ಶಿವಮೊಗ್ಗ: ಖಾಸಗಿ ಬಸ್ನಲ್ಲಿ ಪ್ರಯಾಣಿಸುವ ವೇಳೆ ಮಹಿಳೆಯೊಬ್ಬರು ಮರೆತು ಬಿಟ್ಟುಹೋಗಿದ್ದ 2 ಲಕ್ಷ ಮೌಲ್ಯದ ಚಿನ್ನಾಭರಣ, 60 ಸಾವಿರ ನಗದು ಹಾಗೂ ಮೊಬೈಲ್ ಫೋನ್ ಇದ್ದ ಬ್ಯಾಗ್ನ್ನು ಪತ್ತೆಹಚ್ಚಿದ ದೊಡ್ಡಪೇಟೆ ಠಾಣೆ ಪೊಲೀಸರು, ಅದನ್ನು ಸುರಕ್ಷಿತವಾಗಿ ಮಹಿಳೆಗೆ ಹಿಂದಿರುಗಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಆಲಸೂರು ಗೇಟ್ ಮೂಲದ ಮಹಿಳೆಯೊಬ್ಬರು 2026ರ ಅಕ್ಟೋಬರ್ 6ರಂದು ಶಿವಮೊಗ್ಗದಿಂದ ತರೀಕೆರೆಗೆ ಖಾಸಗಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದರು. ಈ ಸಂದರ್ಭದಲ್ಲಿ ಚಿನ್ನಾಭರಣ, ನಗದು ಹಣ ಹಾಗೂ ಮೊಬೈಲ್ ಫೋನ್ ಇದ್ದ ಬ್ಯಾಗ್ನ್ನು ಬಸ್ನಲ್ಲಿಯೇ ಮರೆತು ಇಳಿದಿದ್ದರು.

ಬ್ಯಾಗ್ ಕಳೆದುಕೊಂಡಿರುವುದನ್ನು ಅರಿತ ಮಹಿಳೆ ದೊಡ್ಡಪೇಟೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಹೆಡ್ ಕಾನ್ಸ್ಟೆಬಲ್ ಮಂಜಪ್ಪ ಹಾಗೂ ಪೊಲೀಸ್ ಕಾನ್ಸ್ಟೆಬಲ್ ಚಂದ್ರನಾಯ್ಕ ಅವರು ಖಾಸಗಿ ಬಸ್ನ್ನು ಪತ್ತೆಹಚ್ಚಿ, ಅದರಲ್ಲಿದ್ದ ಮಹಿಳೆಯ ಬ್ಯಾಗ್ನ್ನು ಮರಳಿ ತಂದಿದ್ದಾರೆ.

ಬಳಿಕ ಬ್ಯಾಗ್ನಲ್ಲಿದ್ದ ಚಿನ್ನಾಭರಣ, 60 ಸಾವಿರ ನಗದು ಹಾಗೂ ಮೊಬೈಲ್ ಫೋನ್ನ್ನು ಮಹಿಳೆಗೆ ಹಿಂದಿರುಗಿಸಿದ್ದಾರೆ. ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕ ನಿಖಿಲ್ ಬಿ. ಅವರ ಮಾರ್ಗದರ್ಶನದಲ್ಲಿ ಪೊಲೀಸರು ತ್ವರಿತವಾಗಿ ಕಾರ್ಯನಿರ್ವಹಿಸಿ, ಸಾರ್ವಜನಿಕರ ಆಸ್ತಿಯ ಸುರಕ್ಷತೆಗೆ ಆದ್ಯತೆ ನೀಡಿದ್ದಾರೆ.

ಕಳೆದುಹೋದ ಬೆಲೆಬಾಳುವ ವಸ್ತುಗಳನ್ನು ಮರಳಿ ಪಡೆಯಲು ನೆರವಾದ ದೊಡ್ಡಪೇಟೆ ಠಾಣೆಯ ಪೊಲೀಸರ ಕಾರ್ಯಕ್ಕೆ ಮಹಿಳೆ ಕೃತಜ್ಞತೆ ಸಲ್ಲಿಸಿದ್ದಾರೆ.