
ಶಿವಮೊಗ್ಗ,ನ.26:
ಶಿವಮೊಗ್ಗ ನಗರದ ಸ್ವಚ್ಛತೆ ಕಾಪಾಡುವಲ್ಲಿ ಮಹಾನಗರ ಪಾಲಿಕೆಯ ಆರೋಗ್ಯ ವಿಭಾಗ ಸದಾ ಎತ್ತಿದ ಕೈ ಎಂಬಂತೆ ಪಾಲಿಕೆ ಆಯುಕ್ತ ಮಾಯಣ್ಣ ಗೌಡರ ಮಾರ್ಗದರ್ಶನದಂತೆ ಇಂದು ನಗರದ ಅಶೋಕನಗರ, ಸೂಳೆಬೈಲು, ಅರವಿಂದ ನಗರ ಸೇರಿದಂತೆ ಹಲವು ಬಡಾವಣೆಗಳಲ್ಲಿ ಹಂದಿ ಹಿಡಿದು ಸ್ಥಳಾಂತರ ಗೊಳಿಸುವ ಪ್ರಕ್ರಿಯೆಯನ್ನು ಆರಂಭಿಸಿದೆ.

ಇಂದು ಮುಂಜಾನೆಯಿಂದಲೇ ಹಂದಿ ಹಿಡಿಯಲು ಪಾಲಿಕೆಯ ಆರೋಗ್ಯ ವಿಭಾಗ ಮುಂದಾಗಿದ್ದು, ಈಗಾಗಲೇ ಸುಮಾರು 160ಕ್ಕೂ ಹೆಚ್ಚು ಹಂದಿಗಳನ್ನು ಹಿಡಿಯಲಾಗಿದೆ. ಹಾಗೂ ಅವುಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ.

ಈಗ ಎಲ್ ಬಿ ಎಸ್ ನಗರದಲ್ಲಿ ಹಂದಿ ಹಿಡಿಯುವಂತಹ ಕಾರ್ಯಾಚರಣೆ ನಡೆಯುತ್ತಿದ್ದು ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ಅತಿ ಹೆಚ್ಚು ಕಿರಿಕಿರಿ ಉಂಟು ಮಾಡುತ್ತಿದ್ದ ಹಂದಿಗಳನ್ನು ಹಿಡಿದು ಅವುಗಳನ್ನು ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ.

ಈ ಸಂದರ್ಭದಲ್ಲಿ ಆರೋಗ್ಯ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಪ್ರಭಾಕರ್ ಹಿರಿಯ ಆರೋಗ್ಯ ನಿರೀಕ್ಷಕರಾದ ಲೋಹಿತ್, ವಿಕಾಸ್, ಸುರೇಶ್, ಪ್ರಭುರಾಜ್, ಲಕ್ಕಣ್ಣ, ವಸಂತ್, ರವಿ ಹಾಗೂ ಕೃಷ್ಣಮೂರ್ತಿಯವರು ನೇತೃತ್ವ ವಹಿಸಿದ್ದರು.

ಹಂದಿ ಮಾಲಿಕರಿಗೆ ಸೂಚನೆ:
ಶಿವಮೊಗ್ಗ ನಗರದಲ್ಲಿ ಹಂದಿಗಳನ್ನು ಸಾಕಲು ಯಾವುದೇ ಅನುಮತಿ ಇರುವುದಿಲ್ಲ. ಯಾರಾದರೂ ಇಂತಹ ಹಂದಿಗಳನ್ನು ಸಾಕಿದರೆ ತಮ್ಮ ಸ್ಥಳದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಅವುಗಳನ್ನು ಹೊರಗೆ ಬಿಟ್ಟರೆ ಪಾಲಿಕೆ ಮುಲಾಜಿಲ್ಲದೆ ಅವುಗಳನ್ನು ಹಿಡಿದು ಸ್ಥಳಾಂತರಿಗೊಳಿಸುವ ಪ್ರಕ್ರಿಯೆಯನ್ನು ನಡೆಸುತ್ತದೆ ಎಂದು ಪಾಲಿಕೆಯ ಆರೋಗ್ಯ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಪ್ರಭಾಕರ್ ತಿಳಿಸಿದ್ದಾರೆ.
ಹಂದಿ ಸಾಕುವ ಯಾವುದೇ ವ್ಯಕ್ತಿಯಾಗಲಿ ಅವುಗಳನ್ನು ಯಾವುದೇ ಕಾರಣಕ್ಕೂ ಹೊರಗೆ ಬಿಡುವಂತಿಲ್ಲ. ಇಂತಹ ವಿಷಯ ಗಮನಕ್ಕೆ ಬಂದರೆ ಹಂದಿಗಳನ್ನು ಹಿಡಿಯುವ ಜೊತೆಗೆ ಆ ಮಾಲೀಕರಿಗೆ ದಂಡ ವಿಧಿಸಲಾಗುತ್ತದೆ ಎಂದು ಪಾಲಿಕೆ ತಿಳಿಸಿದೆ.
