ಸೊರಬ : ಮಲೆನಾಡಿನ ಪೌರಾಣಿಕ ಹಾಗೂ ಐತಿಹಾಸಿಕ ಪ್ರಸಿದ್ಧ ಕ್ಷೇತ್ರವಾದ ತಾಲೂಕಿನ ಚಂದ್ರಗುತ್ತಿಯ ಶ್ರೀ ರೇಣುಕಾಂಬ ದೇವಸ್ಥಾನದ ಕಾಣಿಕೆ ಹುಂಡಿ ಎಣಿಕೆ ಕಾರ್ಯವು ಗುರುವಾರ ಆಡಳಿತ ಮಂಡಳಿ ಕಚೇರಿಯಲ್ಲಿ ಬಿಗಿ ಭದ್ರತೆಯ ನಡುವೆ ಯಶಸ್ವಿಯಾಗಿ ನೆರವೇರಿತು.

ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪ್ರಮೀಳಾ ಕುಮಾರಿ ಅವರ ನೇರ ಮೇಲ್ವಿಚಾರಣೆಯಲ್ಲಿ ಎಣಿಕೆ ಪ್ರಕ್ರಿಯೆ ನಡೆಯಿತು. ಪವಿತ್ರ ಶ್ರಾವಣ ಮಾಸ, ವಿವಿಧ ಹುಣ್ಣಿಮೆಗಳು ಹಾಗೂ ವಿಶೇಷ ಪೂಜಾ ದಿನಗಳಲ್ಲಿ ರಾಜ್ಯದ
ವಿವಿಧ ಭಾಗಗಳಿಂದ ಆಗಮಿಸಿದ್ದ ಲಕ್ಷಾಂತರ ಭಕ್ತಾದಿಗಳು ಶ್ರೀ ರೇಣುಕಾಂಬ ದೇವಿಗೆ ಶ್ರದ್ಧಾ-ಭಕ್ತಿಗಳಿಂದ ಸಮರ್ಪಿಸಿದ್ದ ಕಾಣಿಕೆ ಹುಂಡಿ ಹಣವನ್ನು ಈ ಸಂದರ್ಭದಲ್ಲಿ ಎಣಿಕೆ ಮಾಡಲಾಯಿತು.

ಕಳೆದ ಜೂನ್ ತಿಂಗಳಿನಲ್ಲಿ ಹುಂಡಿ ಎಣಿಕೆ ಮಾಡಿದಾಗ 33,90,580 ರೂ., ಕಾಣಿಕೆ ಹಣ ಸಂಗ್ರಹವಾಗಿತ್ತು.

ಈ ಬಾರಿ ಭಕ್ತರ ಸಂಖ್ಯೆ ಹೆಚ್ಚಿದ್ದರಿಂದ ಕಾಣಿಕೆ ಪ್ರಮಾಣದಲ್ಲೂ ಗಣನೀಯ ಏರಿಕೆಯಾಗಿದ್ದು, 35,07,390 ರೂ., ಕಾಣಿಕೆ ಹಣ ಸಂಗ್ರಹವಾಗಿದೆ ಎಂದು ದೇವಸ್ಥಾನದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹಣ ಎಣಿಕೆ ಕಾರ್ಯ ಅತ್ಯಂತ ಪಾರದರ್ಶಕವಾಗಿ ನಡೆಯಲು ಕೊಠಡಿಯ ಸುತ್ತಲೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಪ್ರಕ್ರಿಯೆಯಲ್ಲಿ ಮುಜರಾಯಿ ಇಲಾಖೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು, ಗ್ರಾಮ ಆಡಳಿತಾಧಿಕಾರಿಗಳು,

ಗ್ರಾಮ ಸಹಾಯಕರು ಮತ್ತು ದೇವಸ್ಥಾನದ ಸಿಬ್ಬಂದಿ ಉಪಸ್ಥಿತರಿದ್ದರು. ಯಾವುದೇ ಲೋಪದೋಷಗಳು ಜರುಗದಂತೆ ಸ್ಥಳೀಯ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು.