ಶಿವಮೊಗ್ಗ: ನಗರದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಅ.3 ಮತ್ತು 4ರಂದು 14 ಹಾಗೂ 17 ವರ್ಷದೊಳಗಿನ ಶಾಲಾ ಬಾಲಕ–ಬಾಲಕಿಯರ ರಾಜ್ಯಮಟ್ಟದ ಬಾಕ್ಸಿಂಗ್ ಪಂದ್ಯಾವಳಿ ನಡೆಯಲಿದೆ ಎಂದು ಜಿಲ್ಲಾ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ಅಧ್ಯಕ್ಷ ಶಿವಮೊಗ್ಗ ವಿನೋದ್ ತಿಳಿಸಿದರು.
ಪತ್ರಿಕಾ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಶಿವಮೊಗ್ಗ ಜಿಲ್ಲಾ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ಸಹಯೋಗದಲ್ಲಿ ಪಂದ್ಯಾವಳಿ ಆಯೋಜಿಸಲಾಗಿದೆ. ಶಾಲಾ ಶಿಕ್ಷಣ ಇಲಾಖೆಯ ರಾಜ್ಯಮಟ್ಟದ ಬಾಕ್ಸಿಂಗ್ ಪಂದ್ಯಾವಳಿ ಶಿವಮೊಗ್ಗದಲ್ಲಿ ನಡೆಯುತ್ತಿರುವುದು ಇದು ಎರಡನೇ ಬಾರಿ ಎಂದರು.

ಅ.3ರಂದು ಬೆಳಿಗ್ಗೆ 9.30ಕ್ಕೆ ಪಂದ್ಯಾವಳಿಯ ಉದ್ಘಾಟನಾ ಸಮಾರಂಭ ನಡೆಯಲಿದೆ. ಇಲಾಖೆಯ ಪ್ರೋಟೋಕಾಲ್ ಅನ್ವಯ ಅತಿಥಿಗಳನ್ನು ಆಹ್ವಾನಿಸಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಕ್ರೀಡಾಪಟುಗಳು ರಾಜ್ಯಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ ಎಂದರು.

ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯುವ ಕ್ರೀಡಾಪಟುಗಳು ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ (SGFI) ಆಯೋಜಿಸುವ ರಾಷ್ಟ್ರಮಟ್ಟದ ಪಂದ್ಯಾವಳಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ. ಅಂಡರ್–14 ರಾಷ್ಟ್ರಮಟ್ಟದ ಪಂದ್ಯಾವಳಿ ದೆಹಲಿಯಲ್ಲಿ ಹಾಗೂ ಅಂಡರ್–17 ರಾಷ್ಟ್ರಮಟ್ಟದ ಪಂದ್ಯಾವಳಿ ಮಣಿಪುರದ ಇಂಫಾಲ್ನಲ್ಲಿ ನಡೆಯಲಿದೆ ಎಂದರು.
ರಾಷ್ಟ್ರಮಟ್ಟದಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಸರ್ಕಾರದಿಂದ ಕ್ರೀಡಾ ಕೋಟಾ, ವಿದ್ಯಾರ್ಥಿವೇತನ ಸೇರಿದಂತೆ ಇತರೆ ಸೌಲಭ್ಯಗಳು ದೊರೆಯಲಿವೆ. ರಾಜ್ಯಮಟ್ಟದಲ್ಲಿ ವಿಜೇತರಾದವರಿಗೂ ಸರ್ಕಾರದ ಕೆಲವು ಸೌಲಭ್ಯಗಳು ಲಭ್ಯವಾಗಲಿವೆ ಎಂದರು.

11, 13 ಮತ್ತು 15 ತೂಕ ವಿಭಾಗಗಳು
ಅಂಡರ್–14 ಬಾಲಕರ ವಿಭಾಗದಲ್ಲಿ 11 ತೂಕ ವಿಭಾಗಗಳು, ಅಂಡರ್–17 ಬಾಲಕರ ವಿಭಾಗದಲ್ಲಿ 13 ಹಾಗೂ ಅಂಡರ್–17 ಬಾಲಕಿಯರ ವಿಭಾಗದಲ್ಲಿ 15 ತೂಕ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಅಂಡರ್–14 ಬಾಲಕಿಯರ ವಿಭಾಗ ಇರುವುದಿಲ್ಲ. ಶಿವಮೊಗ್ಗ ಜಿಲ್ಲೆಯಿಂದ ವಿವಿಧ ತೂಕ ವಿಭಾಗಗಳಲ್ಲಿ 30 ವಿದ್ಯಾರ್ಥಿಗಳು ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ ಎಂದರು.

ಕರ್ನಾಟಕ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ನ ಅರ್ಹತೆ ಪಡೆದ 15 ತೀರ್ಪುಗಾರರು ಪಂದ್ಯಾವಳಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಶಿವಮೊಗ್ಗದ ಪ್ರೀತಿ ಶ್ರೀ ಹಾಗೂ ಮಲ್ಲಿಕಾರ್ಜುನ ಅವರೂ ತೀರ್ಪುಗಾರರಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದರು.
ಸ್ಪರ್ಧಿಗಳಿಗೆ ವಸತಿ ವ್ಯವಸ್ಥೆಯನ್ನು ಶಾಲಾ ಶಿಕ್ಷಣ ಇಲಾಖೆ ಮಾಡಿದ್ದು, ಎರಡು ದಿನ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಶಿವಮೊಗ್ಗ ಜಿಲ್ಲಾ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ವತಿಯಿಂದ ಮಾಡಲಾಗಿದೆ. ಪ್ರಥಮ ಚಿಕಿತ್ಸಾ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಅ.2ರಂದು ಸಂಜೆ 4ರಿಂದ ರಾತ್ರಿ 9.30ರವರೆಗೆ ನೋಂದಣಿ ನಡೆಯಲಿದೆ ಎಂದರು.

ಪಂದ್ಯಾವಳಿಯಲ್ಲಿ ಭಾಗವಹಿಸುವ ಎಲ್ಲ ಸ್ಪರ್ಧಿಗಳು ತಮ್ಮ ಸ್ವಂತ ಸಮವಸ್ತ್ರ ಹಾಗೂ ಬಾಕ್ಸಿಂಗ್ ಪರಿಕರಗಳನ್ನು ಕಡ್ಡಾಯವಾಗಿ ತರಬೇಕು ಎಂದರು.
ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ, ಕಾರ್ಯದರ್ಶಿ ಅನೂಪ್ ಆರ್ ಶೇಖರ್, ಸಹಕಾರ್ಯದರ್ಶಿ ಹೆಚ್. ಎಲ್. ಶ್ರೇಯಸ್, ರಾಜ್ಯ ತೀರ್ಪುಗಾರ ಮಲ್ಲಿಕಾರ್ಜುನ ಇದ್ದರು.