
ಹುಡುಕಾಟದ ವರದಿ
ಶಿವಮೊಗ್ಗ,ನ.26:
ಭದ್ರೆಯಂಗಳದ ಭದ್ರಾವತಿ ತಾಲೂಕಿನ ಹಳ್ಳಿಗಳಲ್ಲಿ ಭದ್ರಾ ಕಾಲುವೆಗೆ ನೀರು ಬಿಡದ ಕಾರಣಕ್ಕೆ ಬಿಸಿಲ ಝಳ ತಾಳಲಾರದೆ ಅಡಿಕೆ ಮರಗಳು ಒಣಗಿ ಹೋಗುತ್ತಿವೆ. ಕೂಡಲೇ ನೀರು ಬಿಡದಿದ್ದಲ್ಲಿ ನೂರಾರು ಸಾವಿರಾರು ಎಕರೆ ಅಡಿಕೆ ಉಳಿದುಕೊಳ್ಳುವುದು ಕಷ್ಟ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಭದ್ರಾವತಿ ತಾಲೂಕಿನ ಹೊಳಹೊನ್ನೂರು ಹೋಬಳಿ ತಿಮ್ಲಾಪುರ ಗ್ರಾಮದ ರೈತ ಮಂಜುನಾಥ್ ಎಂಬುವರು ಮಕ್ಕಳಂತೆ ಸಾಕಿದ್ದ ಅಡಿಕೆ ತೋಟ ಒಣಗುತ್ತಿರುವುದನ್ನು ನೋಡಿ ಪ್ರತಿ ಟ್ಯಾಕ್ಟರ್ ಟ್ಯಾಂಕರ್ ಮೂಲಕ ಅಡಿಕೆಗೆ ನೀರು ಹಾಯಿಸುತ್ತಿದ್ದಾರೆ. ಒಂದು ಟ್ಯಾಂಕರ್ ನೀರಿಗೆ ಒಂದು ಸಾವಿರ ರೂಪಾಯಿ ಕೊಟ್ಟರೆ ಅದು ಎಷ್ಟು ಗಿಡಗಳಿಗೆ ಆಗಲು ಸಾಧ್ಯ ಎಂಬುದನ್ನು ಚಿಂತಿಸುವ ಅಗತ್ಯವಿದೆ ಅಲ್ಲವೇ?

ಅಡಿಕೆ ಗಿಡಗಳನ್ನು ಉಳಿಸಿಕೊಳ್ಳುವ ಹಂಬಲ ರೈತರಾಗಿದ್ದು ಕೂಡಲೇ ಭದ್ರೆಯ ನೀರು ಹರಿಸದಿದ್ದಲ್ಲಿ ರೈತರ ಹಿಡಿ ಶಾಪ ಅದರಲ್ಲೂ ಅಡಿಕೆ ಬೆಳೆಗಾರರ ಹಿಡಿ ಶಾಪ ಕಾಡಾ ಮೇಲೆ ಬೀಳುವುದಂತೂ ಖಚಿತ.

ಬರಗಾಲದ ಸೂಚನೆ ಅತ್ಯಂತ ಸ್ಪಷ್ಟವಾಗಿ ಕಾಣುತ್ತಿದ್ದು ನೀರನ್ನು ಹಿತಮಿತವಾಗಿ ಕಾಪಾಡಿಕೊಳ್ಳುವ ಅಗತ್ಯವಿದೆ. ನೀರಿಗಾಗಿ ಕನವರಿಸುವ ಆತಂಕ ಈ ಬೇಸಿಗೆಯಲ್ಲಂತೂ ಇದ್ದೇ ಇದೆ.