ಭದ್ರಾ ಜಲಾಶಯದ ಬಲ ಮತ್ತು ಎಡದಂಡೆ ನಾಲೆಗಳಲ್ಲಿ ಸತತ 20 ದಿನ ನೀರು ಹರಿಸುವಂತೆ ಆಗ್ರಹಿಸಿ ನ.25ರಂದು ಪುರಲೆ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರೈತರ ಟ್ರ್ಯಾಕ್ಟರ್ ರ್ಯಾಲಿ ಹಾಗೂ ಮುತ್ತಿಗೆ ಹೋರಾಟ ಹಮ್ಮಿಕೊಳ್ಳಲಾಗಿದೆ. ಈ ಹೋರಾಟಕ್ಕೆ ಅರುಣೋದಯ ಜಿಲ್ಲಾ ಮಹಿಳಾ ಒಕ್ಕೂಟ ಬೆಂಬಲ ಸೂಚಿಸಿದೆ ಎಂದು ಅಖಿಲ ಕರ್ನಾಟಕ ಕಟ್ಟಡ ಹಾಗೂ ಅಸಂಘಟಿತ ಕಾರ್ಮಿಕರ ಒಕ್ಕೂಟ ಜಿಲ್ಲಾ ಘಟಕದ ಅಧ್ಯಕ್ಷ ಕೆ. ಸಂಜಯ್ ಕುಮಾರ್ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭದ್ರಾ ಜಲಾಶಯದಲ್ಲಿ 178 ಅಡಿಗಳಷ್ಟು ನೀರು ಸಂಗ್ರಹವಿದ್ದರೂ ಅಚ್ಚುಕಟ್ಟು ಪ್ರದೇಶದ ರೈತರಿಗೆ ಸಮರ್ಪಕವಾಗಿ ನೀರು ಒದಗಿಸಿಲ್ಲ. ಬೇಸಿಗೆಯಲ್ಲಿ ಬೆಳೆಗಳಿಗೆ ನೀರು ಸಿಗಬಹುದೆಂಬ ನಿರೀಕ್ಷೆಯಿಂದ ರೈತರು ಮಳೆಗಾಲದಲ್ಲಿ ಬೆಳೆ ಬೆಳೆಯದೆ ತ್ಯಾಗ ಮಾಡಿದ್ದಾರೆ. ಆದರೆ, ಭದ್ರಾ ಮೇಲ್ದಂಡೆ ಯೋಜನೆಗೆ ಸುಮಾರು 4 ಟಿಎಂಸಿ ನೀರು ಹರಿಸಿರುವುದರಿಂದ ಅಚ್ಚುಕಟ್ಟು ಪ್ರದೇಶದಲ್ಲಿ ನೀರಿನ ಅಭಾವ ಸೃಷ್ಟಿಯಾಗಿದೆ ಎಂದು ಆರೋಪಿಸಿದರು.

ಮಹಿಳಾ ಘಟಕ ಅಧ್ಯಕ್ಷೆ ಶಕುಂತಲಾ ಹಾಲೇಶ್ ಮಾತನಾಡಿ, ಭದ್ರಾ ನಾಲೆಗಳಿಗೆ 10 ದಿನ ನೀರು ಹರಿಸುವುದಾಗಿ ಭರವಸೆ ನೀಡಿದ್ದ ಸರ್ಕಾರ ಕೇವಲ ಮೂರು ದಿನಕ್ಕೆ ನೀರು ಸ್ಥಗಿತಗೊಳಿಸಿದೆ. ಇದರಿಂದ ಕೊನೆಯ ಭಾಗದ ರೈತರಿಗೆ ನೀರು ತಲುಪದೆ ಸಮಸ್ಯೆಯಾಗಿದೆ. ನೀರಿಗಾಗಿ ರೈತರ ನಡುವೆ ಸಂಘರ್ಷ ನಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ರೈತ ಸಂಘದ ಹೋರಾಟಕ್ಕೆ ಅರುಣೋದಯ ಒಕ್ಕೂಟ ದೊಡ್ಡ ಮಟ್ಟದಲ್ಲಿ ಬೆಂಬಲ ನೀಡಲಿದೆ ಎಂದು ತಿಳಿಸಿದರು.

ಸಾಮಾಜಿಕ ಹೋರಾಟಗಾರ ರಂಗನಾಥ ತಟ್ಟೆಹಳ್ಳಿ ಮಾತನಾಡಿ, ಸರ್ಕಾರ ತಕ್ಷಣ ನೀರಾವರಿ ಸಲಹಾ ಸಮಿತಿ ಸಭೆ ಕರೆದು 20 ದಿನ ನೀರು ಹರಿಸಬೇಕು. ಜನವರಿಯಿಂದ ಬೆಳೆಗಳಿಗೆ ನೀರು ಪೂರೈಸುವ ವೇಳಾಪಟ್ಟಿ ಪ್ರಕಟಿಸಬೇಕು ಎಂದು ಒತ್ತಾಯಿಸಿದರು.

ನಾಗವೇಣಿ, ವೀಣಾ, ವೇದಾವತಿ, ಮುರುಗೇಶ್, ಕೃಷ್ಣ, ಮಂಜು, ವೆಂಕಟೇಶ್, ವಸಂತ್ ಇದ್ದರು.