ಶಿವಮೊಗ್ಗ:ಭದ್ರಾ ಜಲಾಶಯದ ನೀರನ್ನು ಭದ್ರಾ ಮೇಲ್ದಂಡೆ ಯೋಜನೆಗೆ ಮತ್ತೊಮ್ಮೆ ಹರಿಸುವ ರಾಜ್ಯ ಸರ್ಕಾರದ ಆದೇಶವನ್ನು ರದ್ದುಪಡಿಸಬೇಕು ಹಾಗೂ ಅಚ್ಚುಕಟ್ಟು ಪ್ರದೇಶದ ಬೆಳೆ ರಕ್ಷಣೆಗೆ ತಕ್ಷಣ 20 ದಿನಗಳ ಕಾಲ ನಿರಂತರ ನೀರು ಹರಿಸಬೇಕು ಎಂದು ಒತ್ತಾಯಿಸಿ ಇಂದು ಶಿವಮೊಗ್ಗದಲ್ಲಿ ಸಾವಿರಾರು ರೈತರು ಟ್ರ್ಯಾಕ್ಟರ್ ರ್ಯಾಲಿ ಮೂಲಕ ಜಿಲ್ಲಾಧಿಕಾರಿ ಕಚೇರಿ ಎದರು ಬೃಹತ್ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಕೆ.ಟಿ. ಗಂಗಾಧರ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯುತ್ತಿರುವ ಧರಣಿ ನಿರತರು ಇಂದು ಅಚ್ಚುಕಟ್ಟು ಪ್ರದೇಶದ ಭದ್ರಾವತಿ, ಮಲೆಬೆನ್ನೂರು, ದಾವಣಗೆರೆ, ಚಿಕ್ಕಮಗಳೂರು, ವಿಜಯಪುರ ಭಾಗದ ಸಾವಿರಾರು ರೈತರು ಟ್ರ್ಯಾಕ್ಟರ್ ಸಮೇತ ಆಗಮಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.

– ಭದ್ರಾ ಮೇಲ್ದಂಡೆ ಯೋಜನೆಗೆ ಭದ್ರಾ ಜಲಾಶಯದಿಂದ ಈಗಾಗಲೇ ಪ್ರಾಯೋಗಿಕವಾಗಿ ಮೂರು ಟಿಎಂಸಿ ನೀರನ್ನು ಬಳಸಿಕೊಂಡಿದ್ದು, ಮತ್ತೊಮ್ಮೆ ಒಂದು ಟಿಎಂಸಿ ನೀರನ್ನು ಹರಿಸಲು ರಾಜ್ಯ ಸರ್ಕಾರ ಆದೇಶ ಮಾಡಿರುವುದನ್ನು ರದ್ದುಪಡಿಸಬೇಕು, ತುಂಗಾ ಜಲಾಶಯದಿಂದ

ಭದ್ರಾ ಜಲಾಶಯಕ್ಕೆ ನೀರು ಹರಿಸಿ, ಅಲ್ಲಿಂದ ಭದ್ರಾ ಮೇಲ್ದಂಡೆ ಮೂಲಕ ಬಯಲು ಸೀಮೆಗೆ ನೀರು ಹರಿಸುವುದಕ್ಕೆ ನಮ್ಮ ವಿರೋಧವಿಲ್ಲ ಎಂದ ಪ್ರತಿಭಟನಾಕಾರರು ಬೇಸಿಗೆಯಲ್ಲಿ ಭತ್ತದ ಬೆಳೆಗೆ 120 ದಿವಸ ನೀರು ಒದಗಿಸಬೇಕು. ಅಡಿಕೆ, ತೆಂಗು, ಬಾಳೆ ಸೇರಿದಂತೆ ತೋಟಗಾರಿಕೆ ಬೆಳೆಗಳ ರಕ್ಷಣೆಗೆ ಹಾಗೂ ದನಕರುಗಳ ಮೇವಿನ ಬೆಳೆಗಳಿಗೆ ಕನಿಷ್ಠ 20 ದಿನ ನೀರು ಹರಿಸಬೇಕು. ಜಲಾಶಯದಲ್ಲಿ 4 ಟಿಎಂಸಿ ನೀರಿನ ಕೊರತೆ ಇರುವುದರಿಂದ ಆತಂಕದಲ್ಲಿರುವ ರೈತರಿಗೆ ಆತ್ಮವಿಶ್ವಾಸ ತುಂಬಬೇಕು ಎಂದು ಒತ್ತಾಯಿಸಿದರು.

ತುಂಗಾ ಜಲಾಶಯದಿಂದ ಭದ್ರಾ ಜಲಾಶಯಕ್ಕೆ ನೀರು ಹರಿಸುವ ಯೋಜನೆಯನ್ನು ತ್ವರಿತಗೊಳಿಸಲು ಭಾರತ ಸರ್ಕಾರ ಅನುದಾನದ ಹಣ ಬಿಡುಗಡೆ ಮಾಡಬೇಕು ಆಗ್ರಹಿಸಿದರು.

ಪ್ರಸಕ್ತ ವರ್ಷದಲ್ಲಿ ಹವಾಮಾನ ವೈಪರೀತ್ಯದಿಂದ ಮಳೆ ಕೊರತೆಯಿದ್ದು, ಜಲಾಶಯಗಳು ಭರ್ತಿಯಾಗಿಲ್ಲ. ಬರಗಾಲದ ತೀವ್ರತೆ ಹೆಚ್ಚಾಗಿದ್ದು, ಸರ್ಕಾರ ಅನೇಕ ತಾಲೂಕು, ಜಿಲ್ಲೆಗಳನ್ನು ಬರಗಾಲದ ಪಟ್ಟಿಯಲ್ಲಿ ಸೇರಿಸಿದೆ. ಭದ್ರಾ ಜಲಾಶಯವು ಮಧ್ಯ ಕರ್ನಾಟಕದ ಜೀವನಾಡಿಯಾಗಿದೆ.

ಬೇಸಿಗೆಯಲ್ಲಿ ಬೆಳೆದು ನಿಂತಿರುವ ಬೆಳೆಗಳನ್ನು ರಕ್ಷಿಸಲು ಜಲಾಶಯದಲ್ಲಿ 4 ಟಿಎಂಸಿ ನೀರಿನ ಕೊರತೆ ಇದೆ. ಈ ಪರಿಸ್ಥಿತಿಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಮತ್ತೊಮ್ಮೆ ನೀರು ಹರಿಸಲು ಆದೇಶಿಸಿರುವುದು ರೈತರಲ್ಲಿ ಆತಂಕ ಮೂಡಿಸಿದೆ ಎಂದು ಪ್ರತಿಭಟನಾ ನಿರತ ರೈತರು ಆಕ್ರೋಶ ವ್ಯಕ್ತಪಡಿಸಿದರು.
ತುಂಗಾ ಜಲಾಶಯದಿಂದ ಭದ್ರಾ ಜಲಾಶಯಕ್ಕೆ ನೀರು ಹರಿಸುವ ಯೋಜನೆಯಿಂದ ಶಾಶ್ವತವಾಗಿ ಬಯಲು ಸೀಮೆಯ ಪ್ರದೇಶಕ್ಕೆ ನೀರು ಹರಿಸಲು ಸಹಾಯವಾಗುತ್ತದೆ. ಈ ಪ್ರಯತ್ನಕ್ಕೆ ಸರ್ಕಾರದ ಜೊತೆಗೆ ಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶದ ರೈತರು, ಕೂಲಿ ಕಾರ್ಮಿಕರು, ಮತ್ತು ವಿವಿಧ ಸಂಘಟನೆಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಮಂಜುನಾಥೇಶ್ವರ ಎಚ್.ಎಸ್., ಹಿರಣಯ್ಯ, ಯಶವಂತ್ ರಾವ್ ಗೋಪರ್ಣೆ, ರಘುನಾಥ್, ಸಂಜಯಕುಮಾರ್, ಕೃಷ್ಣಮೂರ್ತಿ, ಮಂಜುನಾಥ್, ಮೆಸ್ತ್ರಿ, ಶಿವು, ವೀರೇಶ್ ಮತ್ತಿತರರು ಪಾಲ್ಗೊಂಡಿದ್ದರು.
——————-