ಶಿವಮೊಗ್ಗ: ಬ್ಯಾಂಕಿಂಗ್ ಉದ್ಯೋಗಿಗಳಲ್ಲಿ ಕನ್ನಡಾಭಿಮಾನ ಬೆಳೆಸುವುದು, ನಾಡು-ನುಡಿಯ ಸೇವೆಗೆ ಪ್ರೇರಣೆ ನೀಡುವುದು ಹಾಗೂ ಬ್ಯಾಂಕ್ ನೌಕರರ ನಡುವೆ ಬಾಂಧವ್ಯ ವೃದ್ಧಿಸುವ ಉದ್ದೇಶದಿಂದ ಬ್ಯಾಂಕಿಂಗ್ ಉದ್ಯೋಗಿಗಳ ಕನ್ನಡ ಕೂಟದ ವತಿಯಿಂದ ನ.27 ಮತ್ತು 28ರಂದು ನಗರದಲ್ಲಿ ‘ಬ್ಯಾಂಕಿಂಗ್ ಉದ್ಯೋಗಿಗಳ ಕನ್ನಡ ಹಬ್ಬ–2026’ ಆಯೋಜಿಸಲಾಗಿದೆ ಎಂದು ಬ್ಯಾಂಕಿಂಗ್ ಉದ್ಯೋಗಿಗಳ ಕನ್ನಡ ಕೂಟದ ಅಧ್ಯಕ್ಷ ರಾಜೇಂದ್ರ ಪೈ ಹೇಳಿದರು.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ದಿನಗಳ ಕಾರ್ಯಕ್ರಮದಲ್ಲಿ ಜಿಲ್ಲೆಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳ 1,000ಕ್ಕೂ ಹೆಚ್ಚು ಹಾಲಿ ಮತ್ತು ನಿವೃತ್ತ ಬ್ಯಾಂಕ್ ಉದ್ಯೋಗಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ನ.27ರಂದು ನಗರದ ಕೃಷಿ ಕಾಲೇಜು ಮೈದಾನದ ರಾಹುಲ್ ದ್ರಾವಿಡ್ ಅಂಗಣದಲ್ಲಿ ವಿವಿಧ ಬ್ಯಾಂಕ್ಗಳ ತಂಡಗಳ ನಡುವೆ ‘ಬ್ಯಾಂಕರ್ಸ್ ರಾಜ್ಯೋತ್ಸವ ಕ್ರಿಕೆಟ್ ಕಪ್–2026’ ಪಂದ್ಯಾವಳಿ ನಡೆಯಲಿದೆ. ಇದೇ ದಿನ ಕುವೆಂಪು ಸಭಾಂಗಣದಲ್ಲಿ ಬ್ಯಾಂಕ್ ಉದ್ಯೋಗಿಗಳಿಗಾಗಿ ವಿವಿಧ ಸಾಂಸ್ಕøತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದರು.

ನ.28ರಂದು ಸಂಜೆ 4ಕ್ಕೆ ಕುವೆಂಪು ರಂಗಮಂದಿರದಲ್ಲಿ ಸಾಂಸ್ಕೃತಿಕ ವೈಭವ ಹಾಗೂ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಸಮಾರಂಭ ನಡೆಯಲಿದೆ. ಖ್ಯಾತ ಕ್ವಿಜ್ ಮಾಸ್ಟರ್ ಹಾಗೂ ಸಾಹಿತಿ ಡಾ. ನಾ. ಸೋಮೇಶ್ವರ ಮುಖ್ಯ ಅತಿಥಿಗಳಾಗಿ, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಗೌರವ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.

ಕನ್ನಡದಲ್ಲಿ ಬ್ಯಾಂಕಿಂಗ್ ವ್ಯವಹಾರ ನಡೆಸುವ ಸಂಸ್ಕೃತಿಯನ್ನು ಪೆÇ್ರೀತ್ಸಾಹಿಸುವುದು ಹಾಗೂ ಬ್ಯಾಂಕ್ ಉದ್ಯೋಗಿಗಳಲ್ಲಿರುವ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸುವುದು ಹಬ್ಬದ ಪ್ರಮುಖ ಉದ್ದೇಶ. ಹಾಲಿ ಮತ್ತು ನಿವೃತ್ತ ಉದ್ಯೋಗಿಗಳೆಲ್ಲರೂ ಒಂದೇ ವೇದಿಕೆಯಲ್ಲಿ ಸೇರಿ ಕನ್ನಡ ಹಬ್ಬ ಆಚರಿಸುತ್ತಿರುವುದು ವಿಶೇಷ ಎಂದು ಹೇಳಿದರು.

ನ.28ರಂದು ಕುವೆಂಪು ರಂಗಮಂದಿರದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದ್ದು, ಕಾರ್ಯಕ್ರಮದ ಬಳಿಕ ಭೋಜನದ ವ್ಯವಸ್ಥೆಯನ್ನೂ ಮಾಡಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಕೂಟದ ಉಪಾಧ್ಯಕ್ಷ ಕೆ.ಆರ್. ವಿಶ್ವನಾಥ್, ಸದಸ್ಯರಾದ ಶಶಾಂಕ್, ಪ್ರದೀಪ್ ಇದ್ದರು.
======