ಶಿವಮೊಗ್ಗ,ಅ.09:
ನಗರದ ನೆಹರೂ ರಸ್ತೆಯ ಸುಜಾತಾ ಬಿಲ್ಡಿಂಗ್ನಲ್ಲಿ ಬ್ಯಾಗ್ ವ್ಯಾಪಾರ ನಡೆಸುತ್ತಿದ್ದ ಜಗಳದ ವಿಚಾರ ಕಳೆದೊಂದು ತಿಂಗಳಿನಿಂದ ಒಣ ಕೆಂಡದಂತಿದ್ದು, ಈಗ ಮಾನಬಂಗಕ್ಕೆ ಯತ್ನ, ಹಲ್ಲೆ, ಜಾತಿನಿಂದನೆ ಪ್ರಕರಣದ ದೂರುಗಳು ದಾಖಲಾಗಿವೆ.
ಈ ಘಟನೆಯಲ್ಲಿ ಅಲ್ಲಿನ ವ್ಯಾಪಾರಿ ಪುರಂದರ ನಾಯ್ಕರಿಗೆ ಜಾತಿ ನಿಂದನೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಹಾಗೂ ಜೀವ ಬೆದರಿಕೆ ಹಾಕಿದ ಆರೋಪ ದೂರಾಗಿ ದಾಖಲಾಗಿದೆ.

ಈ ಸಂಬಂಧ ಮೂವರ ವಿರುದ್ಧ ಶಿವಮೊಗ್ಗ ಡಿಸಿಆರ್ಇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂಬಂಧ ಶಿವಮೊಗ್ಗ ಡಿಸಿಆರ್ಇ ಪೊಲೀಸ್ ಠಾಣೆಯಲ್ಲಿ ಕ್ರೈಂ ನಂ.17/2026 ಅಡಿಯಲ್ಲಿ ಬಿಎನ್ಎಸ್ನ ಸೆಕ್ಷನ್ 115(2), 351(2), 352 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಸೆಕ್ಷನ್ 3(1)(r), 3(1)(s), 3(2)(va) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಎಫ್ಐಆರ್ ಅನ್ನು ಸೆ.30, 2026ರಂದು ದಾಖಲಿಸಲಾಗಿದೆ.

ಈ ಮೊದಲು ಆ ವ್ಯಾಪಾರಿ ಮಹಿಳೆ ಅವರ ಮಾನಭಂಗಕ್ಕೆ ಯತ್ನಿಸಿದ್ದರು ಎಂದು ಸುದ್ದಿ ಮಾಡಲಾಗಿತ್ತು. ಆದರೆ ಜಾತಿ ನಿಂದನೆ ಮಾಡಿರುವುದಾಗಿ ಈ ಮೊದಲೆ ನಾಯ್ಕ್ ಡಿಸಿಆರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವ್ಯಾಪಾರ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ
ಎಫ್ಐಆರ್ ಪ್ರಕಾರ, ದೂರುದಾರ ನಾಯ್ಕ್ (42) ಅವರು ಶಿವಮೊಗ್ಗದ ನೆಹರೂ ರಸ್ತೆಯ ಸುಜಾತಾ ಬಿಲ್ಡಿಂಗ್ನಲ್ಲಿರುವ ಗೋಕಲ್ ಕಮ್ಯುನಿಕೇಷನ್ ಬಳಿ ಬ್ಯಾಗ್ ಹಾಗೂ ಇತರೆ ವಸ್ತುಗಳ ವ್ಯಾಪಾರ ನಡೆಸುತ್ತಿದ್ದರು. ಅವರ ಪಕ್ಕದ ಮಳಿಗೆಯಲ್ಲಿ ಆರೋಪಿತರು ಫುಟ್ ಪಾತ್ ಮೇಲೆ ಬ್ಯಾಗ್ ವ್ಯಾಪಾರ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಸೆ.8ರಂದು ಸಂಜೆ ಸುಮಾರು 6.30ರ ವೇಳೆಗೆ ದೂರುದಾರರು ತಮ್ಮ ಅಂಗಡಿಯ ಮುಂಭಾಗದಲ್ಲಿ ಬ್ಯಾಗ್ ವ್ಯಾಪಾರ ಮಾಡುತ್ತಿದ್ದ ಸಂದರ್ಭದಲ್ಲಿ, ಆರೋಪಿತರ ಪೈಕಿ ಇಪ್ಪತ್ತು ವರುಷದ ಯುವಕ ವ್ಯಾಪಾರ ವಿಚಾರಕ್ಕೆ ಸಂಬಂಧಿಸಿದಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಆ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಅವರ ತಾಯಿ ದೂರುದಾರರನ್ನು ಅವಾಚ್ಯವಾಗಿ ನಿಂದಿಸಿದ್ದಾಗಿ ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಜಾತಿ ನಿಂದನೆ ಆರೋಪ:
ಈ ಮೂವರೂ ಅಂಗಡಿಗೆ ಬರುವ ಗ್ರಾಹಕರ ಎದುರು ದೂರುದಾರರ ಜಾತಿಯನ್ನು ಉಲ್ಲೇಖಿಸಿ ಅವಮಾನಿಸಿದ್ದಾರೆ ಎಂದು ಆರೋಪಿಸಲಾಗಿದೆ.
ದೂರುದಾರರು ಬಂಜಾರ ಸಮುದಾಯಕ್ಕೆ ಸೇರಿದವರು ಎಂದು ಉಲ್ಲೇಖಿಸಿರುವ ಎಫ್ಐಆರ್ನಲ್ಲಿ, ಆರೋಪಿತರು ಜಾತಿ ಸೂಚಕ

ಅವಹೇಳನಕಾರಿ ಪದಗಳನ್ನು ಬಳಸಿದ್ದಾರೆ ಹಾಗೂ ವ್ಯಾಪಾರದಲ್ಲಿ ಸ್ಪರ್ಧೆ ನೀಡುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ದೂರಲಾಗಿದೆ.
ಅಲ್ಲದೆ, ಕೈಕಾಲು ಮುರಿಸುವುದಾಗಿ ಬೆದರಿಕೆ ಹಾಕಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.
ಸ್ಥಳೀಯ ಮುಖಂಡರ ಮೂಲಕ ಸಮಸ್ಯೆ ಬಗೆಹರಿಸಲು ಯತ್ನ

ಘಟನೆ ಬಳಿಕ ದೂರುದಾರರು ಸ್ಥಳೀಯ ಮುಖಂಡರಿಗೆ ವಿಚಾರ ತಿಳಿಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದ್ದರು ಎನ್ನಲಾಗಿದೆ. ಆದರೆ ಯಾವುದೇ ತೀರ್ಮಾನವಾಗದ ಹಿನ್ನೆಲೆಯಲ್ಲಿ, ಘಟನೆ ನಡೆದ ಸುಮಾರು ಮೂರು ವಾರಗಳ ಬಳಿಕ ಸೆ.30 ರಂದು ಶಿವಮೊಗ್ಗ ಡಿಸಿಆರ್ಇ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ ಎಂದು ಎಫ್ಐಆರ್ನಲ್ಲಿ ತಿಳಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.