ಶಿವಮೊಗ್ಗ: ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪಿಸುವ ಸಾಧ್ಯತೆಯನ್ನು ಪರಿಶೀಲಿಸಲು ಮೂವರು ನ್ಯಾಯಮೂರ್ತಿಗಳ ಸಮಿತಿ ರಚಿಸಿರುವುದು ತಾತ್ಕಾಲಿಕ ಕಣ್ಣೊರೆಸುವ ಪ್ರಯತ್ನವಾಗಿದೆ. ಮಧ್ಯ ಕರ್ನಾಟಕದ ಜನರ ಅನುಕೂಲಕ್ಕಾಗಿ ಸಂಚಾರಿ ಪೀಠವನ್ನು ಶಿವಮೊಗ್ಗದಲ್ಲಿಯೇ ಸ್ಥಾಪಿಸಬೇಕು ಎಂದು ಹಿರಿಯ ವಕೀಲ ಕೆ. ಬಸಪ್ಪ ಗೌಡ ಆಗ್ರಹಿಸಿದರು.


ನಗರದ ಪತ್ರಿಕಾ ಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ರಚಿಸಿರುವ ಸಮಿತಿಯು ಮಂಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ,

ಶಿವಮೊಗ್ಗ, ದಾವಣಗೆರೆ, ಮಡಿಕೇರಿ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ ವರದಿ ಸಿದ್ಧಪಡಿಸಲಿದೆ. ಸಮಿತಿಯು ಶಿವಮೊಗ್ಗ ಜಿಲ್ಲೆಗೂ ಭೇಟಿ ನೀಡುವ ಸಾಧ್ಯತೆಯಿದೆ ಎಂದರು.

ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಸಂಚಾರಿ ಪೀಠ ನೀಡುವುದಾದರೆ ಮಧ್ಯ ಕರ್ನಾಟಕಕ್ಕೆ ನೀಡಬೇಕು ಎಂದು ಮನವಿ ಮಾಡಿದ್ದೆವು. ಈ ಬಗ್ಗೆ ಆತಂಕಪಡಬೇಕಿಲ್ಲ ಎಂದು ಸಿದ್ದರಾಮಯ್ಯ ಭರವಸೆ ನೀಡಿದ್ದರೂ ಅದು ಈಡೇರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಾಸನ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಹೈಕೋರ್ಟ್ ಪೀಠಕ್ಕೆ ಬೇಡಿಕೆ ವ್ಯಕ್ತವಾಗದಿದ್ದರೂ, ಆ ಜಿಲ್ಲೆಗಳನ್ನು ಸಮಿತಿಯ ವ್ಯಾಪ್ತಿಗೆ ಸೇರಿಸಿರುವುದರ ಉದ್ದೇಶವೇನು ಎಂಬ ಪ್ರಶ್ನೆ ಮೂಡಿದೆ.

ಎಲ್ಲ ಜಿಲ್ಲೆಗಳ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಕೆಲವು ಜಿಲ್ಲೆಗಳನ್ನು ಕೈಬಿಟ್ಟು, ಶಿವಮೊಗ್ಗ, ಚಿಕ್ಕಮಗಳೂರು, ಮಡಿಕೇರಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳನ್ನು ಮಂಗಳೂರು ಪೀಠದ ವ್ಯಾಪ್ತಿಗೆ ಸೇರಿಸುವ ಉದ್ದೇಶವಿರಬಹುದು ಎಂಬ ಅನುಮಾನವಿದೆ ಎಂದು ಹೇಳಿದರು.

ಮಂಗಳೂರಿನಲ್ಲಿ ಸಂಚಾರಿ ಪೀಠ ಸ್ಥಾಪಿಸಲು ಅಗತ್ಯವಾದ ಸಂಖ್ಯಾಬಲ ಪಡೆಯುವ ಉದ್ದೇಶದಿಂದ ಶಿವಮೊಗ್ಗ ಜಿಲ್ಲೆಯನ್ನು ಅದರ ವ್ಯಾಪ್ತಿಗೆ ಸೇರಿಸುವ ಪ್ರಯತ್ನ ನಡೆಯುತ್ತಿದೆ ಎಂಬ ಆತಂಕವಿದೆ. ಸಮಿತಿಯ ರಚನೆಯ ಹಿಂದೆ ಮಂಗಳೂರಿಗೆ ಪೀಠ ನೀಡುವ ಉದ್ದೇಶವಿದೆ ಎಂಬುದು ನಮ್ಮ ಅಭಿಪ್ರಾಯ. ಹೀಗಾಗಿ ಸಮಿತಿಯ ಪರಿಶೀಲನೆ ಮತ್ತು ವರದಿಯ ಬಗ್ಗೆ ಜಿಲ್ಲೆಯ ಜನರು ಎಚ್ಚರಿಕೆಯಿಂದ ಗಮನಹರಿಸಬೇಕು ಎಂದರು.

ಶಿವಮೊಗ್ಗದಿಂದ ಮಂಗಳೂರಿಗೆ ತೆರಳಿ ನ್ಯಾಯಾಲಯದ ಕಲಾಪಗಳಲ್ಲಿ ಭಾಗವಹಿಸುವುದು ವಕೀಲರು ಮತ್ತು ಕಕ್ಷಿದಾರರಿಗೆ ತೊಂದರೆಯಾಗಲಿದೆ. ಪ್ರಯಾಣದಲ್ಲಿ ಹೆಚ್ಚಿನ ಸಮಯ ವ್ಯರ್ಥವಾಗುವುದರ ಜತೆಗೆ ಆರ್ಥಿಕ ಹೊರೆಯೂ ಹೆಚ್ಚಲಿದೆ.

ಬೆಂಗಳೂರಿಗೆ ತೆರಳಲು ಜಿಲ್ಲೆಯ ಜನರು ಈಗಾಗಲೇ ಹೊಂದಿಕೊಂಡಿದ್ದಾರೆ. ಆದರೆ, ಮಂಗಳೂರಿಗೆ ಹೋಗಿ ಬರುವುದು ಸುಲಭವಲ್ಲ. ಆದ್ದರಿಂದ ಶಿವಮೊಗ್ಗವನ್ನು ಮಂಗಳೂರು ಪೀಠದ ವ್ಯಾಪ್ತಿಗೆ ಸೇರಿಸುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದರು.

ಈಗಾಗಲೇ ಕಲಬುರಗಿ ಮತ್ತು ಧಾರವಾಡದಲ್ಲಿ ಹೈಕೋರ್ಟ್ ಪೀಠಗಳಿವೆ. ಮಧ್ಯ ಕರ್ನಾಟಕದ ಜನರಿಗೂ ನ್ಯಾಯಾಲಯದ ಸೇವೆ ಸುಲಭವಾಗಿ ದೊರೆಯುವಂತಾಗಲು ಶಿವಮೊಗ್ಗವನ್ನು ಕೇಂದ್ರವಾಗಿಟ್ಟುಕೊಂಡು ಸಂಚಾರಿ ಪೀಠ ಸ್ಥಾಪಿಸಬೇಕು. ಮಂಗಳೂರಿಗೆ ಪೀಠ ನೀಡುವ ಬದಲು ಮಧ್ಯ ಕರ್ನಾಟಕದ ನ್ಯಾಯಾಂಗ ಸೇವೆಯ ಅಗತ್ಯವನ್ನು ಪರಿಗಣಿಸಿ ಶಿವಮೊಗ್ಗಕ್ಕೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

1950ರಲ್ಲಿಯೇ ಶಿವಮೊಗ್ಗದಲ್ಲಿ ನಡೆದ ವಕೀಲರ ಸಮ್ಮೇಳನದಲ್ಲಿ ಜಿಲ್ಲೆಗೆ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪಿಸಬೇಕು ಎಂದು ಒತ್ತಾಯಿಸಲಾಗಿತ್ತು ಎಂದು ಅವರು ನೆನೆದರು.

ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಎನ್. ಜಗದೀಶ್, ಕಾಂಗ್ರೆಸ್ ಜಿಲ್ಲಾ ಘಟಕ ಅಧ್ಯಕ್ಷ ಹೆಚ್.ಸಿ. ಯೋಗೀಶ್, ಜೆಡಿಎಸ್ ಜಿಲ್ಲಾ ಘಟಕ ಅಧ್ಯಕ್ಷ ರಾಮಕೃಷ್ಣ, ಜಿಲ್ಲಾ ಕೈಗಾರಿಕಾ ಸಂಘ ಅಧ್ಯಕ್ಷ ಗೋಪಿನಾಥ್, ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ, ಕಾರ್ಯನಿರತ ಪತ್ರಕರ್ತ ಸಂಘ ಜಿಲ್ಲಾ ಘಟಕ ಅಧ್ಯಕ್ಷ ವೈದ್ಯನಾಥ, ವಕೀಲರಾದ ಕೆ. ಪಿ. ಶ್ರೀಪಾಲ್, ಪ್ರಮುಖರಾದ ದೀಪಕ್ ಸಿಂಗ್, ಕಾಂತರಾಜ್, ಜಗದೀಶ್, ವಿದ್ಯಾರಾಣಿ ಇದ್ದರು.