ಶಿವಮೊಗ್ಗ: ಹೈವೇಯಲ್ಲಿ ಕಾರು-ದ್ವಿಚಕ್ರ ವಾಹನದ ನಡುವೆ ಭೀಕರ ಡಿಕ್ಕಿ; ಸ್ಥಳದಲ್ಲೇ ದಂಪತಿ ಸಾವು
ಶಿವಮೊಗ್ಗ: ನಗರದ ಶರಾವತಿ ನಗರ ಮೂರನೇ ಕ್ರಾಸ್ನ ಹಂದಿಗೊಲ್ಲರ ಕ್ಯಾಂಪ್ ನಿವಾಸಿಗಳಾದ ನವದಂಪತಿ ಭೀಕರ ರಸ್ತೆ ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟಿರುವ ಘಟನೆ ನಗರದ ಅನುಪಿನಕಟ್ಟೆ ಕ್ರಾಸ್ ಸಮೀಪ ನಡೆದಿದೆ.

ನಿನ್ನೆ ಸಂಜೆ ಸುಮಾರು 4.30ರ ವೇಳೆಗೆ ಕಿರಣ್ (28) ಹಾಗೂ ಅವರ ಪತ್ನಿ ಸೌಮ್ಯ (22) ಅವರು ಎಕ್ಸೆಸ್ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ವೇಳೆ, ಹೈವೇಯಲ್ಲಿ ಬರುತ್ತಿದ್ದ ಡಸ್ಟರ್ ಕಾರು ಇವರ ವಾಹನಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ತೀವ್ರತೆಗೆ ದಂಪತಿ ರಸ್ತೆಗೆ ಬಿದ್ದು ಗಂಭೀರವಾಗಿ

ಗಾಯಗೊಂಡಿದ್ದು, ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತ ಕಿರಣ್ ಅವರು ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಲೋಡರ್ಸ್ ಆಗಿ ಕೆಲಸ ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ವಿಶೇಷವೆಂದರೆ, ಕಿರಣ್ ಮತ್ತು ಸೌಮ್ಯ ದಂಪತಿಗೆ ಕೇವಲ ಎರಡು ತಿಂಗಳ ಹಿಂದಷ್ಟೇ ವಿವಾಹವಾಗಿತ್ತು. ಹೊಸ ಜೀವನದ ಕನಸುಗಳೊಂದಿಗೆ

ಬದುಕು ಕಟ್ಟಿಕೊಳ್ಳುತ್ತಿದ್ದ ಯುವ ದಂಪತಿಯ ದುರಂತ ಅಂತ್ಯ ಕುಟುಂಬಸ್ಥರು ಹಾಗೂ ಸ್ಥಳೀಯರಲ್ಲಿ ತೀವ್ರ ದುಃಖ ಮೂಡಿಸಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.