3
ಶಿವಮೊಗ್ಗ: ಇತ್ತೀಚೆಗೆ ಜರುಗಿದ ವಿಧಾನ ಪರಿಷತ್ನ ನಾಲ್ಕೂ ಕ್ಷೇತ್ರಗಳ ಚುನಾವಣೆಯಲ್ಲಿ ಬಿಜೆಪಿ ಮೈತ್ರಿಕೂಟ ಜಯಭೇರಿ ಬಾರಿಸಿದ್ದು, ೨೦೨೮ರ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಿದೆ. ಅದರಲ್ಲಿ ಬಿಜೆಪಿ ೧೨೦ -೧೩೦ ಸ್ಥಾನಗಳನ್ನು ಗೆಲ್ಲಲಿದ್ದು, ಅದನ್ನು ಕಾಂಗ್ರೆಸ್ ನಿಂದ ತಪ್ಪಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ಅವರು ಇಂದು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪಕ್ಷದ ಜಿಲ್ಲಾ ಸಮಿತಿ ಸಭೆ ಉದ್ಘಾಟಿಸಿ ಮಾತನಾಡಿದರು.
ಶಿವಮೊಗ್ಗ ಜಿಲ್ಲೆ ಇಡೀ ರಾಜ್ಯಕ್ಕೇ ನಾಯಕತ್ವ ನೀಡಿದ ಜಿಲ್ಲೆಯಾಗಿದೆ. ಪಕ್ಷದ ಕೇಂದ್ರ ಕಚೇರಿಯಿಂದ ಬರುವ ಎಲ್ಲಾ ಚಟುವಟಿಕೆಗಳನ್ನು ಯಶಸ್ವಿಯಾಗಿ ಹಮ್ಮಿಕೊಳ್ಳುವಲ್ಲಿ ಶಿವಮೊಗ್ಗ ಜಿಲ್ಲಾ ಘಟಕ ಮುಂಚೂಣಿಯಲ್ಲಿದೆ. ಮುಂಬರಲಿರುವ ಜಿಲ್ಲಾ ಪಂಚಾಯತ್, ತಾಲೂಕ ಪಂಚಾಯಿತಿ ಚುನಾವಣೆ ಕಾರ್ಯಕರ್ತರ ಚುನಾವಣೆಯಾಗಿದೆ. ಸಂಘಟನೆ ವಿಷಯದಲ್ಲಿ ಕಾರ್ಯಕರ್ತರು ಯಾವತ್ತೂ ಹಿಂದೆ ಬಿದ್ದಿಲ್ಲ ಎಂದು ಶ್ಲಾಘಿಸಿದರು.

ಡಿಸೆಂಬರ್ ೧ರಿಂದ ೨೫ರವರೆಗೆ ಪ್ರಧಾನಿ ಮೋದಿ ಅವರ ನಿರಂತರ ೨೫ ವರ್ಷಗಳ ಯಶಸ್ವಿ ಆಡಳಿತದ ಹಿನ್ನಲೆಯಲ್ಲಿ ರಾಜ್ಯದ ಎಲ್ಲಾ ೨೨೪ ವಿಧಾನಸಭಾ ಕ್ಷೇತ್ರಗಳಲ್ಲಿ ’ಸೇವಾ ಬೂತ್ ಅಭಿಯಾನ’ ಹಮ್ಮಿಕೊಳ್ಳಲಾಗಿದ್ದು, ಪ್ರತಿ ಬೂತ್ ನಲ್ಲಿ ಹಿರಿಯ ಕಾರ್ಯಕರ್ತರ ನೇತೃತ್ವದಲ್ಲಿ ’ವಿಸ್ತಾರಕ ಯೋಜನೆ’ಯನ್ನು ಹಮ್ಮಿಕೊಳ್ಳಲಾಗಿದೆ. ಕಾಂಗ್ರೆಸ್ ಸರ್ಕಾರದ ಆಡಳಿತದ ವೈಫಲ್ಯ, ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡು ಸಾರ್ವಜನಿಕರಿಗೆ ಬೆಲೆ ಏರಿಕೆಯಂತಹ ಬರೆ ಎಳೆಯುತ್ತಿದೆ. ಸರ್ಕಾರದ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಲಾಗುವುದು ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ಗೆ ಹಿಂದುಳಿದ ಶೋಷಿತ ವರ್ಗದವರ ಬಗ್ಗೆ ಕಾಳಜಿ ಇಲ್ಲ. ಇತ್ತೀಚೆಗೆ ಹಾಲು ಮತ್ತು ಹಾಲಿನ ಉತ್ಪನ್ನಗಳ ದರವನ್ನು ಸಾರ್ವಜನಿಕರ ಮೇಲೆ ಹೇರಿದೆ. ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಹಾಲು ಉತ್ಪಾದಕರಿಗೆ ನೀಡುವ ೨ ರೂ. ಸಹಾಯಧನವನ್ನು ಸರ್ಕಾರದಿಂದಲೇ ನೀಡಲಾಗಿತ್ತು. ಸಾರ್ವಜನಿಕರಿಗೆ ಯಾವುದೇ ಭಾರ ಹೇರಲಾಗಿರಲಿಲ್ಲ ಎಂದ ಅವರು, ರಾಜ್ಯ ಸರ್ಕಾರದ ವೈಫಲ್ಯಗಳನ್ನು ಕಾರ್ಯಕರ್ತರು ಮನೆ ಮನೆಗೆ ಮುಟ್ಟಿಸಬೇಕು. ಬರಲಿರುವ ಚುನಾವಣೆಗಳನ್ನು ಎದುರಿಸಲು ಕಾರ್ಯಕರ್ತರು ಸಜ್ಜಾಗಬೇಕು ಎಂದು ಕರೆ ನೀಡಿದರು.

ಕಾಂಗ್ರೆಸ್ನ ಹಣ ಮತ್ತು ತೋಳ್ಬಲದ ನಡುವೆ ಎನ್ಡಿಎ ಅಭ್ಯರ್ಥಿಗಳು ಗೆಲುವು ಸಿಗಲು ಕಾರಣ ಪಕ್ಷದ ಸಂಘಟನೆ. ಬಿಜೆಪಿ ಕಾರ್ಯಕರ್ತರು ಸವಾಲುಗಳನ್ನು ಸ್ವೀಕರಿಸಿ ಗೆಲ್ಲುವ ಪಣ ತೊಡಬೇಕು. ಹಿರಿಯೂರಿನಲ್ಲಿ ಇತ್ತೀಚೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಿಜೆಪಿ ಕಾರ್ಯಕರ್ತರನ್ನು ಬಹಿಷ್ಕರಿಸಬೇಕು ಎಂದು ನೀಡಿದ ಹೇಳಿಕೆಗೆ ತಿರುಗೇಟು ನೀಡಿದ ವಿಜಯೇಂದ್ರ ಇದು ಮುಖ್ಯಮಂತ್ರಿಗಳ ಉದ್ಧಟತನದ ಹೇಳಿಕೆ. ಕಾಂಗ್ರೆಸ್ ಸರ್ಕಾರದ ಇತ್ತೀಚಿನ ಆರ್ಥಿಕ ಸ್ಥಿತಿಗತಿಗಳು ಬಹಿರಂಗವಾಗಿದ್ದು, ಕಾಂಗ್ರೆಸ್ ಸರ್ಕಾರ ಬೆತ್ತಲೆಯಾಗಿದೆ ಎಂಬುದನ್ನು ರುಜುವಾತುಪಡಿಸಿದೆ. ಕಾರ್ಯಕರ್ತರು ಸವಾಲುಗಳನ್ನು ಅವಕಾಶವನ್ನಾಗಿ ಪರಿವರ್ತಿಸಿಕೊಂಡು ಚುನಾವಣೆ ಎದುರಿಸಲು ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಿ.ಎಸ್. ಅರುಣ್, ಡಾ. ಧನಂಜಯ ಸರ್ಜಿ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್, ಪ್ರಮುಖರಾದ ಹರತಾಳು ಹಾಲಪ್ಪ, ಕೆ.ಜಿ. ಕುಮಾರಸ್ವಾಮಿ, ಕೆ.ಬಿ. ಅಶೋಕ್ ನಾಯ್ಕ್, ಎಂ.ಬಿ. ಹರಿಕೃಷ್ಣ, ಎಸ್.ಎಸ್. ಜ್ಯೋತಿಪ್ರಕಾಶ್, ಎಸ್. ದತ್ತಾತ್ರಿ ಮೊದಲಾದವರಿದ್ದರು.
ಬಿಜೆಪಿ ವರಿಷ್ಠರು ಬಿ.ವೈ. ವಿಜಯೇಂದ್ರ ಅವರನ್ನು ಮೂರು ವರ್ಷಗಳ ರಾಜ್ಯಾಧ್ಯಕ್ಷರನ್ನಾಗಿ ನಿಯುಕ್ತಿ ಮಾಡಿದ್ದು, ಅಲ್ಲಿಂದ ಇಂದಿನವರೆಗೆ ಅವರು ಒಂದು ದಿನವೂ ಬಿಡುವಿಲ್ಲದೇ ಸಂಘಟನೆಗಾಗಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದಾರೆ. ಕಾರ್ಯಕರ್ತರನ್ನು ಹುರಿದುಂಬಿಸುತ್ತಿದ್ದಾರೆ. ಬಿ.ವೈ.ವಿ. ನಿಜವಾದ ಸಾಮಾಜಿಕ ಕಾಳಜಿ ಇದೆ. ಪಕ್ಷದ ಹಿರಿಯರು, ಕಿರಿಯರಿಗೆ ಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ ವಿಜಯೇಂದ್ರ ತಮ್ಮ ಸಾಮರ್ಥ್ಯವನ್ನು ರುಜುವಾತು ಮಾಡಿದ್ದಾರೆ. ೨೦೦೮ರ ಚುನಾವಣೆ ಬಳಿಕ ನಮ್ಮ ಅಭ್ಯರ್ಥಿ(ಬಿ.ವೈ. ವಿಜಯೇಂದ್ರ) ಮುಖ್ಯಮಂತ್ರಿ ಆಗಬೇಕು.
-ಡಿ.ಎಸ್. ಅರುಣ್, ಶಾಸಕರು