ಶಿವಮೊಗ್ಗ: ಅ.08: ನವರಾತ್ರಿ ಉತ್ಸವ ಸಂದರ್ಭದಲ್ಲಿ ವಿದ್ಯುತ್ ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಹಾಗೂ ವಿದ್ಯುತ್ ಅವಘಡಗಳಿಗೆ ಆಸ್ಪದವಾಗದಂತೆ ಈ ಕೆಳಕಾಣಿಸಿದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಮೆಸ್ಕಾಂ) ತಿಳಿಸಿದೆ.

ದಸರಾ / ನವರಾತ್ರಿ ಉತ್ಸವ ಆಚರಣೆ ಸಂದರ್ಭದಲ್ಲಿ ವಿದ್ಯುತ್ ಲೈನ್ಗಳಿಂದ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆಯಬಾರದು. ಸಂಬಂಧಪಟ್ಟ ಮೆಸ್ಕಾಂ ಉಪವಿಭಾಗ ಅಥವಾ ಶಾಖಾ ಕಚೇರಿಗೆ ತೆರಳಿ ಅನುಮತಿ ಪಡೆಯಬೇಕು. ವಿಗ್ರಹ ಪ್ರತಿಷ್ಠಾಪನೆ ಮಾಡುವ ಸ್ಥಳದ ಸುತ್ತಮುತ್ತ ಯಾವುದೇ ವಿದ್ಯುತ್ ಮಾರ್ಗಗಳಿಲ್ಲದಿರುವುದನ್ನು ಖಚಿತಪಡಿಸಿಕೊಳ್ಳಬೇಕು. ವಿದ್ಯುತ್ ಲೈನ್ನ ಕೆಳಗೆ ಅಥವಾ ಅಕ್ಕಪಕ್ಕದಲ್ಲಿ

ಪೆಂಡಾಲ್ ಅಥವಾ ಶಾಮಿಯಾನ ಹಾಕಬಾರದು. ಸುರಕ್ಷತೆಯ ಅಂತರವನ್ನು ಕಾಯ್ದುಕೊಂಡು ಪೆಂಡಾಲ್, ಶಾಮಿಯಾನ ಹಾಕಬೇಕು.
ವಿದ್ಯುತ್ ಕಂಬಗಳು, ವಿದ್ಯುತ್ ಪರಿವರ್ತಕಗಳಿಗೆ ಬ್ಯಾನರ್ ಮತ್ತು ಫಲಕಗಳನ್ನು ಕಟ್ಟಬಾರದು. ವಿಗ್ರಹ ವಿಸರ್ಜನೆ ದಿನವೂ ಅಗತ್ಯ

ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಶೋಭಾಯಾತ್ರೆ ವಾಹನಗಳಿಗೆ ವಿದ್ಯುತ್ ತಂತಿಗಳು ತಾಗುವ ರೀತಿಯಲ್ಲಿ ಅತೀ ಎತ್ತರದ ಧ್ವಜ ಅಥವಾ ಇತರ ಅಲಂಕಾರಿಕ ಸಾಧನಗಳನ್ನು ಕಟ್ಟಬಾರದು. ವಿದ್ಯುತ್ ಅವಘಡಗಳನ್ನು ತಪ್ಪಿಸಲು ಹೆಚ್ಚಿನ ಜಾಗ್ರತೆ ವಹಿಸುವುದು ಅತ್ಯಗತ್ಯ.

ವಿಗ್ರಹಗಳ ವಿಸರ್ಜನಾ ಮೆರವಣಿಗೆ ನಡೆಯುವ ಬೀದಿಗಳಲ್ಲಿ ವಿದ್ಯುತ್ ಲೈನ್ಗಳ ಅಡಚಣೆ ಇದ್ದಲ್ಲಿ ಸಂಬಂಧಿಸಿದ ಮೆಸ್ಕಾಂ ಕಚೇರಿಯ ಗಮನಕ್ಕೆ ತರಬೇಕು. ಅಂತಹ ವಿದ್ಯುತ್ ಮಾರ್ಗಗಳಲ್ಲಿ ವಿದ್ಯುತ್ ಪೂರೈಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ವಿಸರ್ಜನಾ ಮೆರವಣಿಗೆಗೆ ಅನುಕೂಲ ಮಾಡಿಕೊಡಲು ಮೆಸ್ಕಾಂ ಸಿದ್ಧವಿದೆ.

ಯಾವುದೇ ವಿದ್ಯುತ್ ಅವಘಡಗಳು ಸಂಭವಿಸಿದಲ್ಲಿ ತುರ್ತು ಸಹಾಯಕ್ಕಾಗಿ ದೂರವಾಣಿ ಸಂಖ್ಯೆ 8277883388 ಅಥವಾ 0824-2950953, ಅಥವಾ ಮೆಸ್ಕಾಂ ಸಹಾಯವಾಣಿ 1912 ಸಂಪರ್ಕಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.