ಶಿವಮೊಗ್ಗ: ಭದ್ರಾವತಿ ತಾಲ್ಲೂಕಿನ ಕಲ್ಲಿಹಾಳ್ ಗ್ರಾಮದಲ್ಲಿ ನೀರು ಹರಿಯುವ ಚಿಕ್ಕ ಕಾಲುವೆಯಲ್ಲಿ ನವಜಾತ ಹೆಣ್ಣು ಶಿಶುವಿನ ಶವ ಪತ್ತೆಯಾಗಿರುವ ಘಟನೆ ಅಕ್ಟೋಬರ್ ೯ರಂದು ಬೆಳಕಿಗೆ ಬಂದಿದೆ.

ಕಲ್ಲಿಹಾಳ್ ಗ್ರಾಮ ಪಂಚಾಯಿತಿಯಲ್ಲಿ ಬಿಲ್ ಕಲೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಬಿ. ಉಮೇಶ್ ಅವರು ಅಕ್ಟೋಬರ್ ೯ರಂದು ಗ್ರಾಮದಲ್ಲಿ ಕರ ವಸೂಲಿ ಕಾರ್ಯದಲ್ಲಿ ತೊಡಗಿದ್ದಾಗ, ಗ್ರಾಮದ ನಿವಾಸಿ ಸುಭದ್ರಮ್ಮ ಅವರ ಮನೆಯ ಹಿಂಭಾಗದಲ್ಲಿರುವ ಕಾಲುವೆಯಲ್ಲಿ ನವಜಾತ ಶಿಶುವನ್ನು ಹಾಕಿರುವ ಬಗ್ಗೆ ಮಾಹಿತಿ ಲಭಿಸಿದೆ.

ತಕ್ಷಣ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ನೀಲಿ ಬಣ್ಣದ ಬಟ್ಟೆಯಲ್ಲಿ ಸುತ್ತಿದ ಸ್ಥಿತಿಯಲ್ಲಿ ಶಿಶು ಪತ್ತೆಯಾಗಿದೆ. ಸ್ಥಳೀಯರ ಸಹಾಯದಿಂದ ಮಗುವನ್ನು ಕಾಲುವೆಯಿಂದ ಹೊರತೆಗೆದು ನೋಡಿದಾಗ, ಅದು ನವಜಾತ ಹೆಣ್ಣು ಶಿಶುವಾಗಿದ್ದು, ಮೃತಪಟ್ಟಿರುವುದು ಕಂಡುಬಂದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮಗುವಿನ ಜನನವನ್ನು ಗೌಪ್ಯವಾಗಿಡುವ ಉದ್ದೇಶದಿಂದ ಯಾರೋ ಶಿಶುವನ್ನು ಕಾಲುವೆಯಲ್ಲಿ ಹಾಕಿರಬಹುದು ಎಂಬ ಶಂಕೆಯನ್ನು ದೂರಿನಲ್ಲಿ ವ್ಯಕ್ತಪಡಿಸಲಾಗಿದೆ. ಆದರೆ, ಮಗುವನ್ನು ಯಾರು ಹಾಗೂ ಯಾವ ಸಂದರ್ಭಗಳಲ್ಲಿ ಕಾಲುವೆಗೆ ಹಾಕಿದ್ದಾರೆ ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.

ಈ ಸಂಬಂಧ ಬಿ. ಉಮೇಶ್ ಅವರು ಹೊಳೆಹೊನ್ನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ಈ ಮೇಲ್ಕಂಡ ನವಜಾತ ಶಿಶುವಿನ ಪೋಷಕರು ಅಥವಾ ಈ ಬಗ್ಗೆ ಮಾಹಿತಿ ಇದ್ದಲ್ಲೀ ಕೂಡಲೇ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ಕೋರಿದೆ. ಪೊಲೀಸ್ ಠಾಣೆ, ೦೮೨೮೨-೨೩೫೪೯೪ ಪಿ.ಐ ೯೪೮೦೮೦೩೩೫೯ ಗೆ ಸಂಪರ್ಕಿಸಲು ಠಾಣಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.