ಶಿವಮೊಗ್ಗ, ಅ.೦೯:
ನೆಹರೂ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ, ಉಪ ನಿರ್ದೇಶಕರ ಕಚೇರಿ ಶಿವಮೊಗ್ಗ, ಶ್ರೀ ಮಹಾವೀರ ವಿದ್ಯಾ ಸಂಸ್ಥೆ, ಶಿವಮೊಗ್ಗ ಹಾಗೂ ಜಿಲ್ಲಾ ಅನುದಾನ ರಹಿತ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ, ಶಿವಮೊಗ್ಗ ಇವರ

ಸಂಯುಕ್ತ ಆಶ್ರಯದಲ್ಲಿ ಎರಡು ದಿನ ನಡೆಸಲಾದ ಬೆಂಗಳೂರು ವಿಭಾಗ ಮಟ್ಟದ ವಾಲಿಬಾಲ್ ಸಮಾರೋಪ ಸಮಾರಂಭ ನಡೆಯಿತು.

ಸಮಾರೋಪ ಸಮಾರಂಭಕ್ಕೆ ಆಗಮಿಸಿದ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಸಿದ್ದಬಸಪ್ಪ ಬಿ. ವಿಜೇತ ತಂಡಗಳಿಗೆ ಶುಭ ಹಾರೈಸಿದರು.

ಈ ಸಂಧರ್ಭ ದಲ್ಲಿ ಭೋಜೆಗೌಡ್ರ ಆಪ್ತ ಸಹಾಯಕ, ಪರಶುರಾಮ್, ಜಿಲ್ಲಾ ಅನುದಾನ ರಹಿತ ಶಾಲಾ ಒಕ್ಕೂಟದ ಅಧ್ಯಕ್ಷ ಗಿರೀಶ್, ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ರಮೇಶ್ ಬಾಬು, ನಿವೃತ್ತ ದೈಹಿಕ ಶಿಕ್ಷಣ ಅಧಿಕಾರಿ ಬಿ.ಹೆಚ್. ನಿರಂಜನ್ ಮೂರ್ತಿ, ಜಿಲ್ಲಾ ಅನುದಾನ ರಹಿತ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ರಾ. ಹ. ತಿಮ್ಮೇನಹಳ್ಳಿ ಮಠಪತಿ, ರಘು, ಸೋಮಶೇಖರ್ ಇನ್ನು ಮುಂತಾದವರು ಉಪಸ್ಥಿತರಿದ್ದರು.

ವಿಜೇತ ಬಾಲಕ ಮತ್ತು ಬಾಲಕಿಯರಿಗೆ ಅತ್ಯಾಕರ್ಷಕ ಟ್ರೋಫಿ ಮತ್ತು ಬಹುಮಾನಗಳನ್ನು ಮುಖ್ಯ ಅತಿಥಿಗಳು ಕ್ರೀಡಾಪಟುಗಳಿಗೆ ನೀಡಿ ಗೌರವಿಸಿದರು.

ಬಾಲಕ ಮತ್ತು ಬಾಲಕಿಯರ ಪ್ರಥಮ ಮತ್ತು ದ್ವಿತೀಯ ಸ್ಥಾನದ ವಿವರ
ಬಾಲಕರ ವಿಭಾಗ : ದಾವಣಗೆರೆ ಜಿಲ್ಲೆ ಹಾಗೂ ಬೆಂಗಳೂರು ಉತ್ತರ ಈ ಎರಡು ತಂಡಗಳ ಮಧ್ಯೆ ಅಂತಿಮ ಪಂದ್ಯದಲ್ಲಿ ಉತ್ತಮ ಆಟದ ಪ್ರದರ್ಶನ ಕಂಡು ಬಂದಿತು. ದಾಳಿ ಮತ್ತು ಅಷ್ಟೇ ರಕ್ಷಣಾತ್ಮಕ ಆಟವನ್ನು ಕಾಣಬಹುದಾಗಿತ್ತು. ಮೊದಲನೇ ಸೆಟ್ಟಿನಲ್ಲಿ ಎರಡು ತಂಡಗಳು ರೋಚಜ ಆಟದ ಪ್ರದರ್ಶನ ನೀಡಿ ೨೫ ಅಂಕ ಪಡೆದು ಮೊದಲ ಸೆಟ್ ತನ್ನದಾಗಿಸಿಕೊಂಡಿತು, ಎರಡನೇ ಸೆಟ್ ನಲ್ಲಿ ರೋಚಕ ಆಟದ ಪ್ರದರ್ಶನ ನೀಡಿ ದಾವಣಗೆರೆ ಜಿಲ್ಲೆ ಸಮ ಬಲದ ಹೋರಾಟ ನೀಡಿ, ಎರಡನೇ ಸುತ್ತನ್ನು ತನ್ನದಾಗಿಸಿಕೊಂಡು ಮೂರನೇ ಸುತ್ತಿಗೆ ಅರ್ಹತೆ ಪಡೆದು,ಮೂರನೇ ಸುತ್ತಿನಲ್ಲಿ ಜಿದ್ದಾ ಜಿದ್ದಿಯ ಹೋರಾಟದಿಂದ ದಾವಣಗೆರೆ ಜಿಲ್ಲೆಯ ಬಾಲಕರ ತಂಡ ವಾಲಿಬಾಲ್ ಟ್ರೋಪಿಯನ್ನು ತನ್ನ ಮುಡಿಗೇರಿಸಿಕೊಂಡಿತು. ಬೆಂಗಳೂರು ಉತ್ತರ ರನ್ನರ್ ಅಪ್ ಆಗಿ ತೃಪ್ತಿಪಡಬೇಕಾಯಿತು.
ಬಾಲಕಿಯರ ವಿಭಾಗ : ಬೆಂಗಳೂರು ಸೆಂಟ್ರಲ್ ಹಾಗೂ ರಾಮನಗರ ಜಿಲ್ಲೆ ಬಾಲಕಿಯರ ಈ ಎರಡು ತಂಡಗಳ ಮಧ್ಯೆ ರೋಚಕ ಪಂದ್ಯ ನಡೆಯಿತು.ಅತ್ಯಾಕರ್ಷಕ, ಮನಮೋಹಕ ಆಟದ ಪ್ರದರ್ಶನ ನೀಡಿದರು ಕೂಡ ಕೊನೆಯಲ್ಲಿ ನೇರ ಎರಡು ಸೆಟ್ ಗಳ ಅಂತರದಲ್ಲಿ ವಿಜಯಮಾಲೆಯನ್ನು ಬೆಂಗಳೂರು ಸೆಂಟ್ರಲ್ ತನ್ನದಾಗಿಸಿ ಕೊಂಡಿತು. ರಾಮನಗರ ಜಿಲ್ಲೆ ಎರಡನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ಬಾಲಕ ಬಾಲಕಿಯರು ರಾಜ್ಯಮಟ್ಟದ ವಾಲಿಬಾಲ್ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ.