ಶಿವಮೊಗ್ಗ: ರಾಜ್ಯದ ಐವರು ಸಚಿವರಿಗೆ ಎಚ್ಚರಿಕೆಯಿಂದ ಇರುವಂತೆ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಸೂಚಿಸಿದ್ದಾರೆ ಎಂಬ ವರದಿಗಳು ಸಚಿವ ಸಂಪುಟದ ಘನತೆಗೆ ಧಕ್ಕೆ ತರುವಂತಿವೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಆಕ್ಷೇಪ ವ್ಯಕ್ತಪಡಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಚಿವರ ವಿರುದ್ಧ ಹನಿಟ್ರ್ಯಾಪ್ ಮಾದರಿಯ ಸ್ಟಿಂಗ್ ಆಪರೇಷನ್ ನಡೆಯುತ್ತಿದೆ ಎಂಬ ಚರ್ಚೆ ಆತಂಕ ಮೂಡಿಸಿದೆ. ಇಂತಹ ಸುದ್ದಿಗಳನ್ನು ಓದಿದಾಗ ನೋವು, ಅಸಹ್ಯ ಮತ್ತು ಬೇಸರವಾಗುತ್ತದೆ. ಹೈಸ್ಕೂಲ್ ಹಾಗೂ ಕಾಲೇಜು ವಿದ್ಯಾರ್ಥಿಗಳು ಹನಿಟ್ರ್ಯಾಪ್ ಎಂದರೇನು ಎಂದು ಪ್ರಶ್ನಿಸಿದರೆ ಏನು ಉತ್ತರ ನೀಡಬೇಕು ಎಂದು ಅವರು ಪ್ರಶ್ನಿಸಿದರು.

ಐವರು ಸಚಿವರಿಗೆ ಎಚ್ಚರಿಕೆ ನೀಡಲಾಗಿದೆ ಎಂಬ ವರದಿಗೆ ಪ್ರತಿಕ್ರಿಯಿಸಿದ ಅವರು, ಈ ವಿಚಾರದ ಬಗ್ಗೆ ಮುಖ್ಯಮಂತ್ರಿಗಳಿಗೆ ಮಾಹಿತಿ ಇದ್ದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲವೇ ಅವರನ್ನು ಕರೆದು ತಪ್ಪುಗಳನ್ನು ಸರಿಪಡಿಸಿಕೊಳ್ಳುವಂತೆ ಸೂಚಿಸಬೇಕು. ತಪ್ಪು ನಡೆಯುತ್ತಿದ್ದರೆ ಅದನ್ನು ನಿಲ್ಲಿಸಬೇಕೇ ಹೊರತು, ಎಚ್ಚರಿಕೆಯಿಂದ ಮುಂದುವರಿಯುವಂತೆ ಸೂಚಿಸಿದಂತಾಗಬಾರದು ಎಂದರು.

ರಾಜ್ಯದಲ್ಲಿ ಬರ ಪರಿಸ್ಥಿತಿ, ಕುಡಿಯುವ ನೀರಿನ ಸಮಸ್ಯೆ ಹಾಗೂ ಜಾನುವಾರುಗಳಿಗೆ ನೀರು ಮತ್ತು ಮೇವಿನ ಕೊರತೆಯಂತಹ ಗಂಭೀರ ಸಮಸ್ಯೆಗಳಿವೆ. ಇವುಗಳ ಪರಿಹಾರಕ್ಕೆ ಆದ್ಯತೆ ನೀಡಬೇಕಾದ ಸಂದರ್ಭದಲ್ಲಿ ಸಚಿವರ ಕುರಿತ ಸ್ಟಿಂಗ್ ಆಪರೇಷನ್ ಚರ್ಚೆಗಳು ನಡೆಯುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ಮಾಜಿ ಶಾಸಕರ ವೈಯಕ್ತಿಕ ಜೀವನದ ಕುರಿತು ವಿಧಾನಮಂಡಲದ ಅಧಿವೇಶನದಲ್ಲಿ ಮಾಡಲಾದ ಹೇಳಿಕೆಗಳ ಬಗ್ಗೆಯೂ ಪ್ರತಿಕ್ರಿಯಿಸಿದ ಈಶ್ವರಪ್ಪ, ಇಂತಹ ಹೇಳಿಕೆಗಳಿಂದ ಶಾಸಕರ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನ ಮೂಡುವುದರ ಜತೆಗೆ ಅವರ ಕುಟುಂಬದವರಿಗೂ ಮುಜುಗರ ಉಂಟಾಗುತ್ತದೆ. ಸಚಿವರು ಹಾಗೂ ಶಾಸಕರ ಕುರಿತ ಆರೋಪಗಳು ಮತ್ತು ಸುದ್ದಿಗಳು ಪ್ರಕಟವಾಗುವಾಗ ಅವರ ಕುಟುಂಬದವರ ಪರಿಸ್ಥಿತಿಯನ್ನೂ ಪರಿಗಣಿಸಬೇಕು ಎಂದರು.

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಕುರಿತು ಮಾತನಾಡಿದ ಅವರು, ಸಂವಿಧಾನಬದ್ಧ ಸಂಸ್ಥೆಗಳ ವಿರುದ್ಧ ಹಗುರವಾಗಿ ಮಾತನಾಡುವುದು ಸರಿಯಲ್ಲ. ಪ್ರಕ್ರಿಯೆಯಲ್ಲಿ ಲೋಪಗಳಿದ್ದರೆ ಕಾನೂನುಬದ್ಧವಾಗಿ ಸರಿಪಡಿಸಿಕೊಳ್ಳಲು ಅವಕಾಶಗಳಿವೆ. ಈ ವಿಚಾರವಾಗಿ 42 ಮಾಜಿ ನ್ಯಾಯಾಧೀಶರು ಬಹಿರಂಗ ಪತ್ರ ಬರೆದಿರುವುದನ್ನು ಸ್ವಾಗತಿಸುವುದಾಗಿ ತಿಳಿಸಿದರು.

ಬಿಜೆಪಿಗೆ ಮರಳುವ ಕುರಿತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ವೈಯಕ್ತಿಕ ಅನುಕೂಲಕ್ಕಾಗಿ ಬಿಜೆಪಿಗೆ ಮರಳಲು ಪ್ರಯತ್ನಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದರು. ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ಉದ್ದೇಶದಿಂದ ಸೈದ್ಧಾಂತಿಕವಾಗಿ ಒಪ್ಪಿಗೆ ಇದ್ದರೂ ಪಕ್ಷದಿಂದ ದೂರ ಉಳಿದಿರುವವರನ್ನು ಸಂಘಟನೆಯೊಂದಿಗೆ ಸೇರಿಸಬೇಕು ಎಂಬುದು ತಮ್ಮ ಆಶಯ ಎಂದು ಹೇಳಿದರು.