ಶಿವಮೊಗ್ಗ: ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಹಾಗೂ ಸಾರ್ವಜನಿಕರ ಸುರಕ್ಷತೆಯನ್ನು ಮತ್ತಷ್ಟು ಬಿಗಿಗೊಳಿಸುವ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸರು ಡ್ರೋನ್ ಕ್ಯಾಮರಾಗಳ ಮೂಲಕ ರಾತ್ರಿ ಗಸ್ತು ಆರಂಭಿಸಿದ್ದಾರೆ

.
ನಗರದ ಪ್ರಮುಖ ಸ್ಥಳಗಳು, ಪ್ರಮುಖ ರಸ್ತೆ ಪ್ರದೇಶಗಳು ಹಾಗೂ ಸೂಕ್ಷ್ಮ ಸ್ಥಳಗಳ ಮೇಲೆ ರಾತ್ರಿ ವೇಳೆ ಡ್ರೋನ್ ಹಾರಾಟ ನಡೆಸಿ ಪೊಲೀಸರು ನಿರಂತರವಾಗಿ ನಿಗಾ ವಹಿಸುತ್ತಿದ್ದಾರೆ. ನೆಲಮಟ್ಟದಲ್ಲಿ ನಡೆಯುವ ಪೊಲೀಸ್ ಗಸ್ತಿನ ಜೊತೆಗೆ ಇದೀಗ ಆಕಾಶ ಮಾರ್ಗದಿಂದಲೂ ಕಣ್ಗಾವಲು ನಡೆಸಲಾಗುತ್ತಿದೆ.

ರಾತ್ರಿ ವೇಳೆ ಅನುಮಾನಾಸ್ಪದವಾಗಿ ಓಡಾಡುವವರು, ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗುವವರು ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವವರ ಮೇಲೆ ಪೊಲೀಸ್ ಇಲಾಖೆ ವಿಶೇಷ ಗಮನ ಹರಿಸಿದೆ.

ಡ್ರೋನ್ ಕ್ಯಾಮರಾದಿಂದ ಪ್ರಮುಖ ಪ್ರದೇಶಗಳ ಚಲನವಲನಗಳನ್ನು ಮೇಲಿನಿಂದಲೇ ಗಮನಿಸಲು ಸಾಧ್ಯವಾಗುತ್ತಿದ್ದು, ಅಗತ್ಯ ಸಂದರ್ಭದಲ್ಲಿ ಸ್ಥಳೀಯ ಪೊಲೀಸ್ ಸಿಬ್ಬಂದಿಗೆ ಮಾಹಿತಿ ರವಾನಿಸಿ ತ್ವರಿತ ಕ್ರಮ ಕೈಗೊಳ್ಳಲು ಅನುಕೂಲವಾಗಲಿದೆ.

ಶಿವಮೊಗ್ಗ ನಗರದಲ್ಲಿ ರಾತ್ರಿ ಸಮಯದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವವರಿಗೆ ಈಗ ನೆಲದಿಂದ ಮಾತ್ರವಲ್ಲ… ಆಕಾಶದಿಂದಲೂ ಪೊಲೀಸರ ಕಣ್ಗಾವಲು!

ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಿರುವ ಜಿಲ್ಲಾ ಪೊಲೀಸ್ ಇಲಾಖೆ, ಅನುಮಾನಾಸ್ಪದ ಚಟುವಟಿಕೆ ಕಂಡುಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.