ಶಿವಮೊಗ್ಗ: ಸಂವಿಧಾನವೆಂಬುದು ಕೇವಲ ಕಾನೂನುಗಳ ಸಂಕಲನವಲ್ಲ, ಅದು ದೇಶದ ಪ್ರತಿಯೊಬ್ಬ ನಾಗರಿಕನ ಬದುಕನ್ನು ಮುನ್ನಡೆಸುವ ಮಾರ್ಗದರ್ಶಿ. ಹಕ್ಕುಗಳ ಅರಿವಿನ ಜೊತೆಗೆ ಕರ್ತವ್ಯಗಳ ಹೊಣೆಗಾರಿಕೆಯನ್ನೂ ಮೈಗೂಡಿಸಿಕೊಂಡಾಗ ಮಾತ್ರ ಪ್ರಜಾಪ್ರಭುತ್ವದ ಆಶಯಗಳು ಸಾಕಾರಗೊಳ್ಳಲು ಸಾಧ್ಯ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ಎಸ್. ಸಂತೋಷ್ ಹೇಳಿದರು.

ನಗರದ ಸಿ. ಭೀಮಸೇನರಾವ್ ಕಾನೂನು ಮಹಾವಿದ್ಯಾಲಯದಲ್ಲಿ ಭಾರತ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ಮೈ ಭಾರತ್ ಕಚೇರಿ, ರಾಷ್ಟ್ರೀಯ ಶಿಕ್ಷಣ ಸಮಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಶಿವಮೊಗ್ಗ ವಕೀಲರ ಸಂಘದ ಸಹಯೋಗದಲ್ಲಿ ಗುರುವಾರ ಸಂವಿಧಾನ ದಿನಾಚರಣೆ–2026ರ ಅಂಗವಾಗಿ ಆಯೋಜಿಸಿದ್ದ ‘ವಿಕಸಿತ ಭಾರತ ಯುವ ಸಂವಾದ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವ್ಯಸನಗಳಿಗೆ ಬಲಿಯಾಗದೆ ವಿವೇಚನಾಯುಕ್ತ ಬದುಕನ್ನು ರೂಪಿಸಿಕೊಳ್ಳಬೇಕು. ತಮ್ಮ ಸುತ್ತಲಿನ ಸಮಾಜದಲ್ಲಿ ಜಾಗೃತಿಯ ಬೆಳಕು ಹರಡುವ ಜವಾಬ್ದಾರಿಯನ್ನು ಯುವ ಸಮೂಹ ವಹಿಸಿಕೊಳ್ಳಬೇಕು. ರಾಷ್ಟ್ರದ ಪ್ರಗತಿಗಾಗಿ ವೈಯಕ್ತಿಕ ಹಾಗೂ ಸಾಮೂಹಿಕ ಬದುಕಿನ ಎಲ್ಲ ಕ್ಷೇತ್ರಗಳಲ್ಲಿಯೂ ಶ್ರೇಷ್ಠತೆಯನ್ನು ಸಾಧಿಸುವ ನಿಟ್ಟಿನಲ್ಲಿ ನಿರಂತರವಾಗಿ ಶ್ರಮಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಸಂವಿಧಾನ ಪ್ರತಿಪಾದಿಸುವ ಕರ್ತವ್ಯಗಳು ಕೇವಲ ತಿಳಿದುಕೊಳ್ಳುವ ವಿಷಯಗಳಾಗದೆ, ಬದುಕಿನ ಅವಿಭಾಜ್ಯ ಭಾಗವಾಗಬೇಕು. ಕರ್ತವ್ಯಪ್ರಜ್ಞೆ ಪ್ರತಿಯೊಬ್ಬರಲ್ಲೂ ಬೆಳೆದಾಗ ಮಾತ್ರ ಉತ್ತಮ ಸಮಾಜ ಮತ್ತು ಬಲಿಷ್ಠ ರಾಷ್ಟ್ರ ನಿರ್ಮಾಣ ಸಾಧ್ಯ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಮೈ ಭಾರತ್ ಕಚೇರಿಯ ಸಹಾಯಕ ನಿರ್ದೇಶಕರು ಹಾಗೂ ಜಿಲ್ಲಾ ಯುವ ಅಧಿಕಾರಿ ಐಶ್ವರ್ಯ ಶ್ರೀನಿವಾಸ್ ಮಾತನಾಡಿ, ದೇಶದ ವಿವಿಧೆಡೆ ಸಂವಿಧಾನ ದಿನಾಚರಣೆಯ ಅಂಗವಾಗಿ ಯುವಜನರನ್ನು ಒಳಗೊಳ್ಳುವ ಕಾರ್ಯಕ್ರಮಗಳು ನಡೆಯುತ್ತಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ಈ ಮಹತ್ವದ ಕಾರ್ಯಕ್ರಮ ಆಯೋಜಿಸಲು ಪ್ರಧಾನಮಂತ್ರಿ ಕಚೇರಿಯಿಂದಲೇ ನೇರವಾಗಿ ಈ ಕಾಲೇಜನ್ನು ಆಯ್ಕೆ ಮಾಡಿದ್ದಾರೆ.

ಯುವಜನರು ಕೇವಲ ಬದಲಾವಣೆಯ ನಿರೀಕ್ಷಕರಾಗದೆ, ಹೊಸ ವಿಚಾರಗಳ ಸೃಷ್ಟಿಕರ್ತರು, ನೀತಿ ಚರ್ಚೆಗಳ ಭಾಗೀದಾರರು ಹಾಗೂ ಸಾಮಾಜಿಕ ಪರಿವರ್ತನೆಯ ಮುಂಚೂಣಿಗಾರರಾಗಬೇಕು. ರಾಷ್ಟ್ರ ನಿರ್ಮಾಣ, ನಾಯಕತ್ವ ವಿಕಸನ, ಸಂಸತ್ತಿನ ಕಲಾಪಗಳು, ಮಸೂದೆಗಳ ರಚನೆ ಹಾಗೂ ಸಾರ್ವಜನಿಕ ನೀತಿಗಳ ಕುರಿತ ಚರ್ಚೆಗಳಲ್ಲಿ ಯುವಜನರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ‘ಮೈ ಭಾರತ್’ ವೇದಿಕೆ ಕಾರ್ಯನಿರ್ವಹಿಸುತ್ತಿದೆ. ಯುವಜನರು ಮೈ ಭಾರತ್ ಪೋರ್ಟಲ್ನಲ್ಲಿ ನೋಂದಾಯಿಸಿಕೊಳ್ಳುವ ಮೂಲಕ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಯುವ ಸಂಸತ್ತು, ಚರ್ಚಾ ವೇದಿಕೆಗಳು, ಸಾಂಸ್ಕೃತಿಕ ಮತ್ತು ನಾವೀನ್ಯತಾ ಚಟುವಟಿಕೆಗಳಲ್ಲಿ ಭಾಗವಹಿಸಬಹುದು. ಆಯ್ಕೆಯಾದ ಯುವ ನಾಯಕರು ತಮ್ಮ ಆಲೋಚನೆಗಳನ್ನು ರಾಷ್ಟ್ರೀಯ ನಾಯಕತ್ವದ ಮುಂದೆ ಮಂಡಿಸಲು ಅವಕಾಶವಿದೆ ಎಂದು ತಿಳಿಸಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿಯ ಸಹ ಕಾರ್ಯದರ್ಶಿ ಡಾ. ಪಿ. ನಾರಾಯಣ್ ಮಾತನಾಡಿ, ಸಂವಿಧಾನ ಜಾರಿಗೆ ಬಂದ ದಿನವು ನಮ್ಮ ಸಂಸ್ಕೃತಿಯ ಹಬ್ಬಗಳ ಸಾಲಿನಲ್ಲಿ ಸ್ಥಾನ ಪಡೆಯಬೇಕು. ನಮ್ಮೆಲ್ಲರ ಬದುಕಿಗೆ ದಿಕ್ಕು ತೋರುತ್ತಿರುವುದು ಸಂವಿಧಾನವೇ. ಪ್ರತಿ ಮನೆಯಲ್ಲಿಯೂ ಸಂವಿಧಾನವನ್ನು ನೆನಪಿಸಿಕೊಳ್ಳುವ ಹಾಗೂ ಅದರ ಆಶಯಗಳನ್ನು ಗೌರವಿಸುವ ಪ್ರವೃತ್ತಿ ಬೆಳೆಯಬೇಕು. ಪ್ರಜ್ಞಾವಂತ ನಾಗರಿಕರಾಗಿ ಸಮಾಜವನ್ನು ಸುಸ್ಥಿತಿಯಲ್ಲಿಡಲು ನಾವು ಏನು ಮಾಡುತ್ತಿದ್ದೇವೆ ಎಂಬುದನ್ನು ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಹಕ್ಕುಗಳ ಬಗ್ಗೆ ಮಾತನಾಡುವಷ್ಟೇ ಸ್ಪಷ್ಟತೆಯಿಂದ ನಮ್ಮ ಬಾಧ್ಯತೆ ಮತ್ತು ಕರ್ತವ್ಯಗಳನ್ನೂ ಅರ್ಥಮಾಡಿಕೊಳ್ಳಬೇಕು. ಇಂತಹ ಚಿಂತನೆಗೆ ಸಂವಿಧಾನ ದಿನಾಚರಣೆ ಪೂರಕವಾಗಿದ್ದು, ವಿಕಸಿತ ಭಾರತದ ನಿರ್ಮಾಣಕ್ಕೆ ಮತ್ತಷ್ಟು ಬಲ ನೀಡಲಿದೆ ಎಂದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಜಿ.ಆರ್. ರಾಘವೇಂದ್ರ ಸ್ವಾಮಿ, ಶಿವಮೊಗ್ಗ ಮೃಗಾಲಯದ ಶಿಕ್ಷಣಾಧಿಕಾರಿ ಸಿಂಚನಾ ಜಗದೀಶ್, ಜೈನ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ಐಶ್ವರ್ಯ ಜೆ.ಎಸ್, ಕ್ರೀಡಾಪಟು ಮೊಹಮ್ಮದ್ ಮುಜಮ್ಮಿಲ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎ. ಅನಲ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಭಾರತದ ಸಂವಿಧಾನದ ಆಶಯಗಳು, ಮೌಲ್ಯಗಳು ಹಾಗೂ ನಾಗರಿಕ ಕರ್ತವ್ಯಗಳನ್ನು ಗೌರವಿಸಿ ಪಾಲಿಸುವ ಪ್ರತಿಜ್ಞಾವಿಧಿ ಸ್ವೀಕರಿಸಿದರು.