ಬಾಡೂಟಕ್ಕೆ ಬ್ರೇಕ್

ಶಿರಾಳಕೊಪ್ಪ: ಮದುವೆ ಎಂಬುದೇ ಭಾರೀ ಖರ್ಚು. ಇನ್ನು ಬಾಡೂಟ ಎಂಬುದು ಮತ್ತಷ್ಟು ಹೊರೆಯಾಗಿದೆ. ಈಗ ಬರಗಾಲ ಬೇರೆ ಎದುರಾಗಿದ್ದರಿಂದ ಇದಕ್ಕೆ ಕಡಿವಾಣ ಹಾಕಲು ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಹರಿಗಿ ಗ್ರಾಮಸ್ಥರು ಬಾಡೂಟಕ್ಕೆ ನಿಷೇಧ ಹೇರುವ ನಿರ್ಧಾರ ಕೈಗೊಂಡಿದ್ದಾರೆ.
ಸುಮಾರು 350 ಕುಟುಂಬಗಳು ವಾಸಿಸುವ ಗ್ರಾಮದಲ್ಲಿ ಹಳೇ ಮೈಸೂರು ಭಾಗದಲ್ಲಿ ಪ್ರಚಲಿತದಲ್ಲಿರುವ ಬೀಗರ ಊಟ ಅರ್ಥಾತ್ ಬಾಡೂಟ ಈಗ ಮಲೆನಾಡಿಗೂ ಬಂದಿದ್ದು ಮದುವೆಗಿಂತ ಹೆಚ್ಚಿನ ಖರ್ಚಾಗುತ್ತಿದೆ. ಹೀಗಾಗಿ ಇದು ಮಧ್ಯಮ, ಬಡ ವರ್ಗದ ಜನರಿಗೆ ಭಾರವಾಗಿದೆ. ಬರಗಾಲ ಇರುವುದರಿಂದ ಇನ್ನಷ್ಟು ಸಂಕಷ್ಟ ತಂದೊಡ್ಡಲಿದೆ ಎಂದರಿತು ಬೀಗರ ಊಟ ಹಾಕಿಸಿದರೆ 1 ಲಕ್ಷ ರೂ. ದಂಡ, ಊಟ ಮಾಡುವವರಿಗೆ 50 ಸಾವಿರ ದಂಡ ಎಂದು ನಿರ್ಣಯ ಕೈಗೊಳ್ಳಲಾಗಿದೆ.

ಬಹುಪಾಲು ಈಡಿಗ (ದೀವರು) ಸಮುದಾಯದವರು ಹೆಚ್ಚಿದ್ದು, ಮೊದ ಮೊದಲು ಸಣ್ಣ ಮಟ್ಟದಲ್ಲಿ ನಡೆಯುತ್ತಿದ್ದ ಬಾಡೂಟ ಕ್ರಮೇಣ ಟ್ರೆಂಡ್ ಆಗಿ ಮಾರ್ಪಟ್ಟಿದೆ. ಬೀಗರ ಊಟಕ್ಕೆ ಶಾಮಿಯಾನ, ಬಾಣಸಿಗ, ದಿನಸಿ ಸೇರಿ 6 ರಿಂದ 8 ಲಕ್ಷ ಖರ್ಚು ವೆಚ್ಚವಾಗಲಿದ್ದು, ಮಧ್ಯಮ ವರ್ಗದವರು 2-3 ಲಕ್ಷ ಸಾಲ ಮಾಡಿಯಾದರೂ ಊಟ ಹಾಕಿಸುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಈ ಸಂಪ್ರದಾಯ ಹೆಣ್ಣು ಹೆತ್ತವರನ್ನು ಆರ್ಥಿಕ ಸಂಕಷ್ಟಕ್ಕೆ ನೂಕುತ್ತದೆ. ಹೀಗಾಗಿ ಇದಕ್ಕೆ ಕಡಿವಾಣ ಹಾಕಲು ನಿರ್ಧರಿಸಿದ್ದಾರೆ.

ದಿನಾಂಕ: 06/10/2026 ರಂದು ಚಿಕ್ಕ ಮಗಳೂರು ಜಿಲ್ಲೆ ತರಿಕೆರೆ ತಾಲ್ಲೂಕ್ ಅಲಸೂರು ಗೇಟ್ ಮೂಲದ ಮಹಿಳೆಯು ಶಿವಮೊಗ್ಗದಿಂದ ತರಿಕೆರೆಗೆ ಪ್ರಯಾಣಿಸುವ ಸಮಯದಲ್ಲಿ 2 ಲಕ್ಷ ಮೌಲ್ಯದ ಬಂಗಾರದ ಒಡವೆಗಳು ಮತ್ತು 60 ಸಾವಿರ ರೂ ನಗದು ಹಣ ಹಾಗು ಮೊಬೈಲ್ ಇರುವ ಬ್ಯಾಗನ್ನು ಖಾಸಗಿ ಬಸ್ ನಲ್ಲಿಯೇ ಬಿಟ್ಟು ಇಳಿದಿರುತ್ತಾರೆ.
ಈ ಬಗ್ಗೆ ಸದರಿ ಮಹಿಳೆಯು ದೊಡ್ಡಪೇಟೆ ಪೊಲೀಸ್ ಠಾಣೆಗೆ ಸಂಪರ್ಕಿಸಿದ್ದಾಗ ಕೂಡಲೇ ಕಾರ್ಯ ಪ್ರೌವೃತ್ತರಾದ ಮಂಜಪ್ಪ ಹೆಚ್ಸಿ ಮತ್ತು ಚಂದ್ರನಾಯ್ಕ ಪಿಸಿ ರವರು ಖಾಸಗಿ ಬಸ್ ಅನ್ನು ಪತ್ತೆ ಹಚ್ಚಿ, ಮಹಿಳೆ ಬಿಟ್ಟಿದ್ದ ಬ್ಯಾಗ್ ನ್ನು ಮರಳಿ ತಂದು ಮಹಿಳೆಗೆ ಹಿಂದಿರುಗಿಸಿರುತ್ತಾರೆ.

ಕದ್ದ ಚಿನ್ನದ ಸರ ನುಂಗಿದ ಕಳ್ಳ; 50ಕ್ಕೂ ಅಧಿಕ ಬಾಳೆಹಣ್ಣು ತಿನ್ನಿಸಿ ಆಭರಣ ವಶಕ್ಕೆ.
ಮುಂಬೈ, ಮಹಿಳೆಯೊಬ್ಬರಿಂದ ಕಳವು ಮಾಡಿದ್ದ ಚಿನ್ನದ ಸರವನ್ನು ಪೊಲೀಸರಿಂದ ತಪ್ಪಿಸಿಕೊಳ್ಳಲು ನುಂಗಿಬಿಟ್ಟಿದ್ದ ಆರೋಪಿಗೆ ಮುಂಬೈ ಪೊಲೀಸರು 50ಕ್ಕೂ ಅಧಿಕ ಬಾಳೆಹಣ್ಣುಗಳನ್ನು ತಿನ್ನಿಸಿ, ಕೊನೆಗೂ ಆಭರಣವನ್ನು ಮಲದ ಮೂಲಕ ಹೊರತೆಗೆದ ಘಟನೆ ನಡೆದಿದೆ.
ಮುಂಬೈ ನಗರದ ಬೀದಿಯಲ್ಲಿ ಮಹಿಳೆಯ ಚಿನ್ನದ ಸರ ಕಸಿದುಕೊಂಡ ಆರೋಪದಡಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದರು. ಬಂಧನದ ವೇಳೆ ಆತನ ಬಳಿಯಿದ್ದ ಚಿನ್ನದ ಸರವನ್ನು ವಶಪಡಿಸಿಕೊಳ್ಳುವ ಮುನ್ನವೇ ಆರೋಪಿ ಅದನ್ನು ನುಂಗಿಬಿಟ್ಟಿದ್ದ. ಬಳಿಕ ವಿಚಾರಣೆ ನಡೆಸಿದರೂ ಸರ ಕಳವು ಮಾಡಿರುವುದನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದ ಎನ್ನಲಾಗಿದೆ.
ಆರೋಪಿಯ ವೈದ್ಯಕೀಯ ತಪಾಸಣೆ ನಡೆಸಿದಾಗ ಎಕ್ಸ್ರೇ ಮೂಲಕ ಚಿನ್ನದ ಸರ ಹೊಟ್ಟೆಯಲ್ಲಿರುವುದು ಪತ್ತೆಯಾಯಿತು. ಸರವನ್ನು ಹೊರತೆಗೆಯಲು ಶಸ್ತ್ರಚಿಕಿತ್ಸೆ ನಡೆಸಬೇಕಾಗಬಹುದು ಎಂದು ವೈದ್ಯರು ಸೂಚಿಸಿದ್ದರು.
ಶಸ್ತ್ರಚಿಕಿತ್ಸೆ ಬದಲು ಬಾಳೆಹಣ್ಣುಗಳ ಮೊರೆ:
ಶಸ್ತ್ರಚಿಕಿತ್ಸೆಯ ಅಪಾಯ ಮತ್ತು ವೆಚ್ಚವನ್ನು ಪರಿಗಣಿಸಿದ ಪೊಲೀಸರು, ಆಭರಣವನ್ನು ನೈಸರ್ಗಿಕವಾಗಿ ಹೊರತೆಗೆಯುವ ಪ್ರಯತ್ನ ನಡೆಸಿದರು. ಎನಿಮಾ ಮೂಲಕ ಸರ ಹೊರತೆಗೆಯುವ ಪ್ರಯತ್ನವೂ ಫಲ ನೀಡದ ಹಿನ್ನೆಲೆಯಲ್ಲಿ ಆರೋಪಿಗೆ ಹೆಚ್ಚಿನ ಪ್ರಮಾಣದಲ್ಲಿ ಬಾಳೆಹಣ್ಣುಗಳನ್ನು ತಿನ್ನಿಸುವ ವಿಧಾನ ಅನುಸರಿಸಲಾಯಿತು.
ಮೊದಲ ಹಂತದಲ್ಲಿ ದಿನವೊಂದರಲ್ಲೇ 40ಕ್ಕೂ ಅಧಿಕ ಬಾಳೆಹಣ್ಣುಗಳನ್ನು ತಿನ್ನಿಸಲಾಯಿತು. ಇದಾದ ಬಳಿಕವೂ ಚಿನ್ನದ ಸರ ಹೊರಬರದ ಹಿನ್ನೆಲೆಯಲ್ಲಿ ಮತ್ತಷ್ಟು ಬಾಳೆಹಣ್ಣುಗಳನ್ನು ನೀಡಲಾಯಿತು.
ಕೊನೆಗೂ ಚಿನ್ನದ ಸರ ಆರೋಪಿಯ ಮಲದೊಂದಿಗೆ ಹೊರಬಂದಿದ್ದು, ಪೊಲೀಸರು ಅದನ್ನು ಸ್ವಚ್ಛಗೊಳಿಸಿ ಸೋಂಕು ನಿವಾರಣೆ ಮಾಡಿದ ಬಳಿಕ ಸಂತ್ರಸ್ತ ಮಹಿಳೆಗೆ ಹಿಂತಿರುಗಿಸಿದ್ದಾರೆ ಎಂದು ವರದಿಯಾಗಿದೆ.

ಅಪರಾಧ ಸುದ್ದಿ
ವಿದ್ಯುತ್ ಕಡಿತಕ್ಕೆ ಬಲಿಯಾದ ಕೃತಕ ಆಮ್ಲಜನಕ ಅವಲಂಬಿತ ವೃದ್ಧೆ; 75 ವರ್ಷದ ಮಹಿಳೆ ನಿಧನ..
ಕಾಸರಗೋಡು ಕೃತಕ ಆಮ್ಲಜನಕದ ಸಹಾಯದಿಂದ ಚಿಕಿತ್ಸೆ ಪಡೆಯುತ್ತಿದ್ದ 75 ವರ್ಷದ ವೃದ್ಧೆಯೊಬ್ಬರು ದೀರ್ಘಕಾಲ ವಿದ್ಯುತ್ ಕಡಿತಗೊಂಡ ಪರಿಣಾಮ ಸಾವನ್ನಪ್ಪಿದ ದಾರುಣ ಘಟನೆ ಕಾಸರಗೋಡಿನಲ್ಲಿ ನಡೆದಿದೆ. ಮೃತರನ್ನು ಕೆ.ಕೆ.ಪುರದ ಮರಿಯಂ ಎಂದು ಗುರುತಿಸಲಾಗಿದೆ.
ಮರಿಯಂ ಅವರು ನಿರಂತರವಾಗಿ ಆಮ್ಲಜನಕ ಪೂರೈಕೆ ಅಗತ್ಯವಿರುವ ಸ್ಥಿತಿಯಲ್ಲಿದ್ದರು. ಮನೆಯಲ್ಲಿದ್ದ ಆಮ್ಲಜನಕ ಸಾಧನವನ್ನು ವಿದ್ಯುತ್ ಸಂಪರ್ಕದ ಬದಲಿಗೆ ಇನ್ವರ್ಟರ್ ಮೂಲಕ ಕಾರ್ಯನಿರ್ವಹಿಸಲಾಗುತ್ತಿತ್ತು. ಆದರೆ, ಶುಕ್ರವಾರ ಮಧ್ಯಾಹ್ನ ಸುಮಾರು 2 ಗಂಟೆಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ರಾತ್ರಿ 8.30ರ ವೇಳೆಗೆ ಮಾತ್ರ ವಿದ್ಯುತ್ ಪುನಃಸ್ಥಾಪನೆಯಾಗಿದೆ ಎನ್ನಲಾಗಿದೆ.
ಸುಮಾರು ಆರೂವರೆ ಗಂಟೆಗಳ ಕಾಲ ವಿದ್ಯುತ್ ಇಲ್ಲದಿದ್ದ ಕಾರಣ ಆಮ್ಲಜನಕ ಸಾಧನವನ್ನು ಇನ್ವರ್ಟರ್ ಮೂಲಕವೇ ನಿರ್ವಹಿಸಬೇಕಾಯಿತು. ಕೊನೆಗೆ ಇನ್ವರ್ಟರ್ನಲ್ಲಿದ್ದ ವಿದ್ಯುತ್ ಕೂಡ ಖಾಲಿಯಾಗಿ ಸಾಧನ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದೆ. ಇದರಿಂದ ಮರಿಯಂ ಅವರಿಗೆ ಅಗತ್ಯವಿದ್ದ ಆಮ್ಲಜನಕ ಪೂರೈಕೆ ಸ್ಥಗಿತಗೊಂಡು ಅವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಈ ನಡುವೆ ವಿದ್ಯುತ್ ಕಡಿತದ ಕುರಿತು ಸ್ಥಳೀಯರು ಹಲವು ಬಾರಿ ಕೆಎಸ್ಇಬಿ ಕಚೇರಿಗೆ ಕರೆ ಮಾಡಿದ್ದಾಗಿ ತಿಳಿಸಿದ್ದಾರೆ. ಸಾರ್ವಜನಿಕ ಕಾರ್ಯಕರ್ತರು ಸೇರಿದಂತೆ ಹಲವರು ವಿದ್ಯುತ್ ಶೀಘ್ರವೇ ಪುನಃಸ್ಥಾಪಿಸುವಂತೆ ಮನವಿ ಮಾಡಿದ್ದರೂ, ತಾಂತ್ರಿಕ ನಿರ್ವಹಣೆಯ ಕಾರಣ ವಿದ್ಯುತ್ ಕಡಿತಗೊಂಡಿದೆ ಎಂದು ಅಧಿಕಾರಿಗಳಿಂದ ಉತ್ತರ ದೊರೆತಿತ್ತು ಎನ್ನಲಾಗಿದೆ.
ದೀರ್ಘಕಾಲದ ವಿದ್ಯುತ್ ಕಡಿತದಿಂದ ಆಮ್ಲಜನಕ ಅವಲಂಬಿತ ವೃದ್ಧೆ ಮೃತಪಟ್ಟಿರುವ ಘಟನೆ ಸ್ಥಳೀಯರಲ್ಲಿ ಆಕ್ರೋಶ ಹಾಗೂ ಆತಂಕಕ್ಕೆ ಕಾರಣವಾಗಿದೆ. ಇಂತಹ ತುರ್ತು ಆರೋಗ್ಯ ಪರಿಸ್ಥಿತಿಗಳಲ್ಲಿ ವಿದ್ಯುತ್ ಪೂರೈಕೆ ವ್ಯತ್ಯಯವಾದಾಗ ಪರ್ಯಾಯ ವ್ಯವಸ್ಥೆಗಳನ್ನು ಸಮರ್ಪಕವಾಗಿ ಕಲ್ಪಿಸುವ ಅಗತ್ಯದ ಬಗ್ಗೆಯೂ ಈ ಘಟನೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.



