ಶಿವಮೊಗ್ಗ: 12ನೇ ಶತಮಾನದ ಸಮಾಜ ಸುಧಾರಕ, ಮಾನವತಾವಾದಿ ಹಾಗೂ ಸಾಂಸ್ಕೃತಿಕ ನಾಯಕ ಗುರು ಬಸವಣ್ಣನವರ ಕುರಿತು ವಿವಾದಾತ್ಮಕ ಕೃತಿ ರಚಿಸಿ ಪ್ರಕಟಿಸಿರುವ ಲೇಖಕ ರವಿ ಹಂಜ್ ಮತ್ತು ಪ್ರಕಾಶಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರಾಷ್ಟ್ರೀಯ ಬಸವದಳ ಟ್ರಸ್ಟ್ ಆಗ್ರಹಿಸಿದೆ.

ಈ ಸಂಬಂಧ ಟ್ರಸ್ಟ್ನ ಪದಾಧಿಕಾರಿಗಳು ಮಂಗಳವಾರ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಬಸವಣ್ಣನವರ ವ್ಯಕ್ತಿತ್ವ, ವಚನ ಸಾಹಿತ್ಯದ ಮೌಲ್ಯ ಹಾಗೂ ಕಲ್ಯಾಣ ಕ್ರಾಂತಿಯ ಇತಿಹಾಸವನ್ನು ಸಮಗ್ರವಾಗಿ ಅಧ್ಯಯನ ಮಾಡದೆ, ಸಂಶೋಧನೆಯ ಹೆಸರಿನಲ್ಲಿ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಪ್ರಯತ್ನ ಮಾಡಲಾಗಿದೆ. ಇದರಿಂದ ಬಸವತತ್ತ್ವದ ಅಭಿಮಾನಿಗಳಿಗೆ ನೋವುಂಟಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಸಂಶೋಧನೆಗಳು ಮಾನವ ಬದುಕಿನ ವಿಕಾಸಕ್ಕೆ ಪೂರಕವಾಗಿರಬೇಕೇ ಹೊರತು ದ್ವೇಷ, ಅಸೂಯೆಗಳಿಗೆ ಕಾರಣವಾಗಬಾರದು. ಬಸವಣ್ಣನವರ ವ್ಯಕ್ತಿತ್ವದ ಮಹತ್ವಕ್ಕೆ ಅವರ ವಚನಗಳೇ ಸಾಕ್ಷಿಯಾಗಿದ್ದು, ಅಂತಹ ಮಹಾನ್ ಸಂತನ ಘನತೆಗೆ ಧಕ್ಕೆ ತರುವುದು ನಾಡಿನ ಸಾಂಸ್ಕೃತಿಕ ಪರಂಪರೆಗೆ ಮಾಡಿದ ಅಪಚಾರವಾಗಿದೆ ಎಂದು ಹೇಳಿದ್ದಾರೆ.

ಲೇಖಕ ರವಿ ಹಂಜ್ ಹಾಗೂ ಪ್ರಕಾಶಕರ ವಿರುದ್ಧ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು. ಬಸವಣ್ಣನವರ ಘನತೆಗೆ ಧಕ್ಕೆ ತರುವ ಕೃತ್ಯಗಳನ್ನು ತಡೆಯಲು ಸೂಕ್ತ ಕಾನೂನು ರೂಪಿಸಬೇಕು ಎಂದು ಒತ್ತಾಯಿಸಿದ್ದಾರೆ.
ಟ್ರಸ್ಟ್ನ ಗೌರವ ಅಧ್ಯಕ್ಷ ಹಾಲಪ್ಪ, ಅಧ್ಯಕ್ಷ ರಾಮಪ್ಪ, ಯೋಗೀಶ್ ನಿರ್ವಿಕಲ್ಪ, ಅನುಸೂಯಮ್ಮ, ರತ್ನಮ್ಮ, ಶಿವರುದ್ರಪ್ಪ, ಎ.ಸಿ. ಮೂಲಿಮನಿ ಹಾಗೂ ಸತೀಶ್ ಇದ್ದರು.