ಶಿವಮೊಗ್ಗ: ಈಗ 2 ದಿನಗಳ ಹಿಂದೆ ಬೆಂಗಳೂರಿನ ವಿಜಯನಗರದ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ನಡೆದ ವೀರಶೈವ ಲಿಂಗಾಯತ ಧರ್ಮ ಸಂರಕ್ಷಣಾ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ತಮ್ಮ ಭಾಷಣದ ಸಂದರ್ಭದಲ್ಲಿ ಆಡಿರುವ ಕೆಲವು ಮಾತಗಳ ಬಗ್ಗೆ ಭಕ್ತರಲ್ಲಿ ಅಸಮಾಧಾನ ಮೂಡಿದ್ದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಎಲ್ಲ ಗುರುಗಳಲ್ಲಿ ಕ್ಷಮೆ ಕೇಳಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿಗಳ ಭಾಷಣದ ತುಣುಕನ್ನು ತಮ್ಮ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಭಾಷಣದ ಭರದಲ್ಲಿ ಮುಖ್ಯಮಂತ್ರಿಗಳು ಆಡಿರುವ ಮಾತುಗಳು ಭಕ್ತರ ಭಾವನೆಗೆ ನೋವನ್ನು ಉಂಟುಮಾಡಿದೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಇತ್ತೀಚಿಗೆ ಬೆಂಗಳೂರಿನಲ್ಲಿ, ಪಂಚಪೀಠ ಸ್ವಾಮೀಜಿಗಳ ಸಮಕ್ಷಮದಲ್ಲಿ, ನೂರಾರು ಶಿವಾಚಾರ್ಯರ ಉಪಸ್ಥಿತಿಯಲ್ಲಿ ನಡೆದ ವೀರಶೈವ ಲಿಂಗಾಯತ ಧರ್ಮ ಸಂರಕ್ಷಣಾ ಸಮ್ಮೇಳನದಲ್ಲಿ, ವೀರಶೈವ-ಲಿಂಗಾಯತ ಮಠಾಧೀಶರ ಕುರಿತು ಆಡಿರುವ ಕೆಲವು ಮಾತುಗಳನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಶತಮಾನಗಳಿಂದ ಜ್ಞಾನ, ಶಿಕ್ಷಣ, ದಾಸೋಹ, ಸಂಸ್ಕಾರ ಮತ್ತು ಸಮಾಜ ಸೇವೆಯ ಮೂಲಕ ಕೋಟ್ಯಂತರ ಜನರಿಗೆ ದಾರಿ ತೋರಿದ ಹರ-ಗುರು-ಚರ ಮೂರ್ತಿಗಳ ಕುರಿತು ಮಾತನಾಡುವಾಗ ರಾಜ್ಯದ ಮುಖ್ಯಮಂತ್ರಿಗಳ ಸ್ಥಾನದ ಘನತೆಯ ಜೊತೆಗೆ ಸ್ವಾಮೀಜಿಗಳ ಸ್ಥಾನಕ್ಕೆ ತಕ್ಕ ಗೌರವ ಮತ್ತು ಮಾತುಗಳಲ್ಲಿ ಸಂಯಮವನ್ನು ಕಾಯ್ದುಕೊಳ್ಳಬೇಕಿತ್ತು. ಎಲ್ಲಾ ಪೂಜ್ಯ ಮಠಾಧೀಶರ, ಹರ ಚರ ಮೂರ್ತಿಗಳ ಸ್ಥಾನಕ್ಕೆ ಧಕ್ಕೆ ತರುವ ಮಾತುಗಳು ವೀರಶೈವ-ಲಿಂಗಾಯತ ಸಮಾಜದ ಭಾವನೆಗಳಿಗೆ ನೋವುಂಟುಮಾಡಿವೆ ಎಂದು ಸಂಸದರು ಹೇಳಿಕೊಂಡಿದ್ದಾರೆ.

ನಮ್ಮ ಸಂಸ್ಕೃತಿಯಲ್ಲಿ ಗುರುಗಳಾಗಲಿ, ಮಠಾಧೀಶರಾಗಲಿ ಅಧಿಕಾರದ ಮುಂದೆ ತಲೆಬಾಗುವವರಲ್ಲ. ಅವರನ್ನು ನಿಮ್ಮ ರಾಯಭಾರಿಗಳೆನ್ನುವುದು, ನಿಮ್ಮ ಸೇವೆ ಮಾಡಬೇಕು, ಆಗ ಮಾತ್ರ ನಿಮ್ಮ ಅಭಿವೃದ್ಧಿ, ನಿಮ್ಮ ಮುಕ್ತಿ ಎನ್ನುವಂತಹ ಮಾತುಗಳು ಯಾವ ಸನ್ನಿವೇಶ, ಪ್ರಸಂಗದಲ್ಲೂ ಕೂಡ ಸರಿಯಾದ ಮಾತುಗಳಲ್ಲ. ಅದರಲ್ಲೂ ಸಂತರ ಬಗ್ಗೆ, ಸ್ವಾಮೀಜಿಗಳ ಬಗ್ಗೆ ನಿಮ್ಮ ಮಾತುಗಳನ್ನು ಯಾರೂ ಕೂಡ ಒಪ್ಪಲು ಸಾಧ್ಯವಿಲ್ಲ ಎಂದಿರುವ ಅವರು ವಿಶ್ವಗುರು ಬಸವಣ್ಣನವರು, “ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ” ಎಂದು ಹೇಳಿದ್ದಾರೆ. ಇದು ಕೇವಲ ವಚನವಲ್ಲ, ಸಾರ್ವಜನಿಕ ಜೀವನದಲ್ಲಿರುವ ಪ್ರತಿಯೊಬ್ಬರೂ ಪಾಲಿಸಬೇಕಾದ ಸಂಸ್ಕಾರದ ಪಾಠವಾಗಿದೆ.
ರಾಜಕೀಯ ಅಧಿಕಾರವಾಗಲಿ, ಅದರ ಜೊತೆಗೆ ಬರುವ ಸ್ಥಾನಮಾನವಾಗಲಿ ಶಾಶ್ವತವಲ್ಲ, ಆದರೆ ಕೋಟ್ಯಂತರ ಭಕ್ತರ ಧಾರ್ಮಿಕ ಶ್ರದ್ಧಾಕೇಂದ್ರ, ಸಮಾಜಕ್ಕೆ ದಾರಿ ತೋರುವ ನಮ್ಮ ಮಠ-ಮಾನ್ಯಗಳು ಮತ್ತು ಆ ಪೀಠಗಳ ಪೂಜ್ಯ ಮಠಾಧೀಶರ ಮೇಲಿನ ಜನರ ಗೌರವ ಶಾಶ್ವತ. ಶತ ಶತಮಾನಗಳಿಂದ ಸಮಾಜಕ್ಕೆ ಜ್ಞಾನ, ಶಿಕ್ಷಣ, ದಾಸೋಹ, ಸಂಸ್ಕಾರ ಮತ್ತು ಮಾನವೀಯತೆಯ ದಾರಿ ತೋರಿಸುತ್ತಿರುವ ಪೂಜ್ಯರು ಬಗ್ಗೆ, ಹರ-ಗುರು-ಚರ ಮೂರ್ತಿಗಳ ಬಗ್ಗೆ, ಸಾರ್ವಜನಿಕ ವೇದಿಕೆಯ ಮೇಲೆ, ಅವರ ಸನ್ನಿಧಾನಕ್ಕೆ, ಗೌರವಕ್ಕೆ ಧಕ್ಕೆ ತರುವ ರೀತಿಯ, ಬಾಯಿತಪ್ಪಿ ನುಡಿದಿರಬಹುದಾದ ಮಾತುಗಳಿಗೆ, ಎಲ್ಲ ಗುರುಗಳಲ್ಲಿ ಕ್ಷಮೆ ಕೇಳಿ ಎಂದು ಈ ಮೂಲಕ ಸಮಸ್ತ ಭಕ್ತರ ಪರವಾಗಿ ತಮ್ಮಲ್ಲಿ ಆಗ್ರಹಪೂರ್ವಕವಾಗಿ ವಿನಂತಿಸಿಕೊಳ್ಳುತ್ತೇನೆ ಎಂದು ಅವರು ಹೇಳಿದ್ದಾರೆ.