರೀತಿಗೆ ಸಂತಸ ವ್ಯಕ್ತಪಡಿಸಿ ಸಂಭ್ರಮಿಸಿದರು.

ದಸರಾ ಮಹೋತ್ಸವದ ಅಂಗವಾಗಿ ಕೋಟೆ ಪ್ರದೇಶದ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಶ್ರೀನಾಥ್ ಭಾಗವಹಿಸಿದರು. ಈ ಸಂದರ್ಭದಲ್ಲಿ ನೆರೆದಿದ್ದ ಅಭಿಮಾನಿಗಳು ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.
ಮಲೆನಾಡಿಗರ ಪ್ರೀತಿ, ಅಭಿಮಾನ ಹಾಗೂ ಉತ್ಸಾಹದ ವಾತಾವರಣದಲ್ಲಿ ಶ್ರೀನಾಥ್ ಅವರು ಸಂತಸದಿಂದ ಕುಣಿದು ಕುಪ್ಪಳಿಸಿದ್ದು, ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು. ನೆಚ್ಚಿನ ನಟನನ್ನು ಕಂಡ ಅಭಿಮಾನಿಗಳೂ ಸಂಭ್ರಮದಲ್ಲಿ ಭಾಗಿಯಾದರು.

ಪ್ರಣಯರಾಜನ ಜೊತೆ ಸೆಲ್ಫಿಗೆ ಮುಗಿಬಿದ್ದ ಅಭಿಮಾನಿಗಳು-
ಕಾರ್ಯಕ್ರಮ ಮುಗಿಯುತ್ತಿದ್ದಂತೆ ಪ್ರಣಯರಾಜ ಶ್ರೀನಾಥ್ ಅವರೊಂದಿಗೆ ಫೋಟೊ ಹಾಗೂ ಸೆಲ್ಫಿ ತೆಗೆಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು. ದೇವಸ್ಥಾನದ ಪಕ್ಕದಲ್ಲಿರುವ ಹೋಮ ನಡೆಯುವ ಪ್ರಾಂಗಣದಲ್ಲಿ ಅಭಿಮಾನಿಗಳು ನೆಚ್ಚಿನ ನಟನೊಂದಿಗೆ ಫೋಟೊ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.
ನೆಚ್ಚಿನ ನಟನೊಂದಿಗೆ ಫೋಟೊ ಹಾಗೂ ಸೆಲ್ಫಿ ತೆಗೆಸಿಕೊಂಡ ಅಭಿಮಾನಿಗಳ ಸಂತಸಪಟ್ಟರು.