ಶಿವಮೊಗ್ಗ: ವೇಗದ ಬದುಕು, ಹೆಚ್ಚುತ್ತಿರುವ ಸ್ಪರ್ಧೆ ಹಾಗೂ ಬದಲಾಗುತ್ತಿರುವ ಜೀವನಶೈಲಿಯ ನಡುವೆ ಒತ್ತಡ ಇಂದು ಯುವಜನತೆಯ ಬದುಕಿನ ಸಹಜ ಸಂಗಾತಿಯಂತಾಗಿದೆ. ಆದರೆ ಒತ್ತಡವನ್ನು ಬದುಕಿನ ಅಡೆತಡೆಯಾಗಿ ನೋಡುವ ಬದಲು, ಅದನ್ನು ಸಮರ್ಥವಾಗಿ ನಿರ್ವಹಿಸುವ ಕೌಶಲ್ಯವನ್ನು ಬೆಳೆಸಿಕೊಳ್ಳುವುದು ಅಗತ್ಯ ಎಂದು ವಿಧಾನಪರಿಷತ್ತಿನ ಸದಸ್ಯರಾದ ಡಾ. ಧನಂಜಯ ಸರ್ಜೀ ಹೇಳಿದರು.

ನಗರದ ಜೆ.ಎನ್.ಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಮಿಡ್ಟೌನ್ ಸಂಯುಕ್ತಾಶ್ರಯದಲ್ಲಿ ಮೂಲಭೂತ ಶಿಕ್ಷಣ ಮತ್ತು ಸಾಕ್ಷರತಾ ಮಾಸಾಚರಣೆಯ ಅಂಗವಾಗಿ ಬಿಇ ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಒತ್ತಡ ನಿರ್ವಹಣೆ ಕುರಿತ ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು.

ಇಂದಿನ ಯುವಜನತೆಯ ಜೀವನದಲ್ಲಿ ಮೊಬೈಲ್ ಅನಿವಾರ್ಯ ಸಾಧನವಾಗಿದ್ದರೂ, ಅದನ್ನು ಒತ್ತಡ ನಿವಾರಕವೆಂದು ಭಾವಿಸುವುದು ಸರಿಯಲ್ಲ. ಅತಿಯಾದ ಮೊಬೈಲ್ ಬಳಕೆಯೇ ಮಾನಸಿಕ ಒತ್ತಡವನ್ನು ಹೆಚ್ಚಿಸುವ ಸಾಧನವಾಗಬಹುದು ಎಂದು ಎಚ್ಚರಿಸಿದರು.

ಬೆಳಗ್ಗೆ ಎದ್ದ ನಂತರದ ಒಂದು ಗಂಟೆ ಹಾಗೂ ರಾತ್ರಿ ಮಲಗುವ ಮುನ್ನದ ಒಂದು ಗಂಟೆಯನ್ನು ಮೊಬೈಲ್ನಿಂದ ದೂರವಿಡುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ಇದರಿಂದ ಕುಟುಂಬ ಹಾಗೂ ಸ್ನೇಹಿತರೊಂದಿಗೆ ಬೆರೆಯಲು ಹೆಚ್ಚಿನ ಸಮಯ ದೊರೆಯಲಿದೆ.

ಮಾನಸಿಕ ನೆಮ್ಮದಿ ಹಾಗೂ ಮನಸ್ಸಿನ ಏಕಾಗ್ರತೆಗೆ ಯೋಗನಿದ್ರೆಯಂತಹ ಅಭ್ಯಾಸಗಳು ಪರಿಣಾಮಕಾರಿ. ಒತ್ತಡ ನಿರ್ವಹಣೆಯಲ್ಲಿ ಪ್ರಾರ್ಥನೆಯೂ ಮಹತ್ವದ ಪಾತ್ರ ವಹಿಸುತ್ತದೆ. ಪ್ರಾರ್ಥನೆಯ ಸಂದರ್ಭದಲ್ಲಿ ಮನುಷ್ಯ ಸಾಮಾನ್ಯವಾಗಿ ಒಳ್ಳೆಯದನ್ನೇ ಬಯಸುತ್ತಾನೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್, ರೋಟರಿ ಕ್ಲಬ್ ಶಿವಮೊಗ್ಗ ಮಿಡ್ಟೌನ್ ಅಧ್ಯಕ್ಷರಾದ ಡಾ. ಶ್ರೀಧರ ಎಸ್., ಕಾರ್ಯದರ್ಶಿ ಉಜ್ವಲಾ ರವಿ, ಸಂತೋಷ್, ಮಂಜುನಾಥ್, ಶಿಲ್ಪಾ ರಮೇಶ್ ಸೇರಿದಂತೆ ರೋಟರಿ ಕ್ಲಬ್ನ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.