
ಶಿವಮೊಗ್ಗ: ಇಲ್ಲಿಯ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿಯಮಾನುಸಾರ ನಾಗರಿಕ ಸೌಲಭ್ಯ (ಸಿಎ) ನಿವೇಶನ, ಉದ್ಯಾನವನ, ಖರಾಬು ಜಾಗವನ್ನು ಮೀಸಲಾಗಿಡಲಾಗಿಟ್ಟಿದ್ದು, ಹಲವು ಕಡೆ ಈ ಜಾಗಗಳನ್ನು ಕೆಲವರು ಅತಿಕ್ರಮಣ ಮನೆ, ಶೆಡ್ ಗಳನ್ನು ನಿರ್ಮಿಸಿಕೊಂಡಿರುವ ಬಗ್ಗೆ ಪಾಲಿಕೆಗೆ ದೂರುಗಳು ಸಲ್ಲಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಆಯುಕ್ತ ಮಾಯಣ್ಣಗೌಡರು ಸೈಲೆಂಟಾಗಿ ಅತಿಕ್ರಮಣ, ಒತ್ತುವರಿ ತೆರವು ಕಾರ್ಯಾಚರಣೆಗೆ ಮುಂದಾಗಿರುವುದು ಬೆಳಕಿಗೆ ಬಂದಿದೆ.

ನವುಲೆಯ ಸರ್ಕಾರಿ ನೌಕರರ ನೀಲಮ್ಮ ಜ್ಞಾನೇಶ್ವರ ಬಡಾವಣೆ ಮತ್ತು ಮಲ್ನಾಡ್ ಕೌಂಟಿಗೆ ಹೊಂದಿಕೊಂಡಿರುವ ಪಾಲಿಕೆಯ ಸಿಎ /ಖರಾಬು ಜಾಗದಲ್ಲಿ ಅದಕ್ಕೆ ತಾಗಿಕೊಂಡಿರುವ ಆಶ್ರಯ ಬಡಾವಣೆಯ ಎಫ್ ಬ್ಲಾಕ್ ನ ಕೆಲವರು “ಇದು ಪಾಲಿಕೆ ಆಸ್ತಿ’ ಎಂಬ ಬೋರ್ಡುಗಳನ್ನೇ ಕಿತ್ತೆಸೆದು ಒತ್ತುವರಿ ಮಾಡಿಕೊಂಡಿರುವುದಲ್ಲದೆ ಅದೇ ಸಿಎ ನಿವೇಶನದಲ್ಲಿ ಕೆಲವರು ಆರ್.ಸಿಸಿ ಮನೆಗಳನ್ನೇ ನಿರ್ಮಿಸಿಕೊಂಡಿರುವುದು ಆಯುಕ್ತರ ಗಮನಕ್ಕೆ ಬಂದಿದೆ ಎನ್ನಲಾಗಿದೆ.

ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಕಳೆದ 15-20 ದಿನಗಳ ಹಿಂದೆ ಪಾಲಿಕೆ ಅಧಿಕಾರಿಗಳ ತಂಡ ಆ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಹೋದರೂ ಅಲ್ಲಿನ ಕೆಲ ನಿವಾಸಿಗಳು ಸಿಎ ನಿವೇಶನದ ಮುಳ್ಳು ತಂತಿ ಬೇಲಿಯನ್ನು ಕಿತ್ತುಹಾಕಿ, ಒತ್ತುವರಿ ಮಾಡಿ ಹೊಸ ಮನೆಯನ್ನೇ ನಿರ್ಮಿಸಿಕೊಂಡಿದ್ದಾರೆ ಎನ್ನಲಾಗಿದೆ. ಅಲ್ಲದೆ ಓರ್ವರು ಇಟ್ಟಿಗೆ, ಸಿಮೆಂಟ್ ನ ಪರ್ಮನೆಂಟ್ ಕಟ್ಟಡ ನಿರ್ಮಿಸಿಕೊಂಡಿದ್ದಾರೆ. ಇನ್ನು ಕೆಲವರು ಕೂಡು ರಸ್ತೆಯ ಖಾಲಿ ಜಾಗದಲ್ಲಿ ಸಿಮೆಂಟ್ ಬ್ಲಾಕ್ ನ ಶೆಡ್ ನಿರ್ಮಿಸಿಕೊಂಡಿದ್ದಾರೆ. ಮತ್ತೊಬ್ಬರು ಸಿಎ ನಿವೇಶನದಲ್ಲೇ ದನದ ಕೊಟ್ಟಿಗೆ ನಿರ್ಮಿಸಿಕೊಂಡಿದ್ದಾರೆ ಎನ್ನಲಾಗಿದೆ.

ಈ ಕುರಿತು ಬಂದ ದೂರಿನ ಅನ್ವಯ 3-4 ದಿನದ ಹಿಂದೆ ಆಯುಕ್ತರೇ ಸ್ವತ: ತಮ್ಮ 8-10 ಸಿಬ್ಬಂದಿಗಳ ಜತೆ ಸ್ಥಳಕ್ಕೆ ತೆರಳಿ ಮಹಜರು ಮಾಡಿದ್ದಲ್ಲದೆ ಒಂದೆರಡು ದಿನಗಳ ಒಳಗಾಗಿ ಅತಿಕ್ರಮಣ/ಒತ್ತುವರಿ ತೆರವು ಗೊಳಿಸುವಂತೆ ಅತಿಕ್ರಮಣದಾರರಿಗೆ ತಾಕೀತು ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಬೊಮ್ಮನಕಟ್ಟೆಯ ಈ ಆಶ್ರಯ ಬಡಾವಣೆಯಲ್ಲಿ ಒತ್ತುವರಿಯಾದ ಪಾಲಿಕೆಯ ಜಾಗವನ್ನು ಅವರವರ ಹೆಸರಿಗೆ ಖಾತೆ ಮಾಡಿಸಿಕೊಡುವುದಾಗಿ ಸೂಡಾದ ಮಾಜಿ ಅಧ್ಯಕ್ಷರೊಬ್ಬರು ಭರವಸೆ ನೀಡಿ 3 ವರ್ಷದ ಹಿಂದೆ ಒಟ್ಟೂ 26 ಜನರಿಂದ ತಲಾ 50 ಸಾವಿರ ರೂ.ವಸೂಲಿ ಮಾಡಿದ್ದಾರೆ ಎಂಬ ಸ್ಪೋಟಕ ಮಾತುಗಳು ಎಲ್ಲೆಡೆ ಹರಿದಾಡುತ್ತಿರುವುದು ದೊಡ್ಡ ಜಾಲವೇ ಇದೆ ಎನ್ನಲಾಗಿದೆ. ‘ಎ’ ಬ್ಲಾಕಿನಲ್ಲಿ 01, ಬಿ-07, ಸಿ-01, ಡಿ-03, ಇ-06, ಎಫ್ ಬ್ಲಾಕಿನಲ್ಲಿ 08 ನಿವಾಸಿಗಳಿಂದ ಆ ರಾಜಕಾರಣಿ ಹಣ ವಸೂಲಿ ಮಾಡಿದ್ದಾರೆಂದರೆ ಈ ಕೃತ್ಯದ ಹಿಂದೆ ಪಾಲಿಕೆಯ ಅಧಿಕಾರಿಗಳೂ ಶಾಮೀಲಾಗಿದ್ದಾರೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಅಲ್ಲದೆ ಈ 26 ಜನರಲ್ಲಿ 25 ಮಹಿಳೆಯರ ಹೆಸರಿನಲ್ಲಿ, ಕೇವಲ ಓವ ಪುರುಷನ ಹೆಸರಿನಲ್ಲಿ ಹಣ ವಸೂಲಿ ಮಾಡಿ ರಾಜಕಾರಣಿ ಚಾಲಾಕಿತನ ಪ್ರದರ್ಶಿಸಿದ್ದಾರೆ!

ಈಗ ಆ ಜಾಗಗಳಲ್ಲಿ ಆಯುಕ್ತರು 3 ದಿನದ ಹಿಂದೆ ಆ ಜಾಗ “ಪಾಲಿಕೆಯ ಆಸ್ತಿಯಾಗಿದ್ದು ಅತಿಕ್ರಮವಾಗಿ ಅತಿಕ್ರಮಣ ಮಾಡಿದವರನ್ನು ಶಿಕ್ಷೆಗೆ ಗುರಿಪಡಿಸಲಾಗುವುದು” ಎಂಬ ಬೋರ್ಡುಗಳನ್ನು ನೆಟ್ಟ ನಂತರವಂತೂ ದುಡ್ಡು ಕೊಟ್ಟವರು ವಸೂಲಿದಾರರ ವಿರುದ್ಧ ಕೆಂಡಾಮಂಡಲವಾಗಿದ್ದಾರೆ. ಅಲ್ಲದೆ ತಾವು ಕೊಟ್ಟ ಹಣವನ್ನು ವಾಪಸ್ ಕೊಡಿ ಎಂದು ಆ ರಾಜಕಾರಣಿಯ ಬೆನ್ನು ಹತ್ತಿದಾಗ ಡಿಸಿಯಿಂದ ಪಾಲಿಕೆಗೆ ಫೆÇೀನ್ ಮಾಡಿಸಿ ಅತಿಕ್ರಮಣದಾರರಿಗೆ ತೊಂದರೆ ಕೊಡಬೇಡಿ ಎಂದು ಹೇಳಿಸಿದ್ದಾಗಿ ಆ ರಾಜಕಾರಣಿ ಹಣ

ಸಂದಾಯಮಾಡಿದವರಿಗೆ ಸಮಾಧಾನ ಹೇಳಿದ್ದಾರಂತೆ. ಆದರೆ ಬುಧವಾರ ಹಣ ಕೊಟ್ಟವರಿಗೆ ಸರ್ಕಾರಿ ಜಾಗ ತಮ್ಮ ಹೆಸರಿಗೆ ಖಾತೆ ಆಗುವುದಿಲ್ಲ ಎಂಬ ಜ್ಞಾನೋದಯವಾಗಿ ಆಕ್ರೋಶ ವ್ಯಕ್ತಪಡಿಸಿದಾಗ ಆ ರಾಜಕಾರಣಿ ತನ್ನ ಪಕ್ಷದ ಕಚೇರಿಗೆ ಕರೆಯಿಸಿ ಇನ್ನೂ ತಲಾ 2 ಲಕ್ಷ ಕೊಡಿ. ನಿಮ್ಮ ತಂಟೆಗೆ ಯಾರೂ ಬರದಂತೆ ಈಗಿರುವ ಸ್ಥಿತಿಯಲ್ಲೇ ಇರುವಂತೆ ಮಾಡುತ್ತೇನೆ ಎಂಬ ಅಭಯ ನೀಡಿದ್ದಾಗಿ ತಿಳಿದುಬಂದಿದೆ. ಕಣ್ಣಿಗೆ ಕಂಡಿದ್ದಿಷ್ಟು. ಇನ್ನು ಕಾದ್ದೆಷ್ಟಿದೆಯೊ? ಆಯುಕ್ತರು ಕೇವಲ ಬೋರ್ಡ್ ನೆಟ್ಟು ಸುಮ್ಮನಾಗುತ್ತಾರೊ? ಅಥವಾ ಕಾನೂನು ಬಾಹಿರವಾಗಿ ನಿರ್ಮಾಣವಾದ ಮನೆಗಳನ್ನು ತೆರವುಗೊಳಿಸುತ್ತಾರೊ? ಕಾದು ನೋಡುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

ಒಂದು ವಾರದ ಒಳಗಾಗಿ ಅತಿಕ್ರಮಣ ತೆರವುಗೊಳಿಸದಿದ್ದರೆ ನಾಗರಿಕ ಹಿತರಕ್ಷಣಾ ಸಮಿತಿ ಮೂಲಕ ಲೋಕಾಯುಕ್ತದ ಮೊರೆ ಹೋಗುವುದಾಗಿ ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.
ಆದ್ಯತೆ ಮೇಲೆ ಗಂಭೀರ ಎಂದು ಪರಿಗಣಿಸಿ ಕ್ರಮ ಕೈಗೊಳ್ಳುವೆ. ಪ್ರಕರಣದ ಕುರಿತು ತನಿಖೆ ನಡೆಸುವೆ. ಅಧಿಕಾರಿಗಳ ಸಭೆ ಕರೆದು ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ನಮ್ಮ ಜಾಗದಲ್ಲಿ ಪಾಲಿಕೆ ಆಸ್ತಿ ಎಂಬ ಬೋರ್ಡ್ ಹಾಕುವ ಕೆಲಸ ನಡೆದಿದೆ. ಒತ್ತುವರಿದಾರರಿಗೆ ನಿಯಮಾನುಸಾರ ಹಲವಾರು ನೋಟಿಸ್ ಜಾರಿಗೊಳಿಸಿ ಯಾರದೇ ಮುಲಾಜಿಲ್ಲದೆ ತೆರವು ಕಾರ್ಯ ಪ್ರಕ್ರಿಯೆಯನ್ನು ಕೈಗೊಳ್ಳಲಾಗುವುದು.
ಕೆ.ಮಾಯಣ್ಣಗೌಡ, ಪಾಲಿಕೆ ಆಯುಕ್ತರು.